ಭಾರತದಲ್ಲಿ ಉದ್ಯೋಗಿಗಳ ನಿವೃತ್ತಿ ವಯಸ್ಸು ಹೆಚ್ಚುತ್ತಾ? ಸರ್ಕಾರಕ್ಕೆ ಇಪಿಎಫ್ಒ ನೀಡಿದ ಸಲಹೆ ಏನು?

By Suvarna NewsFirst Published Sep 6, 2022, 5:08 PM IST
Highlights

*2047ರ ವೇಳೆಗೆ ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆಯಲ್ಲಿ ಹೆಚ್ಚಳ
*ನಿವೃತ್ತ ನೌಕರರ ಸಂಖ್ಯೆ ಹೆಚ್ಚೋದ್ರಿಂದ ಇಪಿಎಫ್ಒ ಮೇಲೆ ಹೆಚ್ಚಿನ ಒತ್ತಡ
*ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ನಿವೃತ್ತಿ ವಯಸ್ಸು ಭಾರತಕ್ಕಿಂತ ಹೆಚ್ಚಿದೆ

ನವದೆಹಲಿ (ಸೆ.6): ಭಾರತದಲ್ಲಿ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಸಲಹೆ ನೀಡಿದೆ. 2047ರ ವೇಳೆಗೆ ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಲಿದೆ. 60 ವರ್ಷ ಮೇಲ್ಪಟ್ಟವರ ಸಂಖ್ಯೆ ಸುಮಾರು 14 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದು ಇಪಿಎಫ್ಒ ಮೇಲೆ ಹೆಚ್ಚಿನ ಒತ್ತಡ ಹೇರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನಿವೃತ್ತಿ ವಯಸ್ಸು ಹೆಚ್ಚಿಸುವಂತೆ ಇಪಿಎಫ್ಒ ತನ್ನ 'ವಿಷನ್‌ 2047 ಡಾಕ್ಯುಮೆಂಟ್‌'ನಲ್ಲಿ ಸಲಹೆ ನೀಡಿದೆ. 2047ರ ಸಮಯದಲ್ಲಿ ಹೆಚ್ಚಿನ ಜನ ನಿವೃತ್ತಿ ಹೊಂದುವುದರಿಂದ ಇಪಿಎಫ್ಒ ಅವರೆಲ್ಲರಿಗೂ ಪಿಂಚಣಿ ಹಣ ನೀಡೋದು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ನಿವೃತ್ತಿ ವಯಸ್ಸನ್ನು ಹೆಚ್ಚು ಮಾಡಿದ್ರೆ ಪಿಂಚಣಿ ಸಂಸ್ಥೆಗಳ ಮೇಲಿನ ಒತ್ತಡ ತಗ್ಗುತ್ತದೆ ಎಂಬುದು ಇಪಿಎಫ್ಒ ಅಭಿಪ್ರಾಯ. 'ಇತರ ದೇಶಗಳ ಅನುಭವಗಳನ್ನು ಅಧ್ಯಯನ ಮಾಡಿ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಸಲಹೆ ನೀಡಲಾಗಿದೆ. ಇದ್ರಿಂದ ಪಿಂಚಣಿ ವ್ಯವಸ್ಥೆ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ' ಎಂದು ಇಪಿಎಫ್ಒ ಡಾಕ್ಯುಮೆಂಟ್ ನಲ್ಲಿ ತಿಳಿಸಿದೆ. ಪ್ರಸ್ತುತ ಇಪಿಎಫ್ಒ ಸುಮಾರು 6 ಕೋಟಿ ಚಂದಾದಾರರನ್ನು ಹೊಂದಿದೆ. 

'ನಿವೃತ್ತಿ ವಯಸ್ಸು ಹೆಚ್ಚಿಸೋದ್ರಿಂದ ಇಪಿಎಫ್ಒ ಹಾಗೂ ಇತರ ಪಿಂಚಣಿ ನಿಧಿಗಳಲ್ಲಿ ಉದ್ಯೋಗಿಗಳು ದೀರ್ಘಾವಧಿಗೆ ಹೆಚ್ಚಿನ ಮೊತ್ತವನ್ನು ಠೇವಣಿಯಿಡುತ್ತಾರೆ. ಇದು ದೇಶದಲ್ಲಿನ ಹಣದುಬ್ಬರವನ್ನು ನಿಯಂತ್ರಿಸಲು ನೆರವು ನೀಡಲಿದೆ' ಎಂದು ಇಪಿಎಫ್ಒ ಸಲಹೆಯ ಹಿಂದಿನ ಉದ್ದೇಶವನ್ನು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

1.14ಲಕ್ಷ ಕೋಟಿ ರೂ. ಆದಾಯ ತೆರಿಗೆ ಮರುಪಾವತಿ; ರೀಫಂಡ್ ಬಂದಿದೆಯೋ, ಇಲ್ಲವೋ ಚೆಕ್ ಮಾಡೋದು ಹೇಗೆ?

'ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (NSO)'ಭಾರತದ ಹಿರಿಯ ನಾಗರಿಕರು 2021ರ ವರದಿ' ಪ್ರಕಾರ ದೇಶದಲ್ಲಿ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ (Senior Citizen) ಜನಸಂಖ್ಯೆ 2021ರಲ್ಲಿ 13.8 ಕೋಟಿ ಇದ್ದು, 2031ರಲ್ಲಿ19.4 ಕೋಟಿ ತಲುಪುವ ನಿರೀಕ್ಷೆಯಿದೆ. ಅಂದ್ರೆ ಶೇ.41ರಷ್ಟು ಹೆಚ್ಚಳವಾಗಲಿದೆ. ಇದ್ರಿಂದ ಪುರುಷರು ಹಾಗೂ ಮಹಿಳೆಯರ ಆಯಸ್ಸಿನಲ್ಲಿ ಕೂಡ ಹೆಚ್ಚಳವಾಗಲಿದೆ. 2047ರ ವೇಳೆಗೆ ಭಾರತದಲ್ಲಿ 60 ವರ್ಷ ಮೇಲ್ಪಟ್ಟು ಪಿಂಚಣಿ (Pension) ಪಡೆಯುವವರ ಸಂಖ್ಯೆ 14 ಕೋಟಿಯನ್ನು ಮೀರಲಿದೆ.

ನಿವೃತ್ತಿ ವಯಸ್ಸು ಯಾವ ರಾಷ್ಟ್ರದಲ್ಲಿ ಎಷ್ಟಿದೆ?
ಭಾರತದಲ್ಲಿ ಸರ್ಕಾರ ಹಾಗೂ ಖಾಸಗಿ ವಲಯಗಳಲ್ಲಿ ನಿವೃತ್ತಿ ವಯಸ್ಸು 58 ರಿಂದ 60 ವರ್ಷಗಳ ತನಕ ಇದೆ. ಅದೇ ಐರೋಪ್ಯ ಒಕ್ಕೂಟಗಳಾದ್ಯಂತ ನಿವೃತ್ತಿ ವಯಸ್ಸು 65 ವರ್ಷಗಳು. ಇನ್ನು ಡೆನ್ಮಾರ್ಕ್, ಇಟಲಿ ಹಾಗೂ ಗ್ರೀಸ್ ನಲ್ಲಿ ನಿವೃತ್ತಿ ವಯಸ್ಸು 67 ವರ್ಷ. ಹಾಗೆಯೇ ಅಮೆರಿಕದಲ್ಲಿ ನಿವೃತ್ತಿ ವಯಸ್ಸು 66 ವರ್ಷಗಳು. ಈ ರಾಷ್ಟ್ರಗಳಲ್ಲಿ ವಯಸ್ಸಾದವರ ಪ್ರಮಾಣ ಹೆಚ್ಚಿದೆ.

PF Update:ಪಿಎಫ್ ಖಾತೆಗೆ ಶೀಘ್ರದಲ್ಲೇ ಬರಲಿದೆ ಬಡ್ಡಿ ಹಣ; ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ

ಉದ್ಯೋಗಿಗಳ ಭವಿಷ್ಯ ನಿಧಿ, ಇದನ್ನು ಸಾಮಾನ್ಯವಾಗಿ ಇಪಿಎಫ್ ಎಂದು ಕರೆಯಲಾಗುತ್ತದೆ. ಇದು ನಿವೃತ್ತಿ ಅಥವಾ ನಿವೃತ್ತಿಯ ನಂತರದ ಪಿಂಚಣಿ ಯೋಜನೆಯಾಗಿದೆ. ಈ ಸೌಲಭ್ಯವು ವೇತನ ಪಡೆಯುವ ಎಲ್ಲರಿಗೂ ಲಭ್ಯವಿದೆ. ಈ ಯೋಜನೆಯಡಿಯಲ್ಲಿ, ಉದ್ಯೋಗಿ ಹಾಗೂ ಉದ್ಯೋಗದಾತರು (ಕಂಪನಿ ಅಥವಾ ಸಂಸ್ಥೆ) ತಮ್ಮ ಮೂಲ ವೇತನದಿಂದ ಇಪಿಎಫ್ ಖಾತೆಗೆ ಶೇ.12ರಷ್ಟು ಮೊತ್ತವನ್ನು ಕೊಡುಗೆ ನೀಡುತ್ತಾರೆ. ನಿಮ್ಮ ಮೂಲ ವೇತನದ ಸಂಪೂರ್ಣ  ಶೇ.12 ಅನ್ನು ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಲಾಗುತ್ತದೆ.ಇಪಿಎಫ್ ಖಾತೆಗೆ ಸರ್ಕಾರ ಪ್ರತಿ ವರ್ಷ ಬಡ್ಡಿ ಹಾಕುತ್ತದೆ. ಖಾತೆಯಲ್ಲಿ ಠೇವಣಿ ಮಾಡಿದ ಹಣಕ್ಕೆ ಕೇಂದ್ರ ಸರ್ಕಾರ 2021-22ನೇ ಹಣಕಾಸು ಸಾಲಿನಲ್ಲಿ ಶೇ.8.1ರಷ್ಟು ಬಡ್ಡಿ ನೀಡಲಿದೆ. ಇಪಿಎಫ್ ಖಾತೆಯಲ್ಲಿರುವ ಹಣಕ್ಕೆ ತಿಂಗಳ ಆಧಾರದಲ್ಲಿ ಬಡ್ಡಿ ಲೆಕ್ಕ ಹಾಕಿದರೂ ಕೂಡ ಅದನ್ನು ಜಮೆ ಮಾಡೋದು ಮಾತ್ರ ಆ ಆರ್ಥಿಕ ವರ್ಷ ಮುಗಿದ ಬಳಿಕವೇ. 

click me!