
ನವದೆಹಲಿ(ಜು.10): ಸರಾಗವಾಗಿ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಸುಧಾರಣಾ ಕ್ರಮ ಕೈಗೊಂಡಿರುವ ಟಾಪ್ 10 ರಾಜ್ಯಗಳ ಪೈಕಿ ಆಂಧ್ರಪ್ರದೇಶ ನಂಬರ್ 1ಸ್ಥಾನ ಪಡೆದುಕೊಂಡಿದ್ದು, ಸಹೋದರ ರಾಜ್ಯ ತೆಲಂಗಾಣ ಎರಡನೇ ಸ್ಥಾನಕ್ಕೇರಿ ಗಮನಾರ್ಹ ಸಾಧನೆ ಮಾಡಿದೆ. ಕಳೆದ ವರ್ಷ ಮೊದಲನೇ ಸ್ಥಾನದಲ್ಲಿದ್ದ ತೆಲಂಗಾಣ ಈ ಬಾರಿ ಎರಡನೇ ಸ್ಥಾನ ಪಡೆದಿದ್ದು, ಆಂಧ್ರಪ್ರದೇಶ ಮೊದಲನೇ ಸ್ಥಾನವನ್ನು ತನ್ನದಾಗಿಸಿಕೊಂಡು ಗೆಲುವಿನ ನಗೆ ಬೀರಿದೆ.
ಇನ್ನು ಸುಗಮ ವ್ಯವಹರಕ್ಕೆ ಸುಧಾರಣಾ ಕ್ರಮ ಕೈಗೊಂಡಿರುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 8ನೇ ಸ್ಥಾನ ಸಿಕ್ಕಿದ್ದು, ದೆಹಲಿ 23ನೇ ಸ್ಥಾನದಲ್ಲಿ ಇದೆ. ಸುಗಮ ವ್ಯವಹಾರಕ್ಕಾಗಿ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಕಳೆದ ವರ್ಷ ರೂಪಿಸಿದ್ದ 405 ಶಿಫಾರಸುಗಳನ್ನು ಯಾವ ರಾಜ್ಯ ಎಷ್ಟರ ಮಟ್ಟಿಗೆ ಜಾರಿಗೆ ತಂದಿದೆ ಎಂಬುದರ ಆಧಾರದ ಮೇಲೆ ಈ ಶ್ರೇಯಾಂಕವನ್ನು ನೀಡಲಾಗಿದೆ.
ಶಿಫಾರಸುಗಳನ್ನು ಜಾರಿಗೊಳಿಸುವಲ್ಲಿ ಶೇ. 98.42 ರಷ್ಟು ಸಾಧನೆ ಮಾಡಿರುವ ಆಂಧ್ರಪ್ರದೇಶ ನಂ.1 ಸ್ಥಾನದಲ್ಲಿದೆ. ಶೇ. 98.33 ಸಾಧನೆಯೊಂದಿಗೆ ತೆಲಂಗಾಣ 2ನೇ ಸ್ಥಾನದಲ್ಲಿದೆ. ಅಭಿವೃದ್ಧಿಯಲ್ಲಿ ಮುಂದಿರುವುದಾಗಿ ಬಿಂಬಿತವಾಗಿರುವ ಗುಜರಾತ್ ಶೇ. 97.96 ಸಾಧನೆಯೊಂದಿಗೆ 5ನೇ ಸ್ಥಾನ ಗಳಿಸಿದೆ.
ಶೇ. 96.40 ರಷ್ಟು ಅಂಕ ಪಡೆದಿರುವ ಕರ್ನಾಟಕ 8ನೇ ಸ್ಥಾನ ಪಡೆದುಕೊಂಡಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿ 31.6 ಸಾಧನೆಯೊಂದಿಗೆ 23ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. 2015 ರಲ್ಲಿ ನಂಬರ್ 1 ಸ್ಥಾನದಲ್ಲಿದ್ದ ಗುಜರಾತ್ ಈ ಬಾರಿ ಐದನೇ ಸ್ಥಾನಕ್ಕೆ ಕುಸಿತ ಕಂಡಿದೆ. ಕಳೆದ ವರ್ಷ ತೆಲಂಗಾಣ ಮತ್ತು ಜಾರ್ಖಂಡ್ , ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದವು. ಈ ವರ್ಷ ಜಾರ್ಖಂಡ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು, ಹರಿಯಾಣ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.