
ನವದೆಹಲಿ(ಏ.01): ಏ.1ರಿಂದ ಜಾರಿಯಾಗಬೇಕಿದ್ದ ‘ಆಟೋ ಪೇಮೆಂಟ್’ ಕುರಿತ ಹೊಸ ನಿಯಮವನ್ನು ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ) ಸದ್ಯಕ್ಕೆ ಕೈಬಿಟ್ಟಿದ್ದು, ಬ್ಯಾಂಕುಗಳು ಹಾಗೂ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ. ಸೆ.30ರವರೆಗೂ ಹಳೆಯ ನಿಯಮವೇ ಅನ್ವಯಿಸಲಿದೆ ಎಂದು ಆರ್‌ಬಿಐ ಆದೇಶ ಹೊರಡಿಸಿದೆ. ಅಂದರೆ, ಏ.1ರಿಂದ ಏರುಪೇರಾಗುವ ಸಾಧ್ಯತೆಯಿದ್ದ ಆಟೋ ಪೇಮೆಂಟ್ ಸೌಲಭ್ಯ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.
‘ಆದರೆ ಏ.1ರಂದು ಜಾರಿ ಮಾಡಬೇಕು ಎಂಬ ನಮ್ಮ ಆದೇಶವನ್ನು ಬ್ಯಾಂಕುಗಳು ಪಾಲಿಸಿಲ್ಲ. ಇನ್ನು ಮುಂದೆ ಹೀಗಾಗಕೂಡದು. ಪುನರಾವರ್ತನೆ ಆದರೆ ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಆರ್‌ಬಿಐ ಎಚ್ಚರಿಸಿದೆ.
ಇಂಟರ್ನೆಟ್ ಬ್ಯಾಂಕಿಂಗ್, ಯುಪಿಐ ಹಾಗೂ ಪೇಮೆಂಟ್ ಬ್ಯಾಂಕ್‌ಗಳ ಮೂಲಕ ಜನರು ಮೊಬೈಲ್ ಬಿಲ್, ವಿದ್ಯುತ್ ಬಿಲ್, ನೀರಿನ ಬಿಲ್, ಒಟಿಟಿ ಶುಲ್ಕ ಇತ್ಯಾದಿಗಳು ಪ್ರತಿ ತಿಂಗಳು ತನ್ನಿಂತಾನೇ ಪಾವತಿಯಾಗುವಂತೆ ಮಾಡಿಟ್ಟಿರುತ್ತಾರೆ. ಇದಕ್ಕೆ ಏ.1ರಿಂದ ಬ್ಯಾಂಕುಗಳು ಮೊದಲೇ ಗ್ರಾಹಕರಿಂದ ಅನುಮತಿ ಪಡೆದಿರಬೇಕೆಂದೂ, 5000 ರು.ಗಿಂತ ಹೆಚ್ಚಿನ ಪಾವತಿಗೆ ಒಟಿಪಿ ವ್ಯವಸ್ಥೆ ತರಬೇಕೆಂದೂ ಆರ್‌ಬಿಐ ನಿಯಮ ಜಾರಿಗೊಳಿಸಿತ್ತು. ಅದಕ್ಕೆ ಯಾವುದೇ ಬ್ಯಾಂಕುಗಳು ಸಿದ್ಧತೆ ಮಾಡಿಕೊಂಡಿರಲಿಲ್ಲ. ಹೀಗಾಗಿ ಏ.1ರಿಂದ ಆಟೋ ಪೇಮೆಂಟ್‌ಗಳು ವ್ಯತ್ಯಯವಾಗಬಹುದು ಎಂಬ ಆತಂಕ ಎದುರಾಗಿತ್ತು. ಈಗ ನಿಯಮ ಜಾರಿಯನ್ನು ಮುಂದೂಡಿರುವುದರಿಂದ ಸದ್ಯಕ್ಕೆ ಬ್ಯಾಂಕು ಹಾಗೂ ಗ್ರಾಹಕರಿಗೆ ಯಾವುದೇ ಸಮಸ್ಯೆಯಿಲ್ಲದಂತಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.