
ಬರ್ನ್(ಅ.10): ಸ್ವಿಸ್ ಬ್ಯಾಂಕ್ಗಳಲ್ಲಿ ಹಣ ಇರಿಸಿದ್ದ ಭಾರತೀಯ ವ್ಯಕ್ತಿಗಳು ಹಾಗೂ ಕಂಪನಿಗಳ 2ನೇ ಪಟ್ಟಿಭಾರತಕ್ಕೆ ಲಭಿಸಿದೆ. ಇದರಿಂದಾಗಿ ಕಾಳಧನಿಕರ ವಿರುದ್ಧ ಮೋದಿ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಮತ್ತೊಂದು ಯಶಸ್ಸು ಲಭಿಸಿದಂತಾಗಿದೆ.
ಭಾರತವು ಸ್ವಿಸ್ ಬ್ಯಾಂಕ್ ಖಾತೆದಾರರ ಮಾಹಿತಿ ವಿನಿಮಯಕ್ಕೆ ಸಂಬಂಧಿಸಿದಂತೆ ಸ್ವಿಜರ್ಲೆಂಡ್ ಸರ್ಕಾರದೊಂದಿಗೆ 2 ವರ್ಷದ ಹಿಂದೆ ಒಪ್ಪಂದ ಮಾಡಿಕೊಂಡಿತ್ತು. ಭಾರತ ಸೇರಿದಂತೆ 75 ದೇಶಗಳಿಗೆ ಮೊದಲ ಪಟ್ಟಿ2019ರ ಸೆಪ್ಟೆಂಬರ್ನಲ್ಲಿ ಸಿಕ್ಕಿತ್ತು. ಆಗ ಒಟ್ಟು 31 ಲಕ್ಷ ಖಾತೆಗಳ ಮಾಹಿತಿಯನ್ನು ಎಲ್ಲ ದೇಶಗಳಿಗೆ ಸ್ವಿಜರ್ಲೆಂಡ್ ನೀಡಿತ್ತು.
ಈಗ 2ನೇ ಪಟ್ಟಿಯನ್ನು 86 ದೇಶಗಳಿಗೆ ಹಸ್ತಾಂತರಿಸಲಾಗಿದೆ. ಇದರಲ್ಲಿ ಭಾರತ ಸೇರಿದಂತೆ ಯಾವುದೇ ದೇಶದ ಹೆಸರನ್ನು ಸ್ವಿಸ್ ನಮೂದಿಸಿಲ್ಲ. ಆದರೆ, ‘ಸ್ವಿಸ್ ಜತೆ ಒಪ್ಪಂದ ಮಾಡಿಕೊಂಡ ದೇಶಗಳಲ್ಲಿ ಭಾರತ ಪ್ರಮುಖವಾಗಿತ್ತು. ಹೀಗಾಗಿ 30 ಲಕ್ಷಕ್ಕೂ ಅಧಿಕ ಖಾತೆಗಳನ್ನು 86 ದೇಶಗಳ ಜತೆ ಸ್ವಿಜರ್ಲೆಂಡ್ ವಿನಿಮಯ ಮಾಡಿಕೊಂಡಿದೆ. ಇದರಲ್ಲಿ ಭಾರತೀಯರ ಹೆಸರುಗಳು ಕೂಡ ಇವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಷ್ಟುಖಾತೆಗಳ ವಿವರ ಭಾರತಕ್ಕೆ ಸಿಕ್ಕಿದೆ ಹಾಗೂ ಹಣದ ಮೌಲ್ಯವೆಷ್ಟುಎಂಬ ಮಾಹಿತಿ ನೀಡಲು ಅವರು ನಿರಾಕರಿಸಿದ್ದು, ‘ಒಪ್ಪಂದದ ಪ್ರಕಾರ ಗೌಪ್ಯತೆ ಕಾಯ್ದುಕೊಳ್ಳಬೇಕಾದ ಕಾರಣ ಇವುಗಳ ಮಾಹಿತಿ ನೀಡಲಾಗದು’ ಎಂದಿದ್ದಾರೆ. ಆದರೆ, ಈ ಖಾತೆಗಳು ಭಾರತೀಯ ಉದ್ಯಮಿಗಳು, ಅಮೆರಿಕ, ಆಫ್ರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಹೂಡಿಕೆ ಮಾಡಿರುವ ಅನಿವಾಸಿ ಭಾರತೀಯ ವ್ಯಕ್ತಿಗಳಿಗೆ ಸೇರಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ 1 ವರ್ಷದಲ್ಲಿ ಕೋರಿಕೆಯ ಮೇಲೆ ಈಗಾಗಲೇ 100ಕ್ಕೂ ಹೆಚ್ಚು ಭಾರತೀಯರು ಹಾಗೂ ಕಂಪನಿಗಳ ಹೆಸರನ್ನು ಭಾರತಕ್ಕೆ ಸ್ವಿಜರ್ಲೆಂಡ್ ಹಸ್ತಾಂತರಿಸಿದೆ. ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಇವುಗಳ ವಿವರ ಬೇಕಿತ್ತು. 2018ಕ್ಕಿಂತ ಮೊದಲೇ ಬಂದ್ ಆಗಿರುವ ಹಳೆಯ ಖಾತೆಗಳು ಇವಾಗಿದ್ದವು ಎಂದು ಅವರು ತಿಳಿಸಿದ್ದಾರೆ.
‘ಈಗ ಲಭಿಸಿರುವ ಮಾಹಿತಿ ಮಹತ್ವದ್ದಾಗಿದ್ದು, ಇದು ಕಾಳಧನಿಕರ ವಿರುದ್ಧದ ಪ್ರಕರಣಗಳನ್ನು ಬಲಗೊಳಿಸುವಲ್ಲಿ ನೆರವಾಗಬಹುದು’ ಎಂದು ತಜ್ಞರು ಹೇಳಿದ್ದಾರೆ.
"
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.