ಹಣದ ಅಗತ್ಯವಿದೆ ಎಂದಾಗ ತಕ್ಷಣ ವ್ಯವಸ್ಥೆಯಾಗ್ಬೇಕು. ಹಾಗಾಗಿಯೇ ಅನೇಕರು ವೈಯಕ್ತಿಕ ಸಾಲ ಪಡೆಯುತ್ತಾರೆ. ಅಗತ್ಯ ವಸ್ತು ಖರೀದಿಯಿಂದ ಹಿಡಿದು ಹಳೆ ಸಾಲ ತೀರಿಸುವವರೆಗೆ ಕೆಲ ಕೆಲಸಕ್ಕೆ ಪರ್ಸನಲ್ ಲೋನ್ ಪಡೆಯೋರು ನೀವಾಗಿದ್ರೆ ಎಚ್ಚರ.
ಬ್ಯಾಂಕಿನಿಂದ ಸಾಲ ಪಡೆಯುವುದು ಈಗಿನ ಕಾಲದಲ್ಲಿ ಸುಲಭವಾಗಿದೆ. ಬ್ಯಾಂಕ್ ಗೆ ಹೋಗದೆ ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕವೂ ಸಾಲ ಪಡೆಯಬಹುದು. ಇದೇ ಕಾರಣಕ್ಕೆ ಜನರು ತಮ್ಮ ಎಲ್ಲಾ ಅಗತ್ಯಗಳಿಗಾಗಿ ಸಾಲವನ್ನು ತೆಗೆದುಕೊಳ್ಳುತ್ತಾರೆ. ಬ್ಯಾಂಕುಗಳು ಅನೇಕ ವಿಧದದ ಸಾಲಗಳನ್ನು ನೀಡುತ್ತದೆ. ಗೃಹ ಸಾಲ, ವಾಹನ ಸಾಲ, ಕೃಷಿ ಸಾಲ, ಉದ್ಯೋಗ ಸಾಲ. ಹೀಗೆ ನಾನಾ ಸಾಲಗಳಿದ್ದು, ಅದ್ರಲ್ಲಿ ವೈಯಕ್ತಿಕ ಸಾಲ ಕೂಡ ಸೇರಿದೆ. ನಾವಿಂದು ಈ ವೈಯಕ್ತಿಕ ಸಾಲ ಅಂದ್ರೇನು, ವೈಯಕ್ತಿಕ ಸಾಲ ಪಡೆದ ನಂತ್ರ ಏನು ಮಾಡ್ಬೇಕು, ಏನು ಮಾಡಬಾರದು ಎಂಬುದನ್ನು ನಿಮಗೆ ಹೇಳ್ತೆವೆ.
ವೈಯಕ್ತಿಕ (Personal) ಸಾಲ (Loan) ಅಂದ್ರೇನು? : ಮೊದಲನೇಯದಾಗಿ ವೈಯಕ್ತಿಕ ಸಾಲ ಅಂದೇನು ಎಂಬುದನ್ನು ನೋಡೋದಾದ್ರೆ, ಇದು ಕ್ರೆಡಿಟ್ (Credit) ಸೌಲಭ್ಯವಾಗಿದೆ. ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ವೈಯಕ್ತಿಕ ಸಾಲದ ಲಾಭವನ್ನು ಪಡೆದುಕೊಳ್ಳುವುದು ಸುಲಭ. ಏಕೆಂದರೆ ಈ ಸಾಲ ಪಡೆಯಲು ನೀವು ಯಾವುದೇ ವಸ್ತುವನ್ನು ಭದ್ರತೆಯಾಗಿ ಇಡಬೇಕಾಗಿಲ್ಲ. ಅಂದ್ರೆ ಸಾಲಕ್ಕೆ ಭದ್ರತೆಯಾಗಿ ಚಿನ್ನ, ಮನೆ ಅಥವಾ ಕಾರು ಯಾವುದನ್ನೂ ಅಡವಿಡಬೇಕಾಗಿಲ್ಲ. ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ನೀವು ಈ ಸಾಲ ಪಡೆಯಬಹುದು. ಹಾಗಾಗಿಯೇ ಅನೇಕರು ಈ ವೈಯಕ್ತಿಕ ಸಾಲವನ್ನು ಮೊದಲು ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ರೆ ಇದನ್ನು ಅಸುರಕ್ಷಿತ ಸಾಲ ಎಂದು ಕರೆಯಲಾಗುತ್ತದೆ.
ವೈಯಕ್ತಿಕ ಸಾಲ ತೆಗೆದುಕೊಳ್ಳುವಾಗ ಎಚ್ಚರವಹಿಸಿ : ವೈಯಕ್ತಿಕ ಸಾಲ ಸುಲಭವಾಗಿ ಸಿಗುತ್ತದೆ ನಿಜ. ಹಾಗಂತ ಎಲ್ಲ ಕೆಲಸಕ್ಕೂ ವೈಯಕ್ತಿಕ ಸಾಲ ತೆಗೆದುಕೊಳ್ಳುವುದು ತಪ್ಪು. ಏಕೆಂದರೆ ವೈಯಕ್ತಿಕ ಸಾಲದ ಬಡ್ಡಿ ದರ ತುಂಬಾ ಹೆಚ್ಚಾಗಿರುತ್ತದೆ. ಇತರ ಸಾಲಗಳಿಗೆ ಹೋಲಿಸಿದರೆ ವೈಯಕ್ತಿಕ ಸಾಲವೂ ತುಂಬಾ ದುಬಾರಿಯಾಗಿದೆ. ಇದರರ್ಥ ನೀವು ಹೆಚ್ಚಿನ ಬಡ್ಡಿ ದರದಲ್ಲಿ ಈ ಸಾಲವನ್ನು ಪಡೆಯಬೇಕಾಗುತ್ತದೆ. ಕೆಲ ಸಂದರ್ಭದಲ್ಲಿ ವೈಯಕ್ತಿಕ ಸಾಲದ ಬಡ್ಡಿ ದರವು ಶೇಕಡಾ 20ಕ್ಕಿಂತ ಹೆಚ್ಚಾಗಿರುತ್ತದೆ. ಇದು ಆ ಕ್ಷಣಕ್ಕೆ ನಿಮ್ಮ ಸಮಸ್ಯೆ ಕಡಿಮೆ ಮಾಡಿದ್ರೂ ಮುಂದೆ ಇದ್ರಿಂದ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿಯೇ ತಜ್ಞರು ವೈಯಕ್ತಿಕ ಸಾಲ ಪಡೆಯದಂತೆ ಸಲಹೆ ನೀಡ್ತಾರೆ.
