ದೇಶದಲ್ಲಿ ಘೋಸ್ಟ್ ಶಾಪಿಂಗ್ ಸೆಂಟರ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ. ದೆಹಲಿಯಲ್ಲಿ ಅತ್ಯಧಿಕ ಘೋಸ್ಟ್ ಮಾಲ್ ಇದ್ರೆ, ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
ನವದೆಹಲಿ (ಮೇ 9): ದೇಶದಲ್ಲಿ ಘೋಸ್ಟ್ ಮಾಲ್ ಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2022ರಿಂದ ಇಲ್ಲಿಯ ತನಕ ವರ್ಷದಿಂದ ವರ್ಷಕ್ಕೆ ಘೋಸ್ಟ್ ಶಾಪಿಂಗ್ ಸೆಂಟರ್ ಗಳ ಪ್ರಮಾಣದಲ್ಲಿ ಶೇ.59ರಷ್ಟು ಏರಿಕೆಯಾಗಿದೆ. ಅಂದಹಾಗೇ ಘೋಸ್ಟ್ ಮಾಲ್ ಎಂದ ತಕ್ಷಣ ಮಾಲ್ ಗಳಲ್ಲಿ ದೆವ್ವವಿದೆ ಎಂದು ಭಾವಿಸಬೇಡಿ. ಘೋಸ್ಟ್ ಮಾಲ್ ಅಂದ್ರೆ ಬಳಕೆಯಾಗದ ಸ್ಥಳಾವಕಾಶ ಹೆಚ್ಚಿರುವ ಹಾಗೂ ಜನದಟ್ಟಣೆ ಇಲ್ಲದ ಮಾಲ್ ಗಳು ಎಂದರ್ಥ. ಇವುಗಳನ್ನು ಡೆಡ್ ಮಾಲ್ ಎಂದು ಕೂಡ ಕರೆಯುತ್ತಾರೆ. ಭಾರತದ ಬಹುತೇಕ ಮೆಟ್ರೋ ನಗರಗಳ ಮಾಲ್ ಗಳಲ್ಲಿ ಬಳಕೆಯಾಗದ ಸ್ಥಳಾವಕಾಶ ಹೆಚ್ಚಿದ್ದು, ಮಳಿಗೆಗಳು ಇಲ್ಲದ ಕಾರಣ ಜನಜಂಗುಳಿ ಕೂಡ ತಗ್ಗಿದೆ. ಹೊಸ ವರದಿಯೊಂದರ ಪ್ರಕಾರ ಘೋಸ್ಟ್ ಶಾಪಿಂಗ್ ಸೆಂಟರ್ ಗಳಿಂದ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಜನರು ಆನ್ ಲೈನ್ ಶಾಪಿಂಗ್ ನೆಚ್ಚಿಕೊಂಡಿರುವ ಕಾರಣ ಮಾಲ್ ಗೆ ಭೇಟಿ ನೀಡುವ ಅಭ್ಯಾಸವನ್ನು ಕಡಿಮೆ ಮಾಡಿರೋದು ಘೋಸ್ಟ್ ಶಾಪಿಂಗ್ ಸೆಂಟರ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲು ಕಾರಣ ಎಂದು ಹೇಳಲಾಗಿದೆ. 2023ನೇ ಸಾಲಿನಲ್ಲಿ ದೇಶದ ಟೈರ್ 1 ನಗರಗಳಲ್ಲಿ 64 ಘೋಸ್ಟ್ ಶಾಪಿಂಗ್ ಸೆಂಟರ್ ಗಳು ಪತ್ತೆಯಾಗಿವೆ ಎಂದು ಅಂತಾರಾಷ್ಟ್ರೀಯ ಆಸ್ತಿ ಸಲಹಕಾರ ಸಂಸ್ಥೆ ನೈಟ್ ಫ್ರಾಂಕ್ ನ ಇತ್ತೀಚಿನ ವರದಿ ತಿಳಿಸಿದೆ. ಇದರಿಂದ 67 ಶತಕೋಟಿ ರೂ. ನಷ್ಟವಾಗಿದೆ ಎಂದು ಮಾಹಿತಿ ನೀಡಿದೆ.
