
Business Desk: 2023-24ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31 ಅಂತಿಮ ಗಡುವಾಗಿತ್ತು. ಈ ದಿನಾಂಕದೊಳಗೆ ಐಟಿಆರ್ ಸಲ್ಲಿಕೆ ಮಾಡದವರಿಗೆ ವಿಳಂಬ ಐಟಿಆರ್ ಸಲ್ಲಿಕೆಗೆ ಅವಕಾಶವಿದೆ. ಇನ್ನು ನೀವು ಜು.31ರೊಳಗೆ ಐಟಿಆರ್ ಸಲ್ಲಿಕೆ ಮಾಡಿದ್ದು, ಕೆಲವೊಂದು ತಿದ್ದುಪಡಿಗಳೊಂದಿಗೆ ಮತ್ತೆ ಸಲ್ಲಿಕೆ ಮಾಡಲು ಬಯಸಿದ್ರೆ ಡಿಸೆಂಬರ್ 31ರೊಳಗೆ ಸಲ್ಲಿಕೆ ಮಾಡಲು ಅವಕಾಶವಿದೆ. ಇದಕ್ಕೆ ಪರಿಷ್ಕೃತ ಐಟಿಆರ್ ಎನ್ನುತ್ತಾರೆ. ಈ ಎರಡೂ ಆಯ್ಕೆಗಳನ್ನು ಬಿಟ್ಟು ತೆರಿಗೆದಾರರಿಗೆ ಇನ್ನೂ ಒಂದು ಆಯ್ಕೆಯಿದೆ. ಅದೇ ನವೀಕೃತ (ಅಪ್ಡೇಟೆಡ್ ) ಐಟಿಆರ್. ಅಪ್ಡೇಟೆಡ್ ಐಟಿಆರ್ ಸಲ್ಲಿಕೆ ಮಾಡುವ ಅವಕಾಶವನ್ನು 2022-23ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಪರಿಚಯಿಸಲಾಗಿತ್ತು. ಅಪ್ಡೇಟೆಡ್ ಐಟಿಆರ್ ಸಲ್ಲಿಕೆ ಮಾಡಲು ಹಣಕಾಸು ಕಾಯ್ದೆ 2022ರ ಮೂಲಕ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಗೆ ಉಪಸೆಕ್ಷನ್ ಗೆ (8ಎ) ಸೇರ್ಪಡೆ ಮಾಡಲಾಗಿತ್ತು. ಇನ್ನು ತೆರಿಗೆದಾರರಿಗೆ ಹೆಚ್ಚುವರಿ ತೆರಿಗೆ ಪಾವತಿ ಮೇಲೆ ಅಪ್ಡೇಟೆಡ್ ರಿಟರ್ನ್ ಅನ್ನು ಸಂಬಂಧಪಟ್ಟ ಮೌಲ್ಯಮಾಪನ ವರ್ಷದ ಕೊನೆಯಿಂದ ಎರಡು ವರ್ಷಗಳೊಳಗೆ (24 ತಿಂಗಳು) ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.
ಅಪ್ಡೇಟೆಡ್ ರಿಟರ್ನ್ ಏಕೆ?
2022-23ನೇ ಹಣಕಾಸು ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಪ್ಡೇಟೆಡ್ ರಿಟರ್ನ್ ಬಗ್ಗೆ ಘೋಷಣೆ ಮಾಡಿದ್ದರು. ಇದು ತೆರಿಗೆದಾರರಿಗೆ ತೆರಿಗೆ ಪಾವತಿಗೆ ಸಂಬಂಧಿಸಿ ತಮ್ಮ ಆದಾಯವನ್ನು ಸಮರ್ಪಕವಾಗಿ ಅಂದಾಜಿಸುವಾಗ ಯಾವುದೇ ತಪ್ಪುಗಳಾಗಿದ್ರೆ ಅದನ್ನು ಸರಿಪಡಿಸಲು ಅವಕಾಶ ನೀಡುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.
ವಿಳಂಬ ಐಟಿಆರ್ ಸಲ್ಲಿಕೆ ವೇಳೆ ದಂಡ ಪಾವತಿಸೋದು ಹೇಗೆ? ಎಲ್ಲಿ? ಇಲ್ಲಿದೆ ಮಾಹಿತಿ
ಯಾರು ಅಪ್ಡೇಟೆಡ್ ಐಟಿಆರ್ ಸಲ್ಲಿಕೆ ಮಾಡಬಹುದು?
ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಅನ್ವಯ ಸಂಬಂಧಪಟ್ಟ ಮೌಲ್ಯಮಾಪನ ವರ್ಷಕ್ಕೆ ತೆರಿಗೆದಾರ ಮೂಲ, ವಿಳಂಬ ಅಥವಾ ಪರಿಷ್ಕೃತ ಐಟಿಆರ್ ಅನ್ನು ಈಗಾಗಲೇ ಸಲ್ಲಿಕೆ ಮಾಡಿದ್ದರೆ ಅಥವಾ ಮಾಡದಿದ್ದರೂ ಅಪ್ಡೇಟೆಡ್ ರಿಟರ್ನ್ ಸಲ್ಲಿಕೆ ಮಾಡಬಹುದು. ಅಪ್ಡೇಟೆಡ್ ರಿಟರ್ನ್ ಅನ್ನು ಸಂಬಂಧಪಟ್ಟ ಮೌಲ್ಯಮಾಪನ ವರ್ಷದ ಕೊನೆಯಿಂದ 24 ತಿಂಗಳೊಳಗೆ ಯಾವ ಸಮಯದಲ್ಲಿ ಬೇಕಾದರೂ ಸಲ್ಲಿಕೆ ಮಾಡಬಹುದು. ಹೆಚ್ಚುವರಿ ತೆರಿಗೆ ಪಾವತಿ ಮೇಲೆ ಅಪ್ಡೇಟೆಡ್ ರಿಟರ್ನ್ ಸಲ್ಲಿಕೆ ಮಾಡಬಹುದು. ಈ ಹಿಂದೆ ಮಿಸ್ ಆದ ಆದಾಯವನ್ನು ಘೋಷಿಸಲು ಇದು ತೆರಿಗೆದಾರರಿಗೆ ನೆರವು ನೀಡುತ್ತದೆ ಕೂಡ.
ಈ ಸಂದರ್ಭಗಳಲ್ಲಿ ಸಲ್ಲಿಕೆ ಮಾಡುವಂತಿಲ್ಲ
ಅಪ್ಡೇಟೆಡ್ ರಿಟರ್ನ್ ಅನ್ನು ಕೆಲವೊಂದು ಸಂದರ್ಭಗಳಲ್ಲಿ ಸಲ್ಲಿಕೆ ಮಾಡುವಂತಿಲ್ಲ. ಉದಾಹರಣೆಗೆ ಒಂದು ವೇಳೆ ಆ ಅಪ್ಡೇಟೆಡ್ ರಿಟರ್ನ್ ನಷ್ಟದ ರಿಟರ್ನ್ ಆಗಿದ್ದರೆ ಆಗ ಸಲ್ಲಿಕೆ ಮಾಡುವಂತಿಲ್ಲ. ಇನ್ನು ಅಪ್ಡೇಟೆಡ್ ರಿಟರ್ನ್ ಮೂಲ, ಪರಿಷ್ಕೃತ ಅಥವಾ ವಿಳಂಬ ರಿಟರ್ನ್ ಆಧಾರದಲ್ಲಿ ಕಡಿಮೆ ತೆರಿಗೆ ಜವಾಬ್ದಾರಿ ಹೊಂದಿದ್ದರೆ ಆಗ ಕೂಡ ಅದನ್ನು ಸಲ್ಲಿಕೆ ಮಾಡುವಂತಿಲ್ಲ. ಇನ್ನು ಆ ಅಪ್ಡೇಟೆಡ್ ರಿಟರ್ನ್ ರೀಫಂಡ್ ಬಾಕಿ ಮೊತ್ತವನ್ನು ಹೆಚ್ಚಿಸಿದ್ರೆ ಕೂಡ ಆಗ ಅದನ್ನು ಸಲ್ಲಿಕೆ ಮಾಡುವಂತಿಲ್ಲ.
ಐಟಿಆರ್ ಸಲ್ಲಿಕೆ ವೇಳೆ ನೀವು ಈ ತಪ್ಪು ಮಾಡಿದ್ರೆ ಬೀಳುತ್ತೆ ಭಾರೀ ದಂಡ!
ಅಪ್ಡೇಟೆಡ್ ಐಟಿಆರ್ ಸಲ್ಲಿಕೆ ಹೇಗೆ?
ಅಪ್ಡೇಟೆಡ್ ಐಟಿಆರ್ ಅನ್ನು ಆನ್ ಲೈನ್ ಅಥವಾ ಅಪ್ ಲೈನ್ ನಲ್ಲಿ ಸಲ್ಲಿಕೆ ಮಾಡಬಹುದು. ಅಪ್ ಲೈನ್ ನಲ್ಲಿ ಸಲ್ಲಿಕೆ ಮಾಡಲು ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ನಿಂದ ಐಟಿಆರ್-ಯು ಅರ್ಜಿ ಡೌನ್ ಲೋಡ್ ಮಾಡಿ. ಆ ಬಳಿಕ ಅರ್ಜಿಯನ್ನು ಜಾಗರೂಕತೆಯಿಂದ ಭರ್ತಿ ಮಾಡಿ. ಯಾವುದೇ ತಪ್ಪುಗಳಿರದಂತೆ ಎಚ್ಚರ ವಹಿಸಿ. ಆ ಬಳಿಕ ಆದಾಯ, ಕಡಿತಗಳು ಹಾಗೂ ವಿನಾಯ್ತಿಗಳ ದಾಖಲೆಗಳನ್ನು ಅದಕ್ಕೆ ಜೋಡಿಸಿ. ಆ ಬಳಿಕ ಯಾವುದೇ ತೆರಿಗೆಗಳು ಬಾಕಿ ಉಳಿದಿದ್ದರೆ ಅದನ್ನು ಪಾವತಿಸಿ. ಇನ್ನು ಅಪ್ಡೇಟೆಡ್ ಐಟಿಆರ್ ಸಲ್ಲಿಕೆ ಮಾಡಬೇಕೇ ಅಥವಾ ಬೇಡವೆ ಎಂಬ ಗೊಂದಲವಿದ್ದರೆ ಆಗ ತೆರಿಗೆ ಸಲಹೆಗಾರರ ನೆರವು ಪಡೆಯಿರಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.