
ಹೈದರಾಬಾದ್(ಆ.9): ಸ್ವೀಡಿಷ್ ಸಂಸ್ಥೆ ಐಕೆಇಎ ಹೈದರಾಬಾದ್ ನಲ್ಲಿ ತನ್ನ ಮೊದಲ ಮಳಿಗೆಯನ್ನು ಪ್ರಾರಂಭಿಸಿದೆ. ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅನುಮೋದನೆ ಪಡೆದ ಐದು ವರ್ಷದ ಬಳಿಕ ಐಕೆಇಎ ಭಾರತಕ್ಕೆ ಅಧಿಕೃತವಾಗಿ ಲಗ್ಗೆ ಇಟ್ಟಿದೆ.
ಹೈದರಾಬಾದ್ ನಲ್ಲಿ ಪ್ರಾರಂಭಗೊಂಡ ಮಳಿಗೆಯು 950 ಮಂದಿಗೆ ನೇರವಾಗಿ, ಮತ್ತು 1,500 ಜನರಿಗೆ ಪರೋಕ್ಷವಾಗಿ ಉದ್ಯೋಗ ಒದಗಿಸಲಿದೆ. ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಇನ್ನಷ್ಟು ಶಾಖೆಗಳನ್ನು ತೆರೆಯಲು ಯೋಜಿಸಿರುವ ಸಂಸ್ಥೆ 15,000 ಮಂದಿಯನ್ನು ನೇಮಕ ಮಾಡಿಕೊಳ್ಳಲು ಮುಂದಾಗಲಿದೆ ಎಂದು ಐಕೆಇಎ ಗ್ರೂಪ್ ಸಿಇಒ ಜೆಸ್ಪರ್ ಬ್ರೊಡಿನ್ ಹೇಳಿದ್ದಾರೆ,
ಐಕೆಇಎ ಸಂಸ್ಥೆ ಭಾರತದೊಂದಿಗೆ ದೀರ್ಘಕಾಲದ ಬದ್ದತೆ ಹೊಂದಿದ್ದು, ಭಾರತ ತಮಗೆ ಪ್ರಮುಖ ಮಾರುಕಟ್ಟೆಯಾಗಿದೆ ಎಂದು ಬ್ರೊಡಿನ್ ಹೇಳಿದರು. 2025 ರ ಹೊತ್ತಿಗೆ ಭಾರತದಲ್ಲಿ 25 ಮಳಿಗೆಗಳ ಸ್ಥಾಪನೆಗೆ ಯೋಜನೆ ರೂಪಿಸಿರುವುದಾಗಿ ಸಂಸ್ಥೆ ಸ್ಪಷ್ಟಪಡಿಸಿದೆ.
2013 ರಲ್ಲಿ ಕೇಂದ್ರ ಸರ್ಕಾರದಿಂದ ರಾಷ್ಟ್ರದಲ್ಲಿ 10,500 ಕೋಟಿ ರೂ. ಹೂಡಿಕೆಯೊಂದಿಗೆ ಚಿಲ್ಲರೆ ವ್ಯಾಪಾರಕ್ಕೆ ಐಕೆಇಎ ಸಂಸ್ಥೆ ಅನುಮತಿ ಪಡೆದಿತ್ತು. ತೆಲಂಗಾಣ ಐಟಿ ಸಚಿವ ಕೆ.ಟಿ. ರಾಮರಾವ್ ಮಳಿಗೆಯನ್ನು ಉದ್ಘಾಟಿಸಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.