2050ಕ್ಕೆ ಭಾರತ ಜಗತ್ತಿನ 3ನೇ ದೊಡ್ಡ ಆರ್ಥಿಕತೆ, ಜಪಾನ್ ಹಿಂದಕ್ಕೆ!

By Kannadaprabha NewsFirst Published Oct 12, 2020, 7:59 AM IST
Highlights

2050ಕ್ಕೆ ಭಾರತ ಜಗತ್ತಿನ 3ನೇ ದೊಡ್ಡ ಆರ್ಥಿಕತೆ| ಜಪಾನನ್ನು ಹಿಂದಿಕ್ಕಿ ನಂ.3 ಆಗಲಿದೆ ಭಾರತ: ಲ್ಯಾನ್ಸೆಟ್‌

ನವದೆಹಲಿ(ಅ.12): 2050ರ ವೇಳೆಗೆ ಜಪಾನ್‌ ದೇಶವನ್ನು ಹಿಂದಿಕ್ಕಿ ಭಾರತವು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಲ್ಯಾನ್ಸೆಟ್‌ ಜರ್ನಲ್‌ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

2050ರಲ್ಲಿ ನಂ.3 ಆರ್ಥಿಕತೆಯಾಗಲಿರುವ ಭಾರತ 2100ರವರೆಗೂ ಅದೇ ಸ್ಥಾನದಲ್ಲಿರಲಿದೆ. ಈ ವೇಳೆಯಲ್ಲಿ ಭಾರತ ಮತ್ತು ಚೀನಾದ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕುಸಿಯಲಿದೆ. ಸದ್ಯ 5ನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು 2030ಕ್ಕೆ ಜರ್ಮನಿಯನ್ನು ಹಿಂದಿಕ್ಕಿ 4ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಆಗ ಭಾರತಕ್ಕಿಂತ ಮೇಲಿನ ಸ್ಥಾನಗಳಲ್ಲಿ ಕ್ರಮವಾಗಿ ಜಪಾನ್‌, ಚೀನಾ ಮತ್ತು ಅಮೆರಿಕ ಇರಲಿವೆ. 2035ರಲ್ಲಿ ಚೀನಾ ನಂ.1 ಆರ್ಥಿಕತೆಯಾಗಲಿದ್ದು, ಅಮೆರಿಕ ನಂ.2 ಆಗಲಿದೆ. ನಂತರ ಮತ್ತೆ 2098ಕ್ಕೆ ಅಮೆರಿಕ ನಂ.1 ಆರ್ಥಿಕತೆಯಾಗಲಿದೆ ಎಂದು 2017ರಲ್ಲಿನ 195 ದೇಶಗಳ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದ ಬೆಳವಣಿಗೆಯ ದರ, ಜನಸಂಖ್ಯೆಯ ಬೆಳವಣಿಗೆ, ಸಂತಾನೋತ್ಪತ್ತಿ ದರ, ಸಾವಿನ ದರ, ವಲಸೆಯ ಲಕ್ಷಣವನ್ನು ಗಣನೆಗೆ ತೆಗೆದುಕೊಂಡು ಲ್ಯಾನ್ಸೆಟ್‌ ಮೆಡಿಕಲ್‌ ಜರ್ನಲ್‌ ಅಧ್ಯಯನ ನಡೆಸಿದೆ.

ಮುಂದಿನ ದಶಕಗಳಲ್ಲಿ ಭಾರತ ಮತ್ತು ಚೀನಾದಲ್ಲಿ ಕೆಲಸ ಮಾಡುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಆದರೂ 2100ರ ವೇಳೆಗೆ ಭಾರತದಲ್ಲಿ ಜಗತ್ತಿನಲ್ಲೇ ಅತಿಹೆಚ್ಚು ಕೆಲಸ ಮಾಡುವ ವಯಸ್ಸಿನ ಜನರು ಇರಲಿದ್ದಾರೆ. ಈ ವಿಷಯದಲ್ಲಿ ನೈಜೀರಿಯಾ, ಚೀನಾ ಮತ್ತು ಅಮೆರಿಕ ನಂತರದ ಸ್ಥಾನಗಳಲ್ಲಿರಲಿವೆ. ಜಪಾನ್‌ನ ಜನಸಂಖ್ಯೆಯಲ್ಲಿ ಭಾರಿ ಕುಸಿತವಾದರೂ 2100ರವರೆಗೆ ಆ ದೇಶವೇ ನಂ.4 ಸ್ಥಾನದಲ್ಲಿರಲಿದೆ ಎಂದು ಲ್ಯಾನ್ಸೆಟ್‌ ತಿಳಿಸಿದೆ.

ಸದ್ಯ ಜಿಡಿಪಿ ಗಾತ್ರದ ದೃಷ್ಟಿಯಿಂದ ಅಮೆರಿಕ ನಂ.1, ಚೀನಾ ನಂ.2, ಜಪಾನ್‌ ನಂ.3, ಜರ್ಮನಿ ನಂ.4 ಹಾಗೂ ಭಾರತ ನಂ.5 ಆರ್ಥಿಕತೆಗಳಾಗಿವೆ.

click me!