* ಬ್ಯಾಂಕಿಗೆ 12ಬಿಬಿಎ ಫಾರಂ ನೀಡಿದರೆ ಐಟಿ ರಿಟರ್ನ್ಸ್ ಸಲ್ಲಿಸಬೇಕಿಲ್ಲ
* ಪಿಂಚಣಿ ಮತ್ತು ಠೇವಣಿ ಬಡ್ಡಿ ಆದಾಯ ಮಾತ್ರ ಇರುವವರಿಗೆ ಅನ್ವಯ
* 75 ವರ್ಷ ಮೇಲ್ಪಟ್ಟವರಿಗೆ ಐಟಿ ರಿಟನ್ಸ್‌ರ್ ವಿನಾಯ್ತಿ ಫಾರಂ ಬಿಡುಗಡೆ
* ಬ್ಯಾಂಕೇ ಪಿಂಚಣಿ, ಎಫ್‌ಡಿ ಮೇಲಿನ ಬಡ್ಡಿಗೆ ತೆರಿಗೆ ಕಡಿತಗೊಳಿಸುತ್ತದೆ
ನವದೆಹಲಿ(ಸೆ.06): 75 ವರ್ಷ ಮೇಲ್ಪಟ್ಟವರು ಪಿಂಚಣಿ ಮತ್ತು ನಿಶ್ಚಿತ ಠೇವಣಿಗೆ ಸಿಗುವ ಬಡ್ಡಿಯ ಆದಾಯ ಮಾತ್ರ ಹೊಂದಿದ್ದರೆ ಅಂತಹವರು ಇನ್ನುಮುಂದೆ ಆದಾಯ ತೆರಿಗೆ ರಿಟನ್ಸ್‌ರ್ ಸಲ್ಲಿಕೆ ಮಾಡುವ ಅಗತ್ಯವಿಲ್ಲ. ಈ ಆದಾಯದಾರರಿಗೆ ತೆರಿಗೆ ರಿಟನ್ಸ್‌ರ್ ಸಲ್ಲಿಸುವ ಗೊಡವೆಯಿಂದ ಮುಕ್ತಿ ನೀಡುವ 12ಬಿಬಿಎ ಎಂಬ ಹೊಸ ಫಾರಂ ಅನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಬಿಡುಗಡೆ ಮಾಡಿದೆ.
ಈ ವರ್ಷದ ಬಜೆಟ್‌ನಲ್ಲಿ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷವಾಗುತ್ತಿರುವುದರಿಂದ 75 ವರ್ಷ ಮೇಲ್ಪಟ್ಟವೃದ್ಧರಿಗೆ ಆದಾಯ ತೆರಿಗೆ ರಿಟನ್ಸ್‌ರ್ ಸಲ್ಲಿಸುವ ಸಂಕಟದಿಂದ ಬಿಡುಗಡೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಈಗ ಸಿಬಿಡಿಟಿಯಿಂದ 12ಬಿಬಿಎ ಅರ್ಜಿ ಬಿಡುಗಡೆ ಮಾಡಲಾಗಿದೆ. ಒಂದೇ ಬ್ಯಾಂಕಿನಲ್ಲಿ ಪಿಂಚಣಿ ಖಾತೆ ಮತ್ತು ನಿಶ್ಚಿತ ಠೇವಣಿ ಹೊಂದಿರುವ 75 ವರ್ಷ ಮೇಲ್ಪಟ್ಟವರು ಈ ಅರ್ಜಿ ಭರ್ತಿ ಮಾಡಿ ಬ್ಯಾಂಕಿಗೆ ನೀಡಿದರೆ, ಬ್ಯಾಂಕಿನವರೇ ವೃದ್ಧರ ಪರವಾಗಿ ಆದಾಯ ತೆರಿಗೆ ಕಡಿತಗೊಳಿಸಿ ಸರ್ಕಾರಕ್ಕೆ ಪಾವತಿಸುತ್ತಾರೆ. ವೃದ್ಧರು ಆದಾಯ ತೆರಿಗೆ ರಿಟನ್ಸ್‌ರ್ (ಐಟಿಆರ್) ಸಲ್ಲಿಸುವ ಅಗತ್ಯವಿಲ್ಲ. ಬೇರೆ ಬೇರೆ ಬ್ಯಾಂಕಿನಲ್ಲಿ ಪಿಂಚಣಿ ಖಾತೆ ಮತ್ತು ನಿಶ್ಚಿತ ಠೇವಣಿ ಹೊಂದಿರುವವರಿಗೆ ಈ ಸೌಲಭ್ಯ ಸಿಗುವುದಿಲ್ಲ.
ಪಿಂಚಣಿ ಆದಾಯ ಮತ್ತು ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ಆದಾಯ ವಾರ್ಷಿಕವಾಗಿ ಒಂದು ಮಿತಿಯನ್ನು ದಾಟಿದ ನಂತರ ಅದಕ್ಕೆ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ಒಂದು ವೇಳೆ ಆದಾಯ ತೆರಿಗೆ ರಿಟನ್ಸ್‌ರ್ ಸಲ್ಲಿಸದಿದ್ದರೆ ನಂತರ ದಂಡ ಮತ್ತು ಹೆಚ್ಚಿನ ದರದ ಟಿಡಿಎಸ್ ಪಾವತಿಸಬೇಕಾಗುತ್ತದೆ. ವೃದ್ಧರಿಗೆ ತೆರಿಗೆ ರಿಟನ್ಸ್‌ರ್ ಸಲ್ಲಿಸುವುದು ಕಷ್ಟಎಂಬ ಕಾರಣದಿಂದ ಸರ್ಕಾರ ಹೊಸ ವ್ಯವಸ್ಥೆ ತಂದಿದೆ.