ವಿದೇಶದಿಂದ ಹಣ ರವಾನೆ: ಜಗತ್ತಲ್ಲೇ ಭಾರತೀಯರು ನಂ.1

By Web DeskFirst Published Apr 10, 2019, 9:49 AM IST
Highlights

ವಿದೇಶದಿಂದ ಹಣ ರವಾನೆ: ಜಗತ್ತಲ್ಲೇ ಭಾರತೀಯರು ನಂ.1| 2018ರಲ್ಲಿ 5.5 ಲಕ್ಷ ಕೋಟಿ ರು. ಹಣ ಕಳಿಸಿದ ಎನ್ನಾರೈಗಳು| ಜಗತ್ತಿನಲ್ಲೇ ಭಾರತ ನಂ.1, ಚೀನಾ ನಂ.2, ಮೆಕ್ಸಿಕೋ ನಂ.3

ವಾಷಿಂಗ್ಟನ್‌[ಏ.10]: ವಿದೇಶದಲ್ಲಿ ನೆಲೆಸಿರುವವರು ತಮ್ಮ ದೇಶಕ್ಕೆ ಅತಿ ಹೆಚ್ಚು ಹಣ ಕಳುಹಿಸುವ ಪಟ್ಟಿಯಲ್ಲಿ ಭಾರತ 2018ರಲ್ಲೂ ನಂ.1 ಸ್ಥಾನವನ್ನು ಉಳಿಸಿಕೊಂಡಿದೆ. ಕಳೆದ ವರ್ಷ ವಿದೇಶಿ ಭಾರತೀಯರು ತಮ್ಮ ದೇಶಕ್ಕೆ ಒಟ್ಟು 79 ಬಿಲಿಯನ್‌ ಡಾಲರ್‌ (ಸುಮಾರು 5.5 ಲಕ್ಷ ಕೋಟಿ ರು.) ಕಳುಹಿಸಿದ್ದಾರೆ ಎಂದು ವಿಶ್ವಬ್ಯಾಂಕ್‌ನ ವರದಿ ಹೇಳಿದೆ. ಕೇರಳದಲ್ಲಿ ಸಂಭವಿಸಿದ ಜಲಪ್ರಳಯದಿಂದಾಗಿ ವಿದೇಶದಲ್ಲಿ ನೆಲೆಸಿರುವ ಮಲೆಯಾಳಿಗಳು ತಾಯ್ನಾಡಿಗೆ ಹೆಚ್ಚು ಹಣ ಕಳುಹಿಸಿರುವುದು ಕೂಡ ಈ ಮೊತ್ತ ಹೆಚ್ಚಲು ಕಾರಣವಾಗಿದೆ.

ವಿದೇಶದಲ್ಲಿ ನೆಲೆಸಿರುವವರು ತಮ್ಮ ದೇಶಕ್ಕೆ ಅತಿಹೆಚ್ಚು ಹಣ ಕಳುಹಿಸುವ ಪಟ್ಟಿಯಲ್ಲಿ ಭಾರತ ನಂ.1 ಸ್ಥಾನದಲ್ಲಿದ್ದರೆ, ಚೀನಾ ನಂ.2 ಸ್ಥಾನದಲ್ಲಿದೆ. ಜಗತ್ತಿನ ನಾನಾ ದೇಶಗಳಲ್ಲಿರುವ ಚೀನೀಯರು 2018ರಲ್ಲಿ ತಮ್ಮ ದೇಶಕ್ಕೆ 67 ಬಿಲಿಯನ್‌ ಡಾಲರ್‌ (ಸುಮಾರು 4.7 ಲಕ್ಷ ಕೋಟಿ ರು.) ಕಳುಹಿಸಿದ್ದಾರೆ. ನಂತರದ ಸ್ಥಾನದಲ್ಲಿ ಮೆಕ್ಸಿಕೋ (36 ಬಿಲಿಯನ್‌ ಡಾಲರ್‌), ಫಿಲಿಪ್ಪೀನ್ಸ್‌ (34 ಬಿಲಿಯನ್‌ ಡಾಲರ್‌) ಹಾಗೂ ಈಜಿಪ್ಟ್‌ (29 ಬಿಲಿಯನ್‌ ಡಾಲರ್‌) ದೇಶಗಳಿವೆ.

ಕಳೆದ ಮೂರು ವರ್ಷಗಳಿಂದ ಭಾರತಕ್ಕೆ ವಿದೇಶದಲ್ಲಿ ನೆಲೆಸಿರುವವರು ಕಳುಹಿಸುವ ಹಣದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. 2016ರಲ್ಲಿ ಇದು 4.4 ಲಕ್ಷ ಕೋಟಿ ರು. ಹಾಗೂ 2017ರಲ್ಲಿ 4.6 ಲಕ್ಷ ಕೋಟಿ ರು. ಇತ್ತು. 2017ಕ್ಕೆ ಹೋಲಿಸಿದರೆ 2018ರಲ್ಲಿ ಭಾರತಕ್ಕೆ ಬಂದ ಹಣದ ಪ್ರಮಾಣ ಶೇ.14ರಷ್ಟುಹೆಚ್ಚಾಗಿದೆ. ಅನೇಕ ವರ್ಷಗಳಿಂದ ಅತಿ ಹೆಚ್ಚು ವಿದೇಶಿ ಹಣ ಸ್ವೀಕರಿಸುವ ದೇಶಗಳ ಪಟ್ಟಿಯಲ್ಲಿ ಭಾರತ ನಂ.1 ಸ್ಥಾನದಲ್ಲೇ ಇದೆ.

click me!