
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೇರಿರುವ ಶೇ.50ರಷ್ಟು ತೆರಿಗೆಯಿಂದಾಗಿ ಈಗ ಭಾರತದಲ್ಲಿರುವ ಅಮೆರಿಕನ್ ಕಂಪನಿಗಲಿಗೆ ಸಂಕಷ್ಟ ಎದುರಾಗಿದೆ. ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಗಳಾದ ಪೆಪ್ಸಿ, ಕೋಕಾ ಕೋಲಾ, ಸಬ್ವೇ, ಕೆಎಫ್‌ಸಿ, ಮ್ಯಾಕ್‌ಡೋನಾಲ್ಡ್ ಈಗ ದೇಶದಲ್ಲಿ ಬಹಿಷ್ಕಾರದ ಬಿಸಿ ಎದುರಿಸುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಕ್ಷಿಣ ಏಷ್ಯಾ ರಾಷ್ಟ್ರವಾದ ಭಾರತಕ್ಕೆ ಶೇ.50 ರಷ್ಟು ತೆರಿಗೆ ವಿಧಿಸಿದಾಗಿನಿಂದ ಅಮೆರಿಕ ವಿರೋಧಿ ಅಲೆ ಭಾರತದಲ್ಲಿ ಆವರಿಸಿದೆ. ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವುದಕ್ಕೆ ಅಸಮಾಧಾನಗೊಂಡಿರುವ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ದುಬಾರಿ ಶೇ.50ರಷ್ಟು ತೆರಿಗೆ ಹೇರಿದ್ದು, ಇದು ವಿಶ್ವದಲ್ಲೇ ಅತಿ ಹೆಚ್ಚು ಎನಿಸಿದೆ.
ಅಮೆರಿಕನ್ ಕಂಪನಿಗಳಿಗೆ ಭಾರತದಲ್ಲಿ ಬಹಿಷ್ಕಾರದ ಬಿಸಿ:
ಇದರ ಪರಿಣಾಮವಾಗಿ ಅಮೆರಿಕನ್ ಕಂಪನಿಗಳಾದ ಪೆಪ್ಸಿ, ಕೋಕಾ ಕೋಲಾ, ಸಬ್ವೇ, ಕೆಎಫ್‌ಸಿ, ಮೆಕ್‌ಡೊನಾಲ್ಡ್ಸ್‌ನಂತಹ ಅಮೇರಿಕನ್ ಬಹುರಾಷ್ಟ್ರೀಯ ಕಂಪನಿಗಳು ಬಹಿಷ್ಕಾರದ ಬೆದರಿಕೆಯನ್ನು ಎದುರಿಸುತ್ತಿವೆ. ಭಾರತದ ಮೇಲೆ ಟ್ರಂಪ್ ವಿಧಿಸಿರುವ ಸುಂಕವನ್ನು ಖಂಡಿಸಿರುವ ಯೋಗ ಗುರು ಬಾಬಾ ರಾಮ್‌ದೇವ್ ಭಾರತೀಯರು ಅಮೆರಿಕದ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಸಲಹೆ ನೀಡಿದ್ದಾರೆ. 'ಪೆಪ್ಸಿ, ಕೋಕಾ-ಕೋಲಾ, ಸಬ್ವೇ, ಕೆಎಫ್‌ಸಿ ಅಥವಾ ಮೆಕ್‌ಡೊನಾಲ್ಡ್ಸ್ ಕೌಂಟರ್‌ಗಳಲ್ಲಿ ಒಬ್ಬ ಭಾರತೀಯನೂ ಕಾಣಿಸಬಾರದು. ಇಷ್ಟೊಂದು ಬೃಹತ್ ಬಹಿಷ್ಕಾರ ನಡೆಯಬೇಕು. ಈ ರೀತಿ ಆದರೆ ಅಮೆರಿಕಾಗೆ ತನ್ನ ಎಡವಟ್ಟಿನ ಅರಿವಾಗುತ್ತದೆ. ಅಲ್ಲು ಸಮಸ್ಯೆ ಆಗುತ್ತದೆ ಎಂದು ಅವರು ಸ್ವದೇಶಿ ಅಭಿಯಾನಕ್ಕೆ ಕರೆ ನೀಡಿದ್ದಾರೆ.
