
ನವದೆಹಲಿ: ಭಾರತ ಮತ್ತು ಅಮೆರಿಕ ನಡುವೆ ಹಾಲಿನ ಉತ್ಪನ್ನಗಳಿಗೆ ಸಂಬಂಧಿಸಿದ ಭಿನ್ನಾಭಿಪ್ರಾಯ ಉಂಟಾಗಿದೆ. ತನ್ನ ಹಾಲಿನ ಉತ್ನನ್ನಗಳಿಗೆ ಭಾರತದ ಮಾರುಕಟ್ಟೆಯ ಬಾಗಿಲು ತೆಗೆಯಬೇಕೆಂದು ಅಮೆರಿಕ ಒತ್ತಾಯಿಸುತ್ತಿದೆ. ಭಾರತದೊಂದಿಗೆ ಏರ್ಪಡುತ್ತಿರುವ ಹಲವು ಒಪ್ಪಂದಗಳ ಪೈಕಿ ಅಮೆರಿಕ, ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕುರಿತ ಬೇಡಿಕೆಯೊಂದನ್ನು ಇರಿಸಿದೆ. ಅಮೆರಿಕದ ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆ ಮುಕ್ತವಾಗಿಸಲು ಭಾರತ ಹಿಂದೇಟು ಹಾಕಿದೆ. ಭಾರತೀಯರು ಮಾಂಸಹಾರಿ ಹಾಲಿನ ಉತ್ಪನ್ನ ಸ್ವೀಕರಿಸಲ್ಲ. ಬೇಕಿದ್ರೆ ಸಸ್ಯಹಾರಿ ಹಾಲನ್ನು ಮಾತ್ರ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡುವದಾಗಿ ಭಾರತ ಹೇಳಿದೆ.
ಸದ್ಯ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಮಾಂಸಾಹಾರಿ ಮತ್ತು ಸಸ್ಯಹಾರಿ ಹಾಲು ಏನು ಎಂಬುದರ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಈ ಲೇಖನದಲ್ಲಿ ಎರಡೂ ಹಾಲಿನ ಅರ್ಥ ಏನು ಎಂದು ನೋಡೋಣ ಬನ್ನಿ.
ಮಾಂಸಾಹಾರಿ ಹಾಲು ಎಂದರೇನು?
ಸಾಮಾನ್ಯವಾಗಿ ಅಮೆರಿಕದಲ್ಲಿ ಹಸುಗಳಿಗೆ ಹಂದಿ, ಮೀನು, ಕೋಳಿ, ಕುದುರೆ, ಬೆಕ್ಕು, ನಾಯಿಗಳ ಭಾಗಗಳನ್ನೊಳಗೊಂಡ ಆಹಾರವನ್ನು ನೀಡಲಾಗುತ್ತದೆ. ಈ ಆಹಾರದ ಜೊತೆಯಲ್ಲಿ ಹಂದಿ ಮತ್ತು ಕುದುರೆಯ ರಕ್ತ, ಕೊಬ್ಬು ಮತ್ತು ಪ್ರೋಟೀನ್ ಸಹ ನೀಡಲಾಗುತ್ತದೆ. ಈ ವಿಧಾನ ವೆಚ್ಚದಾಯಕದ ಜೊತೆ ಪರಿಣಾಮಕಾರಿಯೂ ಆಗಿದೆ. ಆದರೆ ಭಾರತದಲ್ಲಿ ಹಸುಗಳಿಗೆ ಈ ರೀತಿಯಾದ ಆಹಾರ ನೀಡಲ್ಲ. ಹಾಗಾಗಿ ಅಮೆರಿಕದ ಹಾಲನ್ನು ಮಾಂಸಾಹಾರಿ ಎಂದು ಕರೆಯಲಾಗುತ್ತಿದೆ.
