ಅಮೆರಿಕ-ಇರಾನ್‌ ಯುದ್ಧದ ನಡುವೆಯೂ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ ಭಾರತದ ವಿದೇಶಿ ವಿನಿಮಯ ಮೀಸಲು

Published : Sep 05, 2026, 09:05 AM IST
Gold Imports, Forex Reserves, and India’s Balancing Act

ಸಾರಾಂಶ

ಆಗಸ್ಟ್ 28ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ $11.475 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿ, ಸಾರ್ವಕಾಲಿಕ ಗರಿಷ್ಠ ಮಟ್ಟವಾದ $740.803 ಬಿಲಿಯನ್ ಡಾಲರ್‌ಗೆ ತಲುಪಿದೆ.

ನವದೆಹಲಿ (ಸೆ.5): ದೇಶದ ಜಿಡಿಪಿ (GDP) ಪ್ರಗತಿ ದರದ ಕುರಿತು ರಾಜಕೀಯ ವಲಯದಲ್ಲಿ ವಾಗ್ದಾಳಿಗಳು ನಡೆಯುತ್ತಿರುವ ಬೆನ್ನಲ್ಲೇ, ಭಾರತದ ಅರ್ಥವ್ಯವಸ್ಥೆಗೆ ವಿದೇಶಿ ವಿನಿಮಯ ಮೀಸಲು ನಿಧಿ (Forex Reserves) ಅತ್ಯಂತ ಸಶಕ್ತ ಬಲ ನೀಡಿದೆ. ಜಾಗತಿಕ ಮಟ್ಟದಲ್ಲಿ ಅಮೆರಿಕ-ಇರಾನ್ ಯುದ್ಧದ ಭೀತಿ ಮತ್ತು ಆರ್ಥಿಕ ಅಸ್ಥಿರತೆಯ ಸವಾಲುಗಳಿದ್ದ ನಡವೆಯೂ, ಭಾರತ ತನ್ನ ವಿದೇಶಿ ವಿನಿಮಯ ಸಂಗ್ರಹದಲ್ಲಿ ಐತಿಹಾಸಿಕ ಮೈಲಿಗಲ್ಲು ನೆಟ್ಟಿದೆ. ಆಗಸ್ಟ್ 28ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯು ಬರೋಬ್ಬರಿ 11.475 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ 740.803 ಬಿಲಿಯನ್ ಡಾಲರ್‌ಗೆ ಜಿಗಿದಿದೆ. ಶುಕ್ರವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈ ಅಧಿಕೃತ ಆಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

ವಿಪಕ್ಷಗಳ ಆಕ್ಷೇಪಗಳಿಗೆ ಈ ಶ್ರೇಷ್ಠ ಸಾಧನೆಯ ಮೂಲಕ ಸರ್ಕಾರ ಉತ್ತರ ನೀಡಿದೆ ಎಂದು ವಿಶ್ಲೇಷಿಸಲಾಗಿದೆ. ಈ ಸಕಾರಾತ್ಮಕ ಸುದ್ದಿಯ ಎಫೆಕ್ಟ್ ಶುಕ್ರವಾರ ಭಾರತೀಯ ಶೇರು ಮಾರುಕಟ್ಟೆಯ (NSE, BSE) ಏರಿಕೆಯಲ್ಲೂ ಕಂಡುಬಂದಿದ್ದು, ಮುಂಬರುವ ಸೋಮವಾರವೂ ಮಾರುಕಟ್ಟೆಯಲ್ಲಿ ಗೂಳಿ ಓಟ (ಬುಲಿಶ್ ಟ್ರೆಂಡ್) ಮುಂದುವರಿಯುವ ಸಾಧ್ಯತೆಯಿದೆ.

ವಿದೇಶಿ ವಿನಿಮಯ ನಿಧಿ ಹೆಚ್ಚಾಗಿದ್ದು ಹೇಗೆ?

ಆರ್‌ಬಿಐ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಆಗಸ್ಟ್ 28ರ ಕೊನೆಯ ವಾರದಲ್ಲಿ ಪ್ರಮುಖ ಘಟಕಗಳಲ್ಲಾದ ಏರಿಳಿತಗಳು ಹೀಗಿವೆ. ವಿದೇಶಿ ಕರೆನ್ಸಿ ಆಸ್ತಿಯ ಮೌಲ್ಯವು 9.337 ಬಿಲಿಯನ್ ಡಾಲರ್‌ಗಳಿಂದ ಹೆಚ್ಚಾಗಿ ಬರೋಬ್ಬರಿ 600.670 ಬಿಲಿಯನ್ ಡಾಲರ್‌ಗೆ ತಲುಪಿದೆ. (ಎಫ್‌ಸಿಎ ಎಂದರೆ ಯುಎಸ್ ಡಾಲರ್ ಹೊರತಾಗಿ ಯುರೋ, ಯೆನ್ ಮತ್ತು ಪೌಂಡ್‌ನಂತಹ ಪ್ರಮುಖ ಜಾಗತಿಕ ಕರೆನ್ಸಿಗಳನ್ನು ಒಳಗೊಂಡಿರುತ್ತದೆ, ಇವುಗಳ ಒಟ್ಟು ಮೌಲ್ಯವನ್ನು ಡಾಲರ್‌ಗಳ ಲೆಕ್ಕದಲ್ಲೇ ತೋರಿಸಲಾಗುತ್ತದೆ).

