
1991ರಲ್ಲಿ, ಭಾರತ ತನ್ನ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿತು. ಭಾರತ ಬೇರೆ ದೇಶಗಳಿಂದ ಅವಶ್ಯಕ ವಸ್ತುಗಳನ್ನು ಖರೀದಿಸಲು ಬೇಕಾದ ವಿದೇಶೀ ವಿನಿಮಯದ, ಅದರಲ್ಲೂ ಅಮೆರಿಕನ್ ಡಾಲರ್ನ ಕೊರತೆಯನ್ನು ಎದುರಿಸುತ್ತಿತ್ತು. ಭಾರತದ ಬಳಿ ಕೆಲವೇ ವಾರಗಳ ಕಾಲ ಆಮದು ಮಾಡಿಕೊಳ್ಳುವಷ್ಟು ಮಾತ್ರವೇ ಹಣ ಉಳಿದಿತ್ತು. ಸೀಮಿತ ಆಯ್ಕೆಗಳನ್ನು ಮಾತ್ರವೇ ಹೊಂದಿದ್ದ ಭಾರತ ಸರ್ಕಾರ ತನ್ನ ಚಿನ್ನದ ಸಂಗ್ರಹವನ್ನೇ ಹಸ್ತಾಂತರಿಸಬೇಕಾಯಿತು.
ಚಿನ್ನದ ಗಟ್ಟಿಗಳನ್ನು ವಿಮಾನಕ್ಕೆ ತುಂಬಿ, ಅದನ್ನು ವಿದೇಶಕ್ಕೆ ರವಾನಿಸಲಾಯಿತು. ತುರ್ತು ಸಾಲವನ್ನು ಪಡೆಯುವ ಸಲುವಾಗಿ, ಈ ಚಿನ್ನವನ್ನೇ ಖಾತರಿಯಾಗಿ ನೀಡಲಾಯಿತು. ಸ್ವಾತಂತ್ರ್ಯದ ನಂತರ ತನ್ನ ಆರ್ಥಿಕತೆಯನ್ನು ನಿರ್ಮಿಸಲು ಕಠಿಣ ಪರಿಶ್ರಮ ಪಟ್ಟ ಭಾರತಕ್ಕೆ ಇದೊಂದು ಯಾತನೆಯ ಕ್ಷಣವಾಗಿತ್ತು.
ಈ ಘಟನೆ ನಡೆದ ಮೂವತ್ತೈದು ವರ್ಷಗಳ ಬಳಿಕ, ಭಾರತ ಒಂದು ಮಹತ್ವದ ತಿರುವಿನ ಸ್ಥಿತಿಗೆ ಸಾಕ್ಷಿಯಾಗಿದೆ. ಆರ್ಥಿಕ ಅವಶ್ಯಕತೆಯ ಕಾರಣಕ್ಕೆ ವಿದೇಶಗಳಿಗೆ ಚಿನ್ನ ರವಾನಿಸುವ ಬದಲು, ಭಾರತ ತನ್ನ ಚಿನ್ನವನ್ನು ಈಗ ಮರಳಿ ತರುತ್ತಿದೆ!
2026ರ ಎಪ್ರಿಲ್ನಿಂದ ಸೆಪ್ಟೆಂಬರ್ ನಡುವೆ, ದೇಶದ ಹಣಕಾಸು ಮತ್ತು ಆರ್ಥಿಕ ಮೀಸಲುಗಳನ್ನು ನಿರ್ವಹಿಸುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ವಿದೇಶಗಳಲ್ಲಿದ್ದ ಸಂಗ್ರಹಣಾ ಕೇಂದ್ರಗಳಿಂದ 60 ಟನ್ ಚಿನ್ನವನ್ನು ಭಾರತಕ್ಕೆ ಮರಳಿ ತಂದಿದೆ.
