ಕೊರೋನಾಗೂ ಎದೆಗುಂದದೆ ಆರ್ಥಿಕ ಪ್ರಗತಿಗೆ ಕೇಂದ್ರದ ಒತ್ತು!

By Suvarna NewsFirst Published Feb 14, 2021, 11:36 AM IST
Highlights

ಕೊರೋನಾಗೂ ಎದೆಗುಂದದೆ ಆರ್ಥಿಕ ಪ್ರಗತಿಗೆ ಕೇಂದ್ರದ ಒತ್ತು| ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಪ್ರತಿಪಾದನೆ| ಬಜೆಟ್‌ ಉದ್ಯಮಿಗಳ ಪರ ಎಂದ ವಿಪಕ್ಷಕ್ಕೆ ತಿರುಗೇಟು

ನವದೆಹಲಿ(ಫೆ.14): ಮುಂಬರುವ ದಶಕಗಳಲ್ಲಿ ಭಾರತವನ್ನು ವಿಶ್ವದ ಅತ್ಯುನ್ನತ ಆರ್ಥಿಕತೆಯಾಗಿ ಮಾಡುವ ಹಂಬಲ ಹೊಂದಿರುವ ನರೇಂದ್ರ ಮೋದಿ ಸರ್ಕಾರ, ಕೋವಿಡ್‌ ಸಾಂಕ್ರಾಮಿಕಕ್ಕೂ ಎದೆಗುಂದದೆ ಆ ಸಮಯದಲ್ಲೂ ಆರ್ಥಿಕಾಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಪಾದಿಸಿದ್ದಾರೆ.

ಬಜೆಟ್‌ ಮೇಲಿನ ಚರ್ಚೆಗೆ ಶನಿವಾರ ಲೋಕಸಭೆಯಲ್ಲಿ ಉತ್ತರ ನೀಡಿದ ನಿರ್ಮಲಾ, ‘ಸುಧಾರಣೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಅವಕಾಶವನ್ನೂ ಬಿಟ್ಟಿಲ್ಲ ಮತ್ತು ಈ ಬಜೆಟ್‌ ಆತ್ಮನಿರ್ಭರ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ಮತ್ತಷ್ಟುಬಲತುಂಬುವ ಯತ್ನ ಮಾಡಿದೆ. ಆರೋಗ್ಯ ವಲಯಕ್ಕೆ ಹೆಚ್ಚಿನ ಅನುದಾನ, ಹೆಚ್ಚಿನ ಬಂಡವಾಳ ವೆಚ್ಚ, ಕೃಷಿ ವಲಯದ ಸುಧಾರಣೆ ಸೇರಿದಂತೆ ಹಲವು ಕ್ರಮಗಳ ಮೂಲಕ ಆರ್ಥಿಕತೆಗೆ ಹಲವು ದಿಕ್ಕುಗಳಿಂದ ಅಭಿವೃದ್ಧಿಯ ಪಥವನ್ನು ರೂಪಿಸಿಕೊಟ್ಟಿದೆ. ಕೋವಿಡ್‌ ಸಾಂಕ್ರಾಮಿಕದ ಹೊರತಾಗಿಯೂ, ದೇಶದ ದೀರ್ಘಕಾಲೀನ ಗುರಿ ಈಡೇರಿಸಲು ಅಗತ್ಯವಾದ ಸುಧಾರಣಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಲೇ ಬಂದಿದೆ’ ಎಂದು ಬಜೆಟ್‌ ಅನ್ನು ಸಮರ್ಥಿಸಿಕೊಂಡರು.

ಇದೇ ವೇಳೆ ಇದು ಬಂಡವಾಳಶಾಹಿಗಳ ಪರ ಬಜೆಟ್‌ ಎಂಬ ವಿಪಕ್ಷಗಳ ಆರೋಪ ತಳ್ಳಿಹಾಕಿದ ಸಚಿವೆ ನಿರ್ಮಲಾ, ನರೇಂದ್ರ ಮೋದಿ ಸರ್ಕಾರ ಜನಸಾಮಾನ್ಯರಿಗಾಗಿ ಕಾರ್ಯನಿರ್ವಹಿಸುತ್ತಿದೆಯೇ ಹೊರತೂ ಬಂಡವಾಳಶಾಯಿಗಳ ಪರವಲ್ಲ. ಮುದ್ರಾ ಯೋಜನೆ, ಗ್ರಾಮೀಣ ರಸ್ತೆ, ಶೌಚಾಲಯ ನಿರ್ಮಾಣ ಇವ್ಯಾವುದೂ ಬಂಡವಾಳಶಾಹಿಗಳಿಗಲ್ಲ ಎಂದು ತಿರುಗೇಟು ನೀಡಿದರು.

click me!