ಇದಕ್ಕೂ ಮೊದಲು, ಆಗಸ್ಟ್ 21ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ಫೋರೆಕ್ಸ್ ನಿಧಿ 729.328 ಬಿಲಿಯನ್ ಡಾಲರ್ ತಲುಪಿ ದಾಖಲೆ ಬರೆದಿತ್ತು. ಈಗ ಆ ದಾಖಲೆಯನ್ನು ಭಾರತವೇ ಮುರಿದಿದೆ.

ಚಿನ್ನದ ಸಂಗ್ರಹದಲ್ಲೂ ಭರ್ಜರಿ ಏರಿಕೆ: ಫೋರೆಕ್ಸ್ ನಿಧಿಯ ಎರಡನೇ ಅತಿ ದೊಡ್ಡ ಭಾಗವಾದ ಚಿನ್ನದ ಸಂಗ್ರಹದ ಮೌಲ್ಯ 2.191 ಬಿಲಿಯನ್ ಡಾಲರ್‌ನಷ್ಟು ಹೆಚ್ಚಾಗಿದ್ದು, ಒಟ್ಟು 116.409 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.

ವಿಶೇಷ ಹಿಂಪಡೆಯುವಿಕೆ ಹಕ್ಕು (SDR): ಆರ್‌ಬಿಐ ಪ್ರಕಾರ, ಎಸ್‌ಡಿಆರ್ ಮೌಲ್ಯವು 43 ಮಿಲಿಯನ್ ಡಾಲರ್‌ಗಳಷ್ಟು ಕಡಿಮೆಯಾಗಿ 18.810 ಬಿಲಿಯನ್ ಡಾಲರ್‌ಗೆ ತಲುಪಿದೆ.

ಐಎಮ್‌ಎಫ್ ರಿಸರ್ವ್ (IMF Reserve): ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ ಆರ್‌ಬಿಐನ ರಿಸರ್ವ್ ಪೋಸಿಷನ್ 11 ಮಿಲಿಯನ್ ಡಾಲರ್‌ನಷ್ಟು ಸಣ್ಣ ಕುಸಿತ ಕಂಡು 4.914 ಬಿಲಿಯನ್ ಡಾಲರ್‌ಗೆ ಬಂದು ತಲುಪಿದೆ.

ವಿದೇಶಿ ವಿನಿಮಯ ಸಂಗ್ರಹವನ್ನು ಬಲಪಡಿಸಲು ಆರ್‌ಬಿಐ ಜಾರಿಗೆ ತಂದ ಹಲವು ಆಕರ್ಷಕ ಯೋಜನೆಗಳು ಮತ್ತು ಕಾರ್ಯತಂತ್ರಗಳು ಈ ಯಶಸ್ಸಿಗೆ ಮುಖ್ಯ ಕಾರಣವಾಗಿವೆ. ಭಾರತದ ಫೋರೆಕ್ಸ್ ನಿಧಿಗೆ ಇತ್ತೀಚಿನ ದಿನಗಳಲ್ಲಿ ಸುಮಾರು 136 ಬಿಲಿಯನ್ ಡಾಲರ್‌ಗೂ ಅಧಿಕ ಮೊತ್ತ ಸೇರ್ಪಡೆಯಾಗಿದೆ.

ಬಲವಾದ ಫೋರೆಕ್ಸ್ ನಿಧಿ ದೇಶಕ್ಕೆ ಏಕೆ ಮುಖ್ಯ?

ಯಾವುದೇ ದೇಶದ ಆರ್ಥಿಕ ಆರೋಗ್ಯ ಮತ್ತು ಜಾಗತಿಕ ಸ್ಥಿರತೆಯನ್ನು ಅಳೆಯಲು ಅದರ ವಿದೇಶಿ ವಿನಿಮಯ ನಿಧಿ ಪ್ರಮುಖ ಅಳತೆಗೋಲಾಗಿದೆ.

ರೂಪಾಯಿ ಮೌಲ್ಯ ಸ್ಥಿರತೆ: ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ತೀವ್ರ ಕುಸಿತ ಕಾಣದಂತೆ ತಡೆಯಲು ಈ ಮೀಸಲು ನಿಧಿ ರಕ್ಷಾಕವಚವಾಗಿ ಕೆಲಸ ಮಾಡುತ್ತದೆ.

ಆರ್‌ಬಿಐ ಹಸ್ತಕ್ಷೇಪ: ಒಂದು ವೇಳೆ ರೂಪಾಯಿ ಮೌಲ್ಯದಲ್ಲಿ ತೀವ್ರ ಏರಿಳಿತ ಕಂಡುಬಂದರೆ, ದೇಶದ ಆರ್‌ಬಿಐ ತನ್ನಲ್ಲಿರುವ ವಿದೇಶಿ ಕರೆನ್ಸಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ವಿನಿಮಯ ದರವನ್ನು ನಿಯಂತ್ರಣದಲ್ಲಿಡುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

1 ಲಕ್ಷ ರೂ. ಹೂಡಿಕೆಗೆ ಮೂರು ವರ್ಷದಲ್ಲಿ 2.5 ಲಕ್ಷ ವಾಪಸ್‌: SBI ಸೇರಿ ಟಾಪ್‌ 5 Mutual Fund ಮಾಹಿತಿ
UIDAI: ಆಧಾರ್ ಕೊಟ್ಟಿದ್ದೀರಾ? ಎಲ್ಲೆಲ್ಲಿ ಬಳಕೆಯಾಗಿದೆ ಗೊತ್ತಾ? ಈಗಲೇ ಚೆಕ್ ಮಾಡಿ!