ರಾಜಿಯೇ ಇಲ್ಲ: ಭಾರತದಿಂದ ಸ್ಪಷ್ಟ ನಿಲುವು
ಭಾರತದಲ್ಲಿ ಹಾಲು ಮತ್ತು ತುಪ್ಪ ದೈನಂದಿನ ಜೀವನ ಮತ್ತು ಆಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಾಂಸ ಮತ್ತು ರಕ್ತ ಸೇವಿಸಿದ ಹಸುವಿನ ಹಾಲಿನಿಂದ ತಯಾರಿಸಿದ ತುಪ್ಪವನ್ನು ಭಾರತೀಯರು ಒಪ್ಪಿಕೊಳ್ಳಲ್ಲ ಎಂಬುವುದು ಕೇಂದ್ರ ಸರ್ಕಾರದ ನಿಲುವು ಆಗಿದೆ. ಮಾಂಸಹಾರ ಸೇವಿಸುವ ಹಾಲಿನ್ನು ಧಾರ್ಮಿಕ ಆಚರಣೆಗಳಲ್ಲಿಯೂ ಬಳಕೆಯಾಗಲ್ಲ. ಇದು ಭಾರತೀಯರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದಂತಾಗುತ್ತದೆ ಎಂದು ಅಮೆರಿಕಾಗೆ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ.
ಅಮೆರಿಕಾದ ಈ ಒತ್ತಾಯ ಅನಗತ್ಯ ವ್ಯಾಪಾರ ತಡೆ' ಎಂದು ಭಾರತ ಕರೆದಿದೆ. ಹಾಲಿನ ಉತ್ಪನ್ನಗಳಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವದಿಲ್ಲ ಎಂದು ಅಮೆರಿಕಾಗೆ ಸ್ಪಷ್ಟಪಡಿಸಿದೆ. ಬೇಕಿದ್ರೆ ಸಸ್ಯಹಾರಿ ಹಾಲು ಮತ್ತು ಅದರ ಉತ್ಪನ್ನಗಳನ್ನು ಭಾರತ ಆಮದು ಮಾಡಿಕೊಳ್ಳುವ ಕುರಿತು ಚಿಂತನೆ ನಡೆಸಬಹುದು ಎಂದು ಸ್ಪಷ್ಟವಾಗಿ ಹೇಳಿದೆ.
ಅಮೆರಿಕಾದ ಹಾಲಿನ ಉತ್ಪನ್ನ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಾ?
ಒಂದು ವೇಳೆ ಅಮೆರಿಕಾದ ಹಾಲಿನ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆ ತೆರೆದುಕೊಂಡರೆ ದೇಶಿಯ ಮಿಲ್ಕ್ ಪ್ರೊಡಕ್ಟ್ ಬೆಲೆಗಳು ಕುಸಿಯುವಂತೆ ಮಾಡುತ್ತದೆ. ಈ ಒಂದು ನಿರ್ಧಾರ ಭಾರತದ ಸುಮಾರು 8 ಕೋಟಿಗೂ ಅಧಿಕ ಹೈನುಗಾರರ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. SBI ವರದಿಯ ಪ್ರಕಾರ, ಭಾರತದ ಹಾಲಿನ ಮಾರುಕಟ್ಟೆಯನ್ನು ಅಮೆರಿಕಾಗೆ ತೆರೆದ್ರೆ ವಾರ್ಷಿಕ 1.03 ಲಕ್ಷ ಕೋಟಿ ರೂ. ನಷ್ಟವಾಗುತ್ತದೆ.
ಹಾಲಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವ
ಭಾರತದಲ್ಲಿ ಹಸು ಮತ್ತು ಹಾಲಿನ ಉತ್ಪನ್ನಗಳಿಗೆ ಆಳವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವಿದೆ. ಮಾಂಸ ತಿನ್ನುವ ಹಸುಗಳ ಹಾಲನ್ನು ಬಳಸುವುದು ತೀವ್ರ ವಿರೋಧಕ್ಕೆ ಕಾರಣವಾಗುತ್ತದೆ. ಈಗಾಗಲೇ ಅಮೆರಿಕದ ಹಾಲಿನ ಉತ್ಪನ್ನಕ್ಕೆ ಭಾರತದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ನಮ್ಮಲ್ಲಿಯೇ ಕ್ಷೀರ ಕ್ರಾಂತಿ ಆಗಿರುವ ಸಂದರ್ಭದಲ್ಲಿ ನಮಗೆ ವಿದೇಶದ ಹಾಲು ಬೇಡ ಎಂದು ಭಾರತೀಯರು ಪ್ರತಿಕ್ರಿಯಿಸುತ್ತಿದ್ದಾರೆ .
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.