Business Ideas: ಮನೆ ಮನೆಗೂ ಬೇಕೇಬೇಕಾಗಿರೋ ಗ್ಯಾಸ್ ಸಿಲಿಂಡರ್ ಬ್ಯಸಿನೆಸ್ ಮಾಡಿ ಹಣ ಗಳಿಸಿ
ಆಸ್ತಿ ಖರೀದಿ ವೇಳೆ ವೈಯಕ್ತಿಕ ಸಾಲ ಪಡೆಯಬೇಡಿ : ಅನೇಕ ಬಾರಿ ಜನರು ಆಸ್ತಿಯನ್ನು ಖರೀದಿಸುವಾಗ ಡೌನ್ ಪೇಮೆಂಟ್ ಮಾಡಲು ವೈಯಕ್ತಿಕ ಸಾಲಗಳನ್ನು ತೆಗೆದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಡೌನ್ ಪೇಮೆಂಟ್ ಗೆ ವೈಯಕ್ತಿಕ ಸಾಲ ಪಡೆಯಬಾರದು ಎನ್ನುತ್ತಾರೆ ತಜ್ಞರು. ಇದ್ರಲ್ಲಿ ನಿಮಗೆ ಹೆಚ್ಚು ಸೌಲಭ್ಯ ಸಿಗೋದಿಲ್ಲ. ಬಡ್ಡಿ ಕೂಡ ಹೆಚ್ಚಿರುವ ಕಾರಣ ನಿಮಗೆ ಇಎಂಐ ಹೊಣೆ ಜಾಸ್ತಿಯಾಗುತ್ತದೆ.
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ವೈಯಕ್ತಿಕ ಸಾಲ : ಹೌದು, ಅನೇಕ ಜನರ ಕ್ರೆಡಿಟ್ ಕಾರ್ಡ್ ಬಿಲ್ ಆಕಾಶ ಮುಟ್ಟಿರುತ್ತದೆ. ಅದನ್ನು ಮರುಪಾವತಿಸಲು ಹಣದ ಅಗತ್ಯವಿರುತ್ತದೆ. ಅಷ್ಟು ಹಣ ಕೈನಲ್ಲಿ ಇಲ್ಲ ಎಂದಾಗ ಜನರು ವೈಯಕ್ತಿಕ ಸಾಲದ ಮೊರೆ ಹೋಗ್ತಾರೆ. ವೈಯಕ್ತಿಕ ಸಾಲ ಸುಲಭವಾಗಿ ಮತ್ತು ವೇಗವಾಗಿ ಸಿಗುವ ಕಾರಣ ಅಲ್ಲಿಂದ ಸಾಲ ಪಡೆದು ಕ್ರೆಡಿಟ್ ಕಾರ್ಡ್ ಸಾಲ ಪಾವತಿ ಮಾಡ್ತಾರೆ. ತಜ್ಞರ ಪ್ರಕಾರ ಇದು ದೊಡ್ಡ ತಪ್ಪು. ವೈಯಕ್ತಿಕ ಸಾಲದಲ್ಲಿ ಬಡ್ಡಿ ಸಾಕಷ್ಟು ದುಬಾರಿಯಾಗಿದೆ. ಹೆಚ್ಚಿನ ಬಡ್ಡಿ ಪಾವತಿ ನಿಮಗೆ ಕಷ್ಟವಾಗುತ್ತದೆ. ಹಾಗೆಯೇ ಇದ್ರಿಂದ ನಿಮ್ಮ ಸಿಬಿಲ್ ಸ್ಕೋರ್ ಇಳಿಯುತ್ತದೆ.
ಟೆಕ್ ಉದ್ಯೋಗಿಗಳಿಗೆ ತಲೆಬಿಸಿ: ಯಾಕೆ ದಿನ ದಿನಕ್ಕೂ ವಜಾಗೊಳ್ತಿದ್ದಾರೆ ಟೆಕ್ಕಿಗಳು ಗೊತ್ತಾ?
ದುಬಾರಿ ವಸ್ತು ಖರೀದಿಗೆ ವೈಯಕ್ತಿಕ ಸಾಲ : ದುಬಾರಿ ಮೊಬೈಲ್, ದುಬಾರಿ ವಸ್ತು ಖರೀದಿ ಅಥವಾ ಪ್ರಯಾಣಕ್ಕಾಗಿ ಎಂದಿಗೂ ವೈಯಕ್ತಿಕ ಸಾಲ ಮಾಡ್ಬೇಡಿ ಎನ್ನುತ್ತಾರೆ ತಜ್ಞರು. ಹಾಗೆಯೇ ವೈಯಕ್ತಿಕ ಸಾಲಪಡೆದು ಈ