ಈಗ ಭಾರತವು ತನ್ನ ಗಡಿಯೊಳಗೆ ಸುಮಾರು 740 ಟನ್ ಚಿನ್ನವನ್ನು ಸಂಗ್ರಹಿಸಿಟ್ಟುಕೊಂಡಿದೆ. ಇದು ದೇಶದ ಒಟ್ಟು ಚಿನ್ನದ ಮೀಸಲಿನ 84% ಪಾಲು ಹೊಂದಿದೆ. ಕೇವಲ ನಾಲ್ಕು ವರ್ಷಗಳ ಹಿಂದೆ ದೇಶದೊಳಗೆ ಸಂಗ್ರಹಿಸಲಾಗಿದ್ದ ಚಿನ್ನದ ಪ್ರಮಾಣ ಕೇವಲ 39% ಇತ್ತು.
ಆದರೆ, ಭಾರತದ ಒಟ್ಟು ಚಿನ್ನದ ಮೀಸಲು 880.52 ಟನ್ಗಳಷ್ಟೇ ಇದೆ. ಈ ಅವಧಿಯಲ್ಲಿ ದೇಶ ಹೆಚ್ಚುವರಿ ಚಿನ್ನವನ್ನು ಖರೀದಿಸಿಲ್ಲ. ಈಗಾಗಲೇ ಹೊಂದಿದ್ದ ಚಿನ್ನದ ಹೆಚ್ಚಿನ ಭಾಗವನ್ನು ವಿದೇಶಿ ಸಂಗ್ರಹಣಾ ಕೇಂದ್ರಗಳಿಂದ ಭಾರತದಲ್ಲಿರುವ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ ಅಷ್ಟೇ.
2022ರಲ್ಲಿ ರಷ್ಯಾ ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ಆರಂಭಿಸಿದಾಗ ಜಗತ್ತಿನ ಮುಂದೆ ಒಂದು ಮಹತ್ವದ ಪಾಠ ತೆರೆದುಕೊಂಡಿತು. ಇದಕ್ಕೆ ಪ್ರತಿಯಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಸರ್ಕಾರಗಳು ತಮ್ಮ ದೇಶಗಳಲ್ಲಿದ್ದ ರಷ್ಯಾದ ಕೇಂದ್ರ ಬ್ಯಾಂಕ್ನ ಸುಮಾರು 300 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಗಳನ್ನು ಬಳಸಿಕೊಳ್ಳದಂತೆ ನಿರ್ಬಂಧಿಸಿದವು.
ನಿಮ್ಮ ಅಮೂಲ್ಯ ವಸ್ತುಗಳನ್ನು ಬೇರೆಯವರ ಲಾಕರ್ನಲ್ಲಿ ಇಟ್ಟಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ಆ ವಸ್ತುಗಳು ನಿಮ್ಮದೇ ಆಗಿದ್ದರೂ, ಲಾಕರ್ನ ನಿಯಂತ್ರಣ ಹೊಂದಿರುವ ವ್ಯಕ್ತಿ ನಿಮಗೆ ಅವುಗಳನ್ನು ಬಳಸಲು ಅವಕಾಶ ನೀಡದಿರಬಹುದು. ದೇಶಗಳು ತಮ್ಮ ಸಂಪತ್ತನ್ನು ವಿದೇಶಗಳಲ್ಲಿ ಸಂಗ್ರಹಿಸಿಟ್ಟಾಗಲೂ ಇಂತಹ ಪರಿಸ್ಥಿತಿ ಎದುರಾಗಬಹುದು.
ಒಂದು ದೇಶ ತನ್ನ ಗಡಿಯೊಳಗೇ ಚಿನ್ನವನ್ನು ಸಂಗ್ರಹಿಸಿ ಇಟ್ಟಾಗ ಅದಕ್ಕೆ ಚಿನ್ನದ ಮೇಲೆ ಪೂರ್ಣ ನಿಯಂತ್ರಣ ಇರುತ್ತದೆ. ಆಗ ಸರ್ಕಾರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವಿದೇಶೀ ಸರ್ಕಾರಗಳ ಮೇಲಾಗಲಿ, ಸಂಸ್ಥೆಗಳ ಮೇಲಾಗಲಿ ಅವಲಂಬಿಸುವ ಅಗತ್ಯವಿಲ್ಲ.