ರಾಮ್‌ದೇವ್, ಪ್ರಧಾನಿ ಮೋದಿಯಿಂದ ಸ್ವದೇಶಿ ವಸ್ತುಗಳ ಬಳಕೆಗೆ ಒತ್ತಾಯ:
ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್(ಬ್ರಿಟನ್) ಮತ್ತು ಕೆನಡಾದಂತಹ ವಿಶ್ವದ ಇತರ ಭಾಗಗಳಲ್ಲಿ ಈಗಾಗಲೇ ಅಮೆರಿಕನ್ ವಸ್ತುಗಳ ಬಹಿಷ್ಕಾರಗಳು ನಡೆಯುತ್ತಿವೆ. ಹೀಗಾಗಿ ಈಗ 1.5 ಬಿಲಿಯನ್ ಜನಸಂಖ್ಯೆ ಹೊಂದಿರುವ ಭಾರತವು ಕೂಡಅಮೆರಿಕದ ಕಂಪನಿಗಳನ್ನು ಬಹಿಷ್ಕರಿಸುವುದರಿಂದ ಅಮೆರಿಕಾಗೆ ಭಾರಿ ನಷ್ಟ ಮತ್ತು ಗಂಭೀರ ಸವಾಲುಗಳು ಎದುರಾಗಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸ್ವದೇಶಿ ವಸ್ತುಗಳ ಬಳಕೆಗೆ ಜನರಿಗೆ ಈಗಾಗಲೇ ಹೆಚ್ಚಿನ ಮನವಿ ಮಾಡಿದ್ದಾರೆ. ಭಾರತೀಯರು ಸ್ವದೇಶಿ ವಸ್ತುಗಳನ್ನು ಖರೀದಿಸಿ ಬಳಸುವಂತೆ ಪ್ರಧಾನಿ ಆರಂಭದಿಂದಲೂ ಒತ್ತಾಯಿಸುತ್ತಲೇ ಬಂದಿದ್ದಾರೆ.
ವೋಖಲ್ ಫಾರ್ ಲೋಕಲ್‌ಗೆ ಆಗ್ರಹ:
ಯಾವುದೇ ರಾಜಕೀಯ ಪಕ್ಷ, ಯಾವುದೇ ನಾಯಕರು ಯಾವುದೇ ಜನ ಸಾಮಾನ್ಯರು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡಲು ಬಯಸುವ ಯಾರೇ ಆದರೂ ಸ್ವದೇಶಿ ವಸ್ತುಗಳನ್ನು ಖರೀದಿಸುವ ಸಂಕಲ್ಪ ಮಾಡಬೇಕು. ದೇಶದ ಹಿತಾಸಕ್ತಿಗಾಗಿ ಮಾತನಾಡಬೇಕು ಮತ್ತು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ನಾವು ಏನನ್ನಾದರೂ ಖರೀದಿಸಲು ನಿರ್ಧರಿಸಿದಾಗ ಆ ಸಮಯದಲ್ಲಿ ಅವರ ಮಾನದಂಡ ಒಂದೇ ಆಗಿರಬೇಕು. 