
ನವದೆಹಲಿ(ಜು.10): ಆಮದು ಸುಂಕ ಏರಿಕೆ ಮಾಡಿ ಇತರೆ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅಮೆರಿಕಕ್ಕೆ ಭಾರತ ಕೂಡ ಬಿಸಿ ಮುಟ್ಟಿಸಿದ್ದು, ಕೃಷಿ ಉತ್ಪನ್ನ ಮತ್ತು ಉಕ್ಕಿನ ಮೇಲಿನ ಆಮದು ಸುಂಕ ಏರಿಕೆ ಮಾಡಿದೆ.
ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ಕು ಮತ್ತು ಅಲ್ಯುಮಿನಿಯಂ ಮೇಲಿನ ಅಮದು ಸುಂಕ ಏರಿಕೆ ಮಾಡಿದ್ದರು. ಇದಕ್ಕೆ ಪ್ರತೀಕಾರದ ಕ್ರಮವಾಗಿ ಐರೋಪ್ಯ ಒಕ್ಕೂಟ ಮತ್ತು ಚೀನಾ ತಮ್ಮ ಆಮದು ಸುಂಕ ಏರಿಕೆ ಮಾಡಿದ್ದವು. ಇದೀಗ ಈ ಪಟ್ಟಿಗೆ ಭಾರತ ಕೂಡ ಸೇರಿಕೊಂಡಿದ್ದು, ಭಾರತ ಕೆಲವು ಕೃಷಿ ಉತ್ಪನ್ನಗಳು, ಉಕ್ಕು ಮತ್ತು ಕಬ್ಬಿಣ ಆಮದು ಸುಂಕವನ್ನುಏರಿಕೆ ಮಾಡಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದ್ದು, ಭಾರತದ ವಾಣಿಜ್ಯ ಸಚಿವಾಲಯ ಹೊರಡಿಸುವ ಸುಂಕ ದರ ಪಟ್ಟಿಯಲ್ಲಿ ಸೇಬುಹಣ್ಣು, ಬಾದಾಮಿ, ಚಿಕ್ ಪೀಸ್, ಲೆಂಟಿಲ್, ವಾಲ್ ನಟ್, ಆರ್ಟೆಮಿಯಾ ಇತ್ಯಾದಿ ಉತ್ಪನ್ನಗಳ ಮೇಲಿನ ಆಮದು ತೆರಿಗೆಯನ್ನು ಹೆಚ್ಚಿಸಿದೆ.
ಇವುಗಳಲ್ಲಿ ಹೆಚ್ಚಿನವುಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅಂತೆಯೇ ಭಾರತ ಕೆಲವೊಂದು ವರ್ಗಗಳ ಕಬ್ಬಿಣ ಮತ್ತು ಉಕ್ಕು ಉತ್ಪನ್ನಗಳ ಮೇಲಿನ ಸುಂಕವನ್ನು ಕೂಡ ಏರಿಕೆ ಮಾಡಿದೆ.
ಅಮೆರಿಕದ ಉಕ್ಕು ಮತ್ತು ಅಲ್ಯುಮಿನಿಯಂ ಸುಂಕ ಏರಿಕೆಯಿಂದ ವಿನಾಯಿತಿ ಪಡೆಯುವಲ್ಲಿ ವಿಫಲವಾದ ಬಳಿಕ ಭಾರತ ವಿಶ್ವ ವಾಣಿಜ್ಯ ಸಂಘಟನೆಯಲ್ಲಿ ತನ್ನ ದೂರನ್ನು ದಾಖಲಿಸಿತ್ತು. ಅಲ್ಲದೆ ಭಾರತ ಡಬ್ಲ್ಯುಟಿಓ ಗೆ ಉತ್ಪನ್ನಗಳ ಒಂದು ಪಟ್ಟಿಯನ್ನು ಸಲ್ಲಿಸಿ ಅವುಗಳ ಮೇಲೆ ತಾನು ಹೆಚ್ಚಿನ ಸಂಕ ಭರಿಸಬೇಕಾಗುತ್ತದೆ ಎಂದು ಹೇಳಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.