ಆರ್ಥಿಕತೆ: 7ನೇ ಸ್ಥಾನಕ್ಕೆ ಕುಸಿದ ಭಾರತ, ಮೇಲಕ್ಕೇರಿದ ಬ್ರಿಟನ್‌, ಫ್ರಾನ್ಸ್‌!

By Web Desk  |  First Published Aug 4, 2019, 7:46 AM IST

ಆರ್ಥಿಕತೆ: 7ನೇ ಸ್ಥಾನಕ್ಕೆ ಕುಸಿದ ಭಾರತ| 5ನೇ ಸ್ಥಾನದಿಂದ ಕೆಳಕ್ಕೆ ಜಾರಿದ ಭಾರತ| ಮೇಲಕ್ಕೇರಿದ ಬ್ರಿಟನ್‌, ಫ್ರಾನ್ಸ್‌|  2024ರ ವೇಳೆಗೆ 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ ಮಾಡುವ ಕನಸಿಗೆ ಹಿನ್ನಡೆ| 


ನವದೆಹಲಿ[ಆ.04]: 2024ರ ವೇಳೆಗೆ ದೇಶವನ್ನು 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯನ್ನಾಗಿ ಮಾಡುವ ಕನಸನ್ನು ಕೇಂದ್ರ ಸರ್ಕಾರ ಜನರ ಮುಂದೆ ಬಿತ್ತಿರುವ ಹೊತ್ತಿನಲ್ಲೇ, ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. 2017ರಲ್ಲಿ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದ ಭಾರತ 2018ರಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ಇದು, ದೇಶದಲ್ಲಿ ಆರ್ಥಿಕತೆ ಕುಸಿಯುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಮತ್ತಷ್ಟುಬಲ ತುಂಬಿದೆ.

ವಿಶ್ವಬ್ಯಾಂಕ್‌ 2018ನೇ ಸಾಲಿಗೆ ಸಂಬಂಧಿಸಿದಂತೆ ವಿಶ್ವದ 205 ದೇಶಗಳ ಜಿಡಿಪಿ ರಾರ‍ಯಂಕಿಂಗ್‌ ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತ 7ನೇ ಸ್ಥಾನಕ್ಕೆ ಕುಸಿದಿದೆ. 2018ನೇ ಸಾಲಿನಲ್ಲಿ ಭಾರತದ ಜಿಡಿಪಿ 2.72 ಲಕ್ಷ ಕೋಟಿ ಡಾಲರ್‌ ಇದ್ದರೆ, ಅದೇ ಅವಧಿಯಲ್ಲಿ ಫ್ರಾನ್ಸ್‌ನ ಜಿಡಿಪಿ 2.77 ಲಕ್ಷ ಕೋಟಿ ರು. ಇತ್ತು. ಈ ಮೂಲಕ ಭಾರತ 2017ರಲ್ಲಿ ಹೊಂದಿದ್ದ 5ನೇ ಸ್ಥಾನದ ಹಿರಿಮೆ ಕಳೆದುಕೊಂಡು, 2018ರಲ್ಲಿ 7ನೇ ಸ್ಥಾನಕ್ಕೆ ಜಾರಿದೆ ಎಂದು ವರದಿ ಹೇಳಿದೆ.

Latest Videos

undefined

ಇನ್ನು 2018ರಲ್ಲಿ ಅಮೆರಿಕ 20.5 ಲಕ್ಷ ಕೋಟಿ ಡಾಲರ್‌ ಜಿಡಿಪಿಯೊಂದಿಗೆ ಮೊದಲ ಸ್ಥಾನದಲ್ಲಿ, 13.6 ಲಕ್ಷ ಡಾಲರ್‌ ಜಿಡಿಪಿಯೊಂದಿಗೆ ಚೀನಾ 2ನೇ ಸ್ಥಾನದಲ್ಲಿ, 4.9 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯೊಂದಿಗೆ ಜಪಾನ್‌ 3ನೇ ಸ್ಥಾನದಲ್ಲಿ, 3.9 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯೊಂದಿಗೆ ಜರ್ಮನಿ 4ನೇ ಸ್ಥಾನದಲ್ಲಿ, 2.82 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯೊಂದಿಗೆ ಬ್ರಿಟನ್‌ 5ನೇ ಸ್ಥಾನದಲ್ಲಿ, 2.77 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯೊಂದಿಗೆ ಫ್ರಾನ್ಸ್‌ 6ನೇ ಸ್ಥಾನಲ್ಲಿದ್ದರೆ, 2.72 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯೊಂದಿಗೆ ಭಾರತ 7ನೇ ಸ್ಥಾನಕ್ಕೆ ಕುಸಿದಿದೆ.

2017ರಲ್ಲಿ 2.65 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ ಹೊಂದುವ ಮೂಲಕ ಫ್ರಾನ್ಸ್‌ ಅನ್ನು ಹಿಂದಿಕ್ಕಿದ್ದ ಭಾರತ 5ನೇ ಸ್ಥಾನಕ್ಕೆ ಏರಿತ್ತು. 2018-19ನೇ ಸಾಲಿನಲ್ಲಿ ಶೇ.6.8ರಷ್ಟುಬೆಳವಣಿಗೆಯೊಂದಿಗೆ ವಿಶ್ವದ ದೊಡ್ಡ ಆರ್ಥಿಕತೆಗಳ ಪೈಕಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರ ಎಂಬ ಹಿರಿಮೆ ಹೊಂದಿತ್ತಾದರೂ, ಇಂದು 2017-18ನೇ ಸಾಲಿನಲ್ಲಿ ಸಾಧಿಸಿದ್ದ ಶೇ.7.2ರ ಪ್ರಗತಿ ದರಕ್ಕಿಂತ ಸಾಕಷ್ಟುಕಡಿಮೆಯಾಗಿದೆ.

ಟಾಪ್‌ 7 ಆರ್ಥಿಕತೆ

1. ಅಮೆರಿಕ: 20.5 ಲಕ್ಷ ಕೋಟಿ

2. ಚೀನಾ: 13.6 ಲಕ್ಷ

3. ಜಪಾನ್‌: 4.9 ಲಕ್ಷ ಕೋಟಿ

4. ಜರ್ಮನಿ: 3.9 ಲಕ್ಷ ಕೋಟಿ

5. ಬ್ರಿಟನ್‌: 2.82 ಲಕ್ಷ ಕೋಟಿ

6. ಫ್ರಾನ್ಸ್‌: 2.77 ಲಕ್ಷ ಕೋಟಿ

7. ಭಾರತ: 2.72 ಲಕ್ಷ ಕೋಟಿ

click me!