'ನಾವು ಖರೀದಿಸುತ್ತಿರುವ ವಸ್ತು ಒಬ್ಬ ಭಾರತೀಯ ಬೆವರು ಸುರಿಸಿ ತಯಾರಿಸಿದ ವಸ್ತು ಆಗಿರಬೇಕು ಎಂಬುದು. ಭಾರತದ ಜನರು, ಭಾರತದ ಜನರ ಕೌಶಲ್ಯವನ್ನು ಬಳಸಿಕೊಂಡು, ಭಾರತದ ಜನರ ಬೆವರಿಳಿಸಿ ಶ್ರಮದಿಂದ ತಯಾರಿಸಿದ ಯಾವುದೇ ವಸ್ತುವು ನಮಗೆ ಸ್ವದೇಶಿ ಆಗಿದೆ. ನಾವು ಸ್ಥಳೀಯರಿಗೆ ಧ್ವನಿಯಾಗಬೇಕು ವೋಖಲ್ ಫಾರ್ ಲೋಕಲ್ ಎಂಬ ಮಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ಈಗಾಗಲೇ ಕರೆ ನೀಡಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟೀಕಿಸಿದ ಪ್ರಧಾನಿ, ಇಡೀ ಜಗತ್ತಿನಲ್ಲಿ ಆರ್ಥಿಕ ಸ್ವಾರ್ಥದ ರಾಜಕೀಯವಿದೆ ಮತ್ತು ಪ್ರತಿಯೊಬ್ಬರೂ ತಮ್ಮ ಸ್ವಾರ್ಥವನ್ನು ರಕ್ಷಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ್ದರು. ಆಗಸ್ಟ್ 6ರಂದು ಟ್ರಂಪ್ ಭಾರತದ ಮೇಲೆ ಶೇ. 25 ರಷ್ಟು ಪರಸ್ಪರ ಸುಂಕಗಳ ಜೊತೆಗೆ ಶೇ. 25 ರಷ್ಟು ದಂಡ ವಿಧಿಸಲಾಗುವುದು ಎಂದು ಹೇಳಿದ್ದರು. ಇದು ಆಗಸ್ಟ್ 27ರಂದೇ ಜಾರಿಗೆ ಬಂದಿದೆ. ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾಗೆ ವಿಶ್ವದ ಎಲ್ಲಾ ದೇಶಗಳಿಂದ ಆರ್ಥಿಕ ದಿಗ್ಭಂಧನವನ್ನು ಹೇರಬೇಕು ಎಂಬುದು ಟ್ರಂಪ್ ಬಯಕೆ. ಹೀಗಾಗಿ ರಷ್ಯಾದ ತೈಲವನ್ನು ಭಾರತ ಖರೀದಿ ಮಾಡಬಾರದು ಎಂಬುದು ಟ್ರಂಪ್‌ನ ಒತ್ತಾಯವಾಗಿದೆ. ಆದರೆ ವಿಶ್ವದ ಹಲವು ಸಣ್ಣ ದೇಶಗಳನ್ನು ಪ್ರಬಲ ದೇಶಗಳ ವಿರುದ್ಧ ಸದಾಕಾಲ ಎತ್ತಿಕಟ್ಟುತಲೇ ಬಂದಿರುವಂತಹ ದೊಡ್ಡ ಇತಿಹಾಸವನ್ನೇ ಹೊಂದಿರುವ ಅಮೆರಿಕಾದ ವರ್ತನೆಯನ್ನು ಬದಲಾದ ಕಾಲಮಾನದಲ್ಲಿ ಭಾರತದ ಪ್ರಧಾನಿ ಹಾಗೂ ಭಾರತದ ರಾಜನೀತಿ ಯಾವುದೇ ಕಾರಣಕ್ಕೂ ಒಪ್ಪಲು ಸಿದ್ಧವಿಲ್ಲ. ಇದೇ ಕಾರಣಕ್ಕೆ ಈಗ ಟ್ರಂಪ್ ತನ್ನ ಮಾತು ಕೇಳದ ಭಾರತದ ಮೇಲೆ ಸೇಡಿಗೆ ಮುಂದಾಗಿ ಶೇ.50ರಷ್ಟು ತೆರಿಗೆ ವಿಧಿಸಿದೆ.