ದೆಹಲಿಯಲ್ಲಿ ಅತ್ಯಧಿಕ ಘೋಸ್ಟ್ ಶಾಪಿಂಗ್ ಸೆಂಟರ್
ದೇಶದಲ್ಲಿ 2022ನೇ ಸಾಲಿನಲ್ಲಿ ಘೋಸ್ಟ್ ಶಾಪಿಂಗ್ ಸೆಂಟರ್ ಗಳ ಸಂಖ್ಯೆ 57ರಷ್ಟಿತ್ತು. ಆದರೆ, 2023ನೇ ಸಾಲಿನಲ್ಲಿ ಇದು 64ಕ್ಕೆ ಏರಿಕೆಯಾಗಿದೆ ಎಂದು ನೈಟ್ ಫ್ರಾಂಕ್ ನ ವರದಿ ತಿಳಿಸಿದೆ. ಇನ್ನು ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಅತ್ಯಧಿಕ ಘೋಸ್ಟ್ ಶಾಪಿಂಗ್ ಸೆಂಟರ್ ಗಳು ಪತ್ತೆಯಾಗಿವೆ. ಇಲ್ಲಿ 5.3 mn sq ft ಪ್ರದೇಶ ಬಳಕೆಯಾಗಿಲ್ಲ. ಈ ಮೂಲಕ ದೆಹಲಿಯಲ್ಲಿ ವರ್ಷದಿಂದ ವರ್ಷಕ್ಕೆ ಇಂಥ ಬಳಕೆಯಾಗದ ಅಥವಾ ಘೋಸ್ಟ್ ಶಾಪಿಂಗ್ ಸೆಂಟರ್ ಪ್ರಮಾಣದಲ್ಲಿ ಶೇ.58ರಷ್ಟು ಏರಿಕೆ ಕಂಡುಬಂದಿದೆ. ಇನ್ನು ಎರಡನೇ ಸ್ಥಾನದಲ್ಲಿ ಮುಂಬೈ ಇದ್ದು, 2.1 mn sq ft ಪ್ರದೇಶ ಬಳಕೆಯಾಗದೆ ಉಳಿದಿದೆ. ಮುಂಬೈನಲ್ಲಿ ಘೋಸ್ಟ್ ಶಾಪಿಂಗ್ ಸೆಂಟರ್ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಶೇ.86ರಷ್ಟು ಹೆಚ್ಚಳ ಕಂಡುಬಂದಿದೆ. ಇನ್ನು ಬೆಂಗಳೂರು ಮೂರನೇ ಸ್ಥಾನದಲ್ಲಿದ್ದು, 2.0 mn sq ft ಪ್ರದೇಶ ಬಳಕೆಯಾಗಿಲ್ಲ. ಘೋಸ್ಟ್ ಶಾಪಿಂಗ್ ಸೆಂಟರ್ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಶೇ.46ರಷ್ಟು ಹೆಚ್ಚಳ ಕಂಡುಬಂದಿದೆ. ಇನ್ನು ಘೋಸ್ಟ್ ಶಾಪಿಂಗ್ ಸೆಂಟರ್ ನಲ್ಲಿ ಇಳಿಕೆ ಕಂಡುಬಂದಿರುವ ನಗರ ಎಂದರೆ ಅದು ಹೈದರಾಬಾದ್ ಮಾತ್ರ. ಇಲ್ಲಿ 0.9 mn sq ft ಬಳಕೆಯಾಗದ ಪ್ರದೇಶವಿದೆ. ಈ ಮೂಲಕ ವರ್ಷದಿಂದ ವರ್ಷಕ್ಕೆ ಹೈದರಾಬಾದ್ ನಲ್ಲಿ ಶೇ.19ರಷ್ಟು ಇಳಿಕೆ ಕಂಡುಬಂದಿದೆ.
undefined
ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿವೆ 57 ಘೋಸ್ಟ್ ಮಾಲ್ ಗಳು!
ಘೋಸ್ಟ್ ಶಾಪಿಂಗ್ ಸೆಂಟರ್ ಹೆಚ್ಚಳಕ್ಕೇನು ಕಾರಣ?
ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಶಾಪಿಂಗ್ ಕಡೆಗೆ ಜನರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಹೀಗಾಗಿ ಈ ಹಿಂದಿನಂತೆ ಮಾಲ್ ಗಳಿಗೆ ಭೇಟಿ ನೀಡಿ ಖರೀದಿ ಮಾಡುವ ಅಭ್ಯಾಸ ಕಡಿಮೆಯಾಗುತ್ತಿದೆ. ಇದರಿಂದ ಇಂದು ಮಾಲ್ ಗಳಲ್ಲಿ ಈ ಹಿಂದಿನಷ್ಟು ಜನದಟ್ಟಣೆ ಇಲ್ಲ. ಇದೇ ದೇಶದಲ್ಲಿ ಘೋಸ್ಟ್ ಮಾಲ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲು ಕಾರಣ ಎಂದು ಹೇಳಲಾಗಿದೆ.
NRIಗಳಿಗೆ ಹೊಸ ಸೇವೆ ಪ್ರಾರಂಭಿಸಿದ ಐಸಿಐಸಿಐ ಬ್ಯಾಂಕ್; ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆ ಮೂಲಕ ಯುಪಿಐ ಪಾವತಿಗೆ ಅವಕಾಶ
29 ನಗರಗಳಲ್ಲಿ ಸಮೀಕ್ಷೆ
ನೈಟ್ ಫ್ರಾಂಕ್ ಇಂಡಿಯಾ 29 ನಗರಗಳಲ್ಲಿ ಸಮೀಕ್ಷೆ ನಡೆಸಿ 'ಥಿಂಕ್ ಇಂಡಿಯಾ ಥಿಂಕ್ ರಿಟೇಲ್ 2024' ವರದಿ ಸಿದ್ಧಪಡಿಸಿದೆ. ಈ ವರದಿಯಲ್ಲಿ ಟೈರ್ 2 ನಗರಗಳಲ್ಲಿನ ಮಾಲ್ ಗಳನ್ನು ಕೂಡ ಸೇರಿಸಲಾಗಿದೆ. ಲಖ್ನೋದಲ್ಲಿ ಅತ್ಯಧಿಕ ಘೋಸ್ಟ್ ಶಾಪಿಂಗ್ ಸೆಂಟರ್ ಪತ್ತೆಯಾಗಿದೆ. ಇಲ್ಲಿ 5.7 mn sq ft ಪ್ರದೇಶ ಬಳಕೆಯಾಗಿಲ್ಲ. ಜೈಪುರದಲ್ಲಿ2.1 mn sq ft ಕಂಡುಬಂದಿದೆ.