ಪಡಿತರ ಆಹಾರ ಧಾನ್ಯಗಳ ದರ ಏರಿಕೆಗೆ ಶಿಫಾರಸು| ಆಹಾರ ಧಾನ್ಯಗಳ ಸಬ್ಸಿಡಿ ಸರ್ಕಾರಕ್ಕೆ ಭಾರೀ ಹೊರೆ| 2021ರ ಆರ್ಥಿಕ ಸಮೀಕ್ಷೆಯಲ್ಲಿ ಸರ್ಕಾರಕ್ಕೆ ಸಲಹೆ
ನವದೆಹಲಿ(ಜ.30): ಸಮಾಜದ ದುರ್ಬಲ ವರ್ಗದ 80 ಕೋಟಿ ಜನರಿಗೆ ಪಡಿತರ ವ್ಯವಸ್ಥೆಯ ಮೂಲಕ ವಿತರಿಸುವ ಆಹಾರ ಧಾನ್ಯಗಳ ದರವನ್ನು ಹೆಚ್ಚಳ ಮಾಡುವಂತೆ ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ಶಿಫಾರಸು ಮಾಡಲಾಗಿದೆ.
ಆಹಾರ ಭದ್ರತೆ ಜಾರಿ ವಿಷಯದಲ್ಲಿ ಹೆಚ್ಚುತ್ತಿರುವ ಸರ್ಕಾರದ ಹೊಣೆಗಾರಿಕೆ ಹಿನ್ನೆಲೆಯಲ್ಲಿ ಆಹಾರ ನಿರ್ವಹಣೆಯ ಆರ್ಥಿಕ ವೆಚ್ಚ ಕಡಿಮೆ ಮಾಡುವುದು ಕಷ್ಟಕರವಾದರೂ, ಸರ್ಕಾರಕ್ಕೆ ನಿರ್ವಹಿಸಲಾಗದಷ್ಟುವಿಸ್ತಾರವಾಗಿರುವ ಸಬ್ಸಿಡಿ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಆಹಾರ ಧಾನ್ಯಗಳ ದರ ಏರಿಕೆ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ. 2013ರಲ್ಲಿ ದರ ಪರಿಷ್ಕರಣೆ ಮಾಡಿದ ಬಳಿಕ ಮತ್ತೆ ಆಹಾರ ಧಾನ್ಯಗಳ ದರ ಪರಿಷ್ಕರಣೆಯಾಗಿಲ್ಲ. ಆದರೆ ಒಟ್ಟಾರೆ ಆರ್ಥಿಕ ವೆಚ್ಚ ಹೆಚ್ಚುತಲೇ ಇದೆ ಎಂದು ವರದಿ ಹೇಳಿದೆ.
ಸರ್ಕಾರ ಪಡಿತರ ವ್ಯವಸ್ಥೆ ಮೂಲಕ 3 ರು.ನಂತೆ ಅಕ್ಕಿ, 2 ರು.ನಂತೆ ಗೋದಿ ಮತ್ತು 1ರು.ನಂತೆ ಬೆಳೆಕಾಳು ವಿತರಿಸುತ್ತದೆ. ಇದಕ್ಕೆಂದೇ ಕಳೆದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ 1.15 ಲಕ್ಷ ಕೋಟಿ ರು. ತೆಗೆದಿರಿಸಿತ್ತು.