ರಷ್ಯಾದ ಅನುಭವದ ಕಾರಣದಿಂದ ತಾನು ಈ ಕ್ರಮ ಕೈಗೊಂಡಿರುವುದಾಗಿ ಆರ್ಬಿಐ ಅಧಿಕೃತವಾಗಿ ಹೇಳಿಕೊಂಡಿಲ್ಲ. ಅದು ನೀಡಿರುವ ಕಾರಣಗಳು ಸರಳ. ಭಾರತದಲ್ಲಿ ಹೆಚ್ಚಿನ ಪ್ರಮಾಣದ ಚಿನ್ನವನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಅಗತ್ಯವಾದ ವ್ಯವಸ್ಥೆಗಳಿವೆ. ವಿವಿಧ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಕಾರಣದಿಂದ, ರಾಷ್ಟ್ರೀಯ ಸಂಪತ್ತಿನ ರಕ್ಷಣೆಯ ಮಹತ್ವ ಮತ್ತಷ್ಟು ಹೆಚ್ಚಿದೆ.
ಹಲವು ವರ್ಷಗಳಿಂದ ಬಹಳಷ್ಟು ದೇಶಗಳು ತಮ್ಮ ಚಿನ್ನದ ದೊಡ್ಡ ಪ್ರಮಾಣವನ್ನು ಲಂಡನ್ ಮತ್ತು ನ್ಯೂಯಾರ್ಕ್ನಲ್ಲಿ ಇರಿಸಿವೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಅಂತೂ ಹಲವು ದೇಶಗಳಿಗೆ ಸುರಕ್ಷಿತ ಚಿನ್ನದ ಸಂಗ್ರಹಣಾ ಸೌಲಭ್ಯಗಳನ್ನು ಒದಗಿಸುತ್ತಿದೆ.
ಲಂಡನ್ ಜಗತ್ತಿನ ಅತಿದೊಡ್ಡ ಚಿನ್ನದ ವ್ಯಾಪಾರ ಕೇಂದ್ರಗಳಲ್ಲೊಂದು. ಅಲ್ಲಿ ಚಿನ್ನವನ್ನು ಸಂಗ್ರಹಿಸಿಟ್ಟುಕೊಳ್ಳುವುದರಿಂದ ಅಗತ್ಯವಿದ್ದಾಗ ಅದನ್ನು ಮಾರಾಟ ಮಾಡುವುದು, ವಿನಿಮಯ ಮಾಡಿಕೊಳ್ಳುವುದು ಅಥವಾ ಸಾಲ ಪಡೆಯಲು ಭದ್ರತೆಯಾಗಿ ಬಳಸುವುದು ದೇಶಗಳಿಗೆ ಸುಲಭವಾಗುತ್ತದೆ.
ಈ ಅನುಕೂಲತೆಗಳ ಕಾರಣದಿಂದಲೇ ಭಾರತ ಇನ್ನೂ 140 ಟನ್ಗಳಷ್ಟು ಚಿನ್ನವನ್ನು ವಿದೇಶಗಳಲ್ಲೇ ಇರಿಸಿದೆ.
ಹಾಗೆಂದು ಭಾರತವೊಂದೇ ಈಗ ತನ್ನ ಚಿನ್ನವನ್ನು ಸ್ವದೇಶಕ್ಕೆ ಮರಳಿ ತರುತ್ತಿಲ್ಲ. 2013ರಿಂದ 2017ರ ಅವಧಿಯಲ್ಲಿ ಜರ್ಮನಿ ನ್ಯೂಯಾರ್ಕ್ ಮತ್ತು ಪ್ಯಾರಿಸ್ನಿಂದ 674 ಟನ್ ಚಿನ್ನವನ್ನು ಮರಳಿ ತಂದಿತ್ತು. ನೆದರ್ಲ್ಯಾಂಡ್ಸ್ ನ್ಯೂಯಾರ್ಕ್ನಿಂದ 122 ಟನ್ ಚಿನ್ನವನ್ನು ಆಮ್ಸ್ಟರ್ಡ್ಯಾಮ್ಗೆ ಸ್ಥಳಾಂತರಿಸಿತು. ಆಸ್ಟ್ರಿಯಾ ಲಂಡನ್ನಿಂದ 90 ಟನ್ ಚಿನ್ನವನ್ನು ವಿಯೆನ್ನಾಕ್ಕೆ ವರ್ಗಾಯಿಸಿತು.