ಟ್ರಂಪ್ ತೆರಿಗೆ ನೀತಿಗೆ ಅಮೆರಿಕಾದಲ್ಲೇ ವಿರೋಧ:
ಟ್ರಂಪ್ ಈ ತೆರಿಗೆ ನೀತಿಗೆ ಅಮೆರಿಕಾದಲ್ಲೇ ಅಸಮಾಧಾನ ವ್ಯಕ್ತವಾಗಿದೆ. ಅಮೆರಿಕಾದ ಆರ್ಥಿಕ ತಜ್ಞರೇ ಟ್ರಂಪ್ ತೆರಿಗೆ ನೀತಿಯನ್ನು ಖಂಡಿಸಿದ್ದಾರೆ. ಪ್ರಪಂಚದ ಅತ್ಯಂತ ಬಲಿಷ್ಠ ಆರ್ಥಿಕತೆಯಲ್ಲಿ ಒಂದಾಗಿರುವಭಾರತದ ವಿರುದ್ಧ ಅಮೆರಿಕಾದ ಈ ಆರ್ಥಿಕ ಸಮರವೂ ತನ್ನ ಕಾಲಿಗೆ ತಾನೇ ಗುಂಡು ಹೊಡೆದುಕೊಂಡಂತೆ ಎಂದು ಅಮೆರಿಕಾದ ಪ್ರಸಿದ್ಧ ಆರ್ಥಿಕ ತಜ್ಞ ರಿಚರ್ಡ್ ವೂಲ್ಫ್ ಹೇಳಿದ್ದರು. ಈ ಮಧ್ಯೆ ಎಎಪಿ ಸಂಸದ ಅಶೋಕ್ ಕುಮಾರ್ ಮಿತ್ತಲ್ ಅವರು ಕೂಡ ಆಗಸ್ಟ್ 7ರಂದೇ 1905 ರ ಸ್ವದೇಶಿ ಚಳವಳಿಯನ್ನು ಉಲ್ಲೇಖಿಸಿ ಟ್ರಂಪ್‌ಗೆ ಮುಕ್ತ ಪತ್ರ ಬರೆದಿದ್ದು, '146 ಕೋಟಿ ಭಾರತೀಯರು ಅಂದಿನಂತೆ ಇಂದು ಸ್ವದೇಶಿ ಮನೋಭಾವವನ್ನು ಹರಿಸಿದರೆ ಮತ್ತು ಅಮೆರಿಕದ ವ್ಯವಹಾರಗಳ ಮೇಲೆ ನಿರ್ಬಂಧವನ್ನು ಪ್ರಾರಂಭಿಸಿದರೆ, ಅದರ ಪರಿಣಾಮ ಭಾರತಕ್ಕಿಂತ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಹೆಚ್ಚು ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ.
ಅಂದಹಾಗೆ ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಮೆಕ್‌ಡೊನಾಲ್ಡ್ಸ್ ಅನ್ನು ನಿರ್ವಹಿಸುವ ವೆಸ್ಟ್‌ಲೈಫ್ ಫುಡ್‌ವರ್ಲ್ಡ್ ಲಿಮಿಟೆಡ್ ಪ್ರಕಾರ 2024 ರ ಆರ್ಥಿಕ ವರ್ಷದಲ್ಲಿ 2390 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 5 ರಷ್ಟು ಹೆಚ್ಚು. ಹಾಗೆಯೇ ಪೆಪ್ಸಿಕೋ ಇಂಡಿಯಾದ ಜಾಗತಿಕವಾಗಿ ಅಗ್ರಗಣ್ಯವಾದ ಮಾರುಕಟ್ಟೆಯಲ್ಲಿ ಭಾರತೀಯ ಮಾರುಕಟ್ಟೆಯೂ ಒಂದಾಗಿದೆ. ಪೆಪ್ಸಿಕೋ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 3,500ರಿಂದ 4,000 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಿದೆ.
ಇದನ್ನೂ ಓದಿ: ಡಿವೋರ್ಸ್ ಬಳಿಕ ಮತ್ತೆ ಪ್ರೀತಿಲಿ ಬಿದ್ದ ನಟಿಯ ಮಾಜಿ ಪತಿ: ಭರತ್ ತಖ್ತಾನಿ ಬಾಳಿಗೆ ಬಂದ ಹೊಸ ಚೆಲುವೆ ಯಾರು?
ಇದನ್ನೂ ಓದಿ: ಕುಡಿದು ರಸ್ತೆಯಲ್ಲೇ ಮಲಗಿದ ಶಿಕ್ಷಕ: ವೀಡಿಯೋ ವೈರಲ್ ಆಗ್ತಿದ್ದಂಗೆ ಸಸ್ಪೆಂಡ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.