Starbucks ಸಾರಥ್ಯ ವಹಿಸಿದ ಭಾರತೀಯ;ಅಧಿಕೃತವಾಗಿ ಸಿಇಒ ಪಟ್ಟ ಅಲಂಕರಿಸಿದ ಲಕ್ಷ್ಮಣ್ ನರಸಿಂಹನ್

By Suvarna NewsFirst Published Mar 21, 2023, 1:19 PM IST
Highlights

ಜಗತ್ತಿನಾದ್ಯಂತ ಕಾಫಿ ಕೆಫೆ ಸರಪಳಿ ಹೊಂದಿರುವ ಸ್ಟಾರ್ ಬಕ್ಸ್ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್  ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇವರ ನೇಮಕದ ಬಗ್ಗೆ ಕಳೆದ ಸೆಪ್ಟೆಂಬರ್ ನಲ್ಲಿ ಸ್ಟಾರ್ ಬಕ್ಸ್ ಮಾಹಿತಿ ನೀಡಿತ್ತು. 
 

ವಾಷಿಂಗ್ಟನ್ (ಮಾ.21): ಜಗತ್ತಿನ ಅತೀದೊಡ್ಡ ಕಾಫಿ ಕೆಫೆ ಸರಪಳಿ ಹೊಂದಿರುವ ಸ್ಟಾರ್ ಬಕ್ಸ್  ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ (ಸಿಇಒ)  ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ಸೋಮವಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ ಭಾರತೀಯ ಮೂಲದ ವ್ಯಕ್ತಿಗಳ ಸಾಲಿಗೆ ಲಕ್ಷ್ಮಣ್ ನರಸಿಂಹನ್ ಸೇರ್ಪಡೆಗೊಂಡಿದ್ದಾರೆ. ನರಸಿಂಹನ್ ಅವರನ್ನು ಕಂಪನಿಯ ಮುಂದಿನ ಸಿಇಒ ಹಾಗೂ ನಿರ್ದೇಶಕರ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಕಳೆದ ಸೆಪ್ಟೆಂಬರ್ ನಲ್ಲಿ ಸ್ಟಾರ್ ಬಕ್ಸ್ ಘೋಷಿಸಿತ್ತು.  ನರಸಿಂಹನ್ ಅಕ್ಟೋಬರ್ 1, 2022ರಂದು ಸ್ಟಾರ್ ಬಕ್ಸ್ ಗೆ ಸೇರ್ಪಡೆಗೊಂಡಿದ್ದರು. ಇದಕ್ಕಾಗಿ ಅವರು ಲಂಡನ್ ನಿಂದ ಸಿಟ್ಟಲ್ ಗೆ ಸ್ಥಳಾಂತರಗೊಂಡಿದ್ದರು ಕೂಡ. ಸ್ಟಾರ್ ಬಕ್ಸ್‌ಗೆ ಸೇರ್ಪಡೆಗೊಳ್ಳುವ ಮುನ್ನ ಲಕ್ಷ್ಮಣ್, ಡುರೆಕ್ಸ್ ಕಾಂಡೋಮ್ಸ್ , ಎನ್ಫ್ಯಾಮಿಲ್ ಬೇಬಿ ಫಾರ್ಮುಲಾ ಹಾಗೂ ಮುಸಿನೆಕ್ಸ್ ಶೀತದ ಸಿರಫ್ ಉತ್ಪಾದಿಸುವ ರೆಕ್ಕಿಟ್ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ನರಸಿಂಹನ್ ಕಂಪನಿಯ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿರುವ ಬಗ್ಗೆ ಸ್ಟಾರ್ ಬಕ್ಸ್ ಹೇಳಿಕೆ ಬಿಡುಗಡೆ ಮಾಡಿದೆ ಕೂಡ.

'ಇಂದಿನಿಂದ ಅನ್ವಯಿಸುವಂತೆ ಲಕ್ಷ್ಮಣ್ ನರಸಿಂಹನ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ (ಸಿಇಒ) ಹುದ್ದೆಯನ್ನು ಅಲಂಕರಿಸಲಿದ್ದಾರೆ ಹಾಗೂ ಕಂಪನಿಯ ನಿರ್ದೇಶಕರುಗಳ ಮಂಡಳಿಗೆ ಸೇರ್ಪಡೆಗೊಳ್ಳಲಿದ್ದಾರೆ' ಎಂದು ಸ್ಟಾರ್ ಬಕ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮಾ.23ರಂದು ನಡೆಯಲಿರುವ ಸ್ಟಾರ್ ಬಕ್ಸ್ ಷೇರುದಾರರ ವಾರ್ಷಿಕ ಸಭೆಯನ್ನು ನರಸಿಂಹನ್ ಮುನ್ನಡೆಸಲಿದ್ದಾರೆ. 'ನರಸಿಂಹನ್ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಂತೆ ತಂಡದ ನಾಯಕತ್ವ ವಹಿಸಲಿದ್ದಾರೆ. ತಮ್ಮ ಈ ಹಿಂದಿನ ಕಲಿಕೆಗಳು ಹಾಗೂ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ಕಂಪನಿಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸಲಿದ್ದಾರೆ' ಎಂದು ಸ್ಟಾರ್ ಬಕ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಟಾಟಾ ಕುಟುಂಬದ ಈ ಸೊಸೆ ಬಹುಕೋಟಿ ಕಿರ್ಲೋಸ್ಕರ್ ಸಮೂಹ ಸಂಸ್ಥೆ ಉತ್ತರಾಧಿಕಾರಿ

ಕಳೆದ ಐದು ತಿಂಗಳಲ್ಲಿ ನರಸಿಂಹನ್ ಕಂಪನಿಯ ಕಾರ್ಯನಿರ್ವಹಣೆ ಹಾಗೂ ಹೊಸ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. 30ಕ್ಕೂ ಅಧಿಕ ಮಳಿಗೆಗಳು, ಉತ್ಪಾದನಾ ಘಟಕಗಳು ಹಾಗೂ ಜಗತ್ತಿನಾದ್ಯಂತ ಇರುವ ಸಪೋರ್ಟ್ ಸೆಂಟರ್ ಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿ ಜೊತೆಗೆ ಕಾರ್ಯನಿರ್ವಹಿಸಿದ್ದಾರೆ ಎಂದು ಸ್ಟಾರ್ ಬಕ್ಸ್ ತಿಳಿಸಿದೆ. 

ನರಸಿಂಹನ್ ಅವರು ಜಾಗತಿಕ ಕನ್ಸ್ಯುಮರ್ ಗೂಡ್ಸ್ ಬ್ಯುಸಿನೆಸ್ ಹಾಗೂ ರಿಟೇಲ್ , ಗ್ರೋಸರಿ, ರೆಸ್ಟೋರೆಂಟ್ ಹಾಗೂ ಇ-ಕಾಮರ್ಸ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿರುವ 30 ವರ್ಷಗಳ ಅನುಭವ ಹೊಂದಿದ್ದಾರೆ. 'ಸ್ಟಾರ್ ಬಕ್ಸ್ ಸಿಇಒಆಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ. 4,50,000ಕ್ಕೂ ಅಧಿಕ ಗ್ರೀನ್ ಏಪ್ರನ್ ಪಾರ್ಟನರ್ ಗಳನ್ನು ಹೊಂದಿರುವ ತಂಡವನ್ನು ಮುನ್ನಡೆಸಲು ಸಂತಸವಾಗುತ್ತಿದೆ' ಎಂದು ನರಸಿಂಹನ್ ಕಂಪನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಲಕ್ಷ್ಮಣ್ ನರಸಿಂಹನ್ 2019 ರ ಸೆಪ್ಟೆಂಬರ್ ನಲ್ಲಿ ರೆಕ್ಕಿಟ್ ಕಂಪನಿಗೆ ಸೇರ್ಪಡೆಗೊಂಡಿದ್ದರು. ಕೋವಿಡ್ ಸಂದರ್ಭದಲ್ಲಿ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆ ಕೂಡ ಇವರಿಗಿದೆ. ಈ ಸಮಯದಲ್ಲಿ ರೆಕ್ಕಿಟ್ ಸಂಸ್ಥೆಯ ಆರೋಗ್ಯ ಹಾಗೂ ನೈರ್ಮಲ್ಯದ  ಉತ್ಪನ್ನಗಳ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿತ್ತು.55 ವರ್ಷದ ಲಕ್ಷ್ಮಣ್ ನರಸಿಂಹನ್ ರೆಕ್ಕಿಟ್ ಸಂಸ್ಥೆಗೆ ಸೇರುವ ಮುನ್ನ ಪೆಪ್ಸಿಕೋದಲ್ಲಿ ಜಾಗತಿಕ ಮುಖ್ಯ ವಾಣಿಜ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಕನ್ಸಲ್ಟಿಂಗ್ ಸಂಸ್ಥೆ ಮೆಕ್ ಕಿನ್ಸೆ ಹಾಗೂ ಕೋನಲ್ಲಿ ಕೂಡ ಹಿರಿಯ ಪಾಲುದಾರರಾಗಿ ನರಸಿಂಹನ್ ಕಾರ್ಯನಿರ್ವಹಿಸಿದ್ದರು. ಇಲ್ಲಿ ಅವರು ಅಮೆರಿಕ ಹಾಗೂ ಭಾರತದಲ್ಲಿ ಗ್ರಾಹಕ, ಚಿಲ್ಲರೆ ಹಾಗೂ ತಂತ್ರಜ್ಞಾನ ಅಭ್ಯಾಸಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದರು. 

'ಇದೇ ಲಾಸ್ಟು..' ಅಂದ್ಕೊಂಡು 92ನೇ ವರ್ಷದಲ್ಲಿ ಐದನೇ ಬಾರಿ ಮದುವೆಯಾದ ರುಪರ್ಟ್‌ ಮುರ್ಡೋಕ್‌!

ಪುಣೆ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ನರಸಿಂಹನ್, ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ಲೌಡರ್ ಇನ್ಸಿಟಿಟ್ಯೂಟ್ ನಿಂದ ಜರ್ಮನ್ ಹಾಗೂ ಅಂತಾರಾಷ್ಟ್ರೀಯ ಅಧ್ಯಯನದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ. ಹಾಗೆಯೇ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ದಿ ವಾರ್ಟನ್ ಸ್ಕೂಲ್ ನಿಂದ ಫೈನಾನ್ಸ್ ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
 

click me!