ಏಷ್ಯಾದಲ್ಲೂ ನೂತನ ಚಿನ್ನದ ಸಂಗ್ರಹಣಾ ಕೇಂದ್ರಗಳು ರೂಪುಗೊಳ್ಳುತ್ತಿವೆ. 2026ರ ನವೆಂಬರ್ ಆರಂಭದಲ್ಲಿ ಸಿಂಗಾಪುರವು ವಿದೇಶಿ ಕೇಂದ್ರ ಬ್ಯಾಂಕ್ಗಳಿಗಾಗಿ ಸುರಕ್ಷಿತ ಚಿನ್ನದ ಸಂಗ್ರಹಣಾ ಸೇವೆಗಳನ್ನು ಆರಂಭಿಸಿತು. ಇದರ ಹೊಸ ಸೌಲಭ್ಯದಲ್ಲಿ 500 ಟನ್ಗಳವರೆಗೆ ಚಿನ್ನವನ್ನು ಸಂಗ್ರಹಿಸಿಡಬಹುದು. ಹಾಂಗ್ಕಾಂಗ್ ಕೂಡ ಚಿನ್ನದ ಸಂಗ್ರಹಣೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ವಿಸ್ತರಿಸುತ್ತಿದೆ.
ಲಂಡನ್ ಮತ್ತು ನ್ಯೂಯಾರ್ಕ್ ಈಗಲೂ ಪ್ರಮುಖ ಅಂತರರಾಷ್ಟ್ರೀಯ ಹಣಕಾಸು ಕೇಂದ್ರಗಳಾಗಿ ಮುಂದುವರಿದಿವೆ. ಆದರೆ, ತಮ್ಮ ರಾಷ್ಟ್ರೀಯ ಸಂಪತ್ತನ್ನು ಎಲ್ಲಿ ಸಂಗ್ರಹಿಸಿಡಬೇಕು ಎಂಬ ಬಗ್ಗೆ ದೇಶಗಳು ಈಗ ಹೆಚ್ಚು ಎಚ್ಚರಿಕೆಯಿಂದ ಯೋಚಿಸುತ್ತಿವೆ. ಭಾರತದ ಪಾಲಿಗೆ ಈ ಬೆಳವಣಿಗೆ ಹೆಚ್ಚು ಭಾವನಾತ್ಮಕ ಮಹತ್ವ ಹೊಂದಿದೆ.
1991ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಆರ್ಬಿಐ 46.91 ಟನ್ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್ ಸೇರಿದಂತೆ ವಿದೇಶಗಳಿಗೆ ಸಾಗಿಸಿತ್ತು. ಈ ಚಿನ್ನವನ್ನು ಭದ್ರತೆಯಾಗಿ ಒದಗಿಸುವ ಮೂಲಕ ಭಾರತವು ಸುಮಾರು 405 ಮಿಲಿಯನ್ ಡಾಲರ್ ಮೌಲ್ಯದ ತುರ್ತು ಆರ್ಥಿಕ ನೆರವನ್ನು ಪಡೆಯಲು ಸಾಧ್ಯವಾಗಿತ್ತು.
ಇಂದು ವಿದೇಶಿ ಹಣ ಮತ್ತು ಚಿನ್ನವನ್ನು ಒಳಗೊಂಡ ಭಾರತದ ವಿದೇಶಿ ವಿನಿಮಯ ಮೀಸಲು 700 ಬಿಲಿಯನ್ ಡಾಲರ್ಗಳನ್ನು ಮೀರಿದೆ. ತುರ್ತು ಸಾಲ ಪಡೆಯಲು ಚಿನ್ನವನ್ನು ವಿದೇಶಗಳಿಗೆ ಕಳುಹಿಸಬೇಕಾದ ಪರಿಸ್ಥಿತಿಯಲ್ಲಿ ಈಗ ಭಾರತವಿಲ್ಲ.
ಕಳೆದ 35 ವರ್ಷಗಳಲ್ಲಿ ಭಾರತ ಸಾಗಿ ಬಂದ ಆರ್ಥಿಕ ಹಾದಿ ಕೋಟ್ಯಂತರ ಭಾರತೀಯರ ಕಠಿಣ ಪರಿಶ್ರಮ, ಬದ್ಧತೆ, ಮತ್ತು ದೃಢ ಸಂಕಲ್ಪದ ಪ್ರತಿನಿಧಿಯಾಗಿದೆ. ತನ್ನ ಚಿನ್ನವನ್ನು ದೇಶಕ್ಕೆ ಮರಳಿ ತರುತ್ತಿರುವುದು ಭಾರತದ ಹೆಚ್ಚುತ್ತಿರುವ ಆರ್ಥಿಕ ಆತ್ಮವಿಶ್ವಾಸದ ಸಂಕೇತವಾಗಿದೆ.
ರಾಷ್ಟ್ರೀಯ ಭದ್ರತೆ ಎಂದರೆ ಕೇವಲ ಸೈನಿಕರು, ಯುದ್ಧವಿಮಾನಗಳು ಮತ್ತು ಯುದ್ಧನೌಕೆಗಳ ಮೂಲಕ ಗಡಿಗಳನ್ನು ರಕ್ಷಿಸುವುದಷ್ಟೇ ಅಲ್ಲ. ದೇಶದ ಆರ್ಥಿಕತೆಯನ್ನು ಸುರಕ್ಷಿತವಾಗಿಡುವುದು ಮತ್ತು ಸಂಕಷ್ಟದ ಸಮಯದಲ್ಲಿ ಅಗತ್ಯ ಹಣಕಾಸು ಸಂಪನ್ಮೂಲಗಳು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ.
ಹಾಗೆಂದು ಭಾರತ ಅಂತಾರಾಷ್ಟ್ರೀಯ ಆರ್ಥಿಕ ಮಾರುಕಟ್ಟೆಗಳಿಗೆ ತನ್ನ ಬಾಗಿಲು ಮುಚ್ಚುತ್ತಿಲ್ಲ. ಅದು ತನ್ನ ಬಹುತೇಕ ಚಿನ್ನವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು, ವಿದೇಶೀ ಸಂಗ್ರಹಣಾ ವ್ಯವಸ್ಥೆಗಳನ್ನೂ ನಿರ್ವಹಿಸುತ್ತಿದೆ. ಭಾರತದ ಚಿನ್ನ ಸಾಗಿಬಂದಿರುವ ಹಾದಿ ರಾಷ್ಟ್ರೀಯ ಪರಿವರ್ತನೆ ವೃದ್ಧಿಸಿದ ಕಥೆಯನ್ನು ಹೇಳುತ್ತಿದೆ.
1991ರಲ್ಲಿ ಭಾರತದ ಮುಂದೆ ಹೆಚ್ಚಿನ ಆಯ್ಕೆಗಳೇ ಇಲ್ಲದ್ದರಿಂದ ಅದು ಚಿನ್ನವನ್ನು ವಿದೇಶಗಳಿಗೆ ಕಳುಹಿಸಿತ್ತು. ಆದರೆ, 2026ರಲ್ಲಿ, ಭಾರತಕ್ಕೆ ಆಯ್ಕೆಯ ಸ್ವಾತಂತ್ರ್ಯ ಇರುವುದರಿಂದ ಅದು ತನ್ನ ಚಿನ್ನವನ್ನು ಮರಳಿ ತಾಯ್ನಾಡಿಗೆ ತರುತ್ತಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.