ಚಲಾವಣೆಯಲ್ಲಿರುವ ನಗದು 5 ಲಕ್ಷ ಕೋಟಿ ರುಪಾಯಿಯಷ್ಟು ಏರಿಕೆ

By Kannadaprabha News  |  First Published Jan 8, 2021, 12:03 PM IST

2020ನೇ ಸಾಲಿನಲ್ಲಿ ಚಲಾವಣೆಯಲ್ಲಿರುವ ನಗದು ಪ್ರಮಾಣ 5 ಲಕ್ಷ ಕೋಟಿ ರು.ನಷ್ಟು ಹೆಚ್ಚಳವಾಗಿದೆ ಎಂದು ರಿಸರ್ವ್‌ ಬ್ಯಾಂಕ್‌ ಅಂಕಿ-ಅಂಶಗಳೊಂದಿಗೆ ಖಚಿತಪಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ನವದೆಹಲಿ(ಜ.08): ಕೊರೋನಾ ವೈರಸ್‌ ಹಾವಳಿ ಕಂಡುಬಂದ ಬಳಿಕ ದೇಶದಲ್ಲಿ ನಗದು ಬಳಸುವ ಪ್ರಮಾಣ ಅಧಿಕವಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಇದರ ಪರಿಣಾಮವಾಗಿ 2020ನೇ ಸಾಲಿನಲ್ಲಿ ಚಲಾವಣೆಯಲ್ಲಿರುವ ನಗದು ಪ್ರಮಾಣ 5 ಲಕ್ಷ ಕೋಟಿ ರು.ನಷ್ಟು ಹೆಚ್ಚಳವಾಗಿದೆ. 2019ಕ್ಕೆ ಹೋಲಿಸಿದರೆ ಶೇ.22ರಷ್ಟು ಏರಿಕೆ ಕಂಡುಬಂದಿದೆ.

ಸಾಮಾನ್ಯವಾಗಿ ಆರ್ಥಿಕಾಭಿವೃದ್ಧಿ ದರ (ಜಿಡಿಪಿ) ತುಸು ಹೆಚ್ಚಾದಾಗ ಚಲಾವಣೆಯಲ್ಲಿರುವ ನಗದು ಪ್ರಮಾಣವೂ ಅಧಿಕವಾಗುತ್ತದೆ. ಆದರೆ ಜಿಡಿಪಿ ಮೈನಸ್‌ಗೆ ಕುಸಿತ ಕಂಡಿದ್ದರೂ ಭಾರತದಲ್ಲಿ ಚಲಾವಣೆಯಲ್ಲಿರುವ ನಗದು ಪ್ರಮಾಣ ಅಧಿಕವಾಗಿರುವುದು ಗಮನಾರ್ಹವಾಗಿದೆ. 2020ನೇ ಸಾಲಿನಲ್ಲಿ ಚಲಾವಣೆಯಲ್ಲಿರುವ ನಗದು ಪ್ರಮಾಣ 5,01,405 ಕೋಟಿ ರು.ನಷ್ಟು ಹೆಚ್ಚಾಗಿದ್ದು, ಇದು ಜಿಡಿಪಿ- ನಗದು ಅನುಪಾತದ ಶೇ.15ಕ್ಕಿಂತ ಅಧಿಕವಾಗಿದೆ ಎಂದು ಭಾರತೀಯ ರಿಸವ್‌ರ್‍ ಬ್ಯಾಂಕ್‌ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ತಿಳಿಸಿವೆ.

Latest Videos

undefined

ವಿಶ್ವದ ಮೊದಲ ಸಿರಿವಂತ ಸ್ಥಾನಕ್ಕೇರಿದ ಟೆಸ್ಲಾ ಮುಖ್ಯಸ್ಥ ಎಲೆನ್ ಮಸ್ಕ್

2017ನೇ ಸಾಲಿನಲ್ಲಿ ಅಪನಗದೀಕರಣದ ಫಲವಾಗಿ ಚಲಾವಣೆಯಲ್ಲಿರುವ ನಗದು ಪ್ರಮಾಣ ಶೇ.20ರಷ್ಟುಕುಸಿತ ಕಂಡಿತ್ತು. ಹೊಸ ನೋಟು ಬಿಡುಗಡೆಯಾದ ಹಿನ್ನೆಲೆಯಲ್ಲಿ ಚಲಾವಣೆಯಲ್ಲಿರುವ ನಗದು 2018ರಲ್ಲಿ ಶೇ.37ರಷ್ಟು ಜಿಗಿತ ಕಂಡಿತ್ತು. ಕಳೆದ 10 ವರ್ಷಗಳ ಸರಾಸರಿ ನಗದು ಬೆಳವಣಿಗೆಯ ದರ ಶೇ.12.6ರಷ್ಟಿದೆ. ಕಳೆದ 50 ವರ್ಷಗಳ ಸರಾಸರಿ ಶೇ.13.8ರಷ್ಟಿದೆ ಎಂದು ತಿಳಿಸಿದೆ.

ವಿದೇಶಗಳಲ್ಲೂ ಇದೇ ಟ್ರೆಂಡ್‌:

ಕೊರೋನಾ ಕಾಲದಲ್ಲಿ ಜನರು ವೈದ್ಯಕೀಯ ಅಥವಾ ತುರ್ತು ಹಣಕಾಸು ಅಗತ್ಯಗಳಿಗಾಗಿ ಹೆಚ್ಚು ಹೆಚ್ಚು ಹಣ ಸಂಗ್ರಹಿಸಿದರು. ಹೀಗಾಗಿ ಚಲಾವಣೆಯಲ್ಲಿರುವ ನಗದು ಅಧಿಕವಾಗಿದೆ. ಇಂತಹ ಬೆಳವಣಿಗೆ ಬ್ರೆಜಿಲ್‌, ಚಿಲಿ, ರಷ್ಯಾ, ಟರ್ಕಿಯಲ್ಲೂ ಕಂಡುಬಂದಿದೆ. ಅಮೆರಿಕದಲ್ಲಿ ಚಲಾವಣೆಯಲ್ಲಿರುವ ಶೇ.35ರಷ್ಟುಡಾಲರ್‌ಗಳನ್ನು ಕಳೆದ 10 ತಿಂಗಳಲ್ಲಿ ಮುದ್ರಿಸಲಾಗಿದೆ. ನಗದು ಕಡಿಮೆ ಬಳಸುವ ಅಮೆರಿಕ, ಸ್ಪೇನ್‌, ಇಟಲಿ, ಜರ್ಮನಿ, ಫ್ರಾನ್ಸ್‌ನಲ್ಲೂ ನಗದು ಬಳಕೆ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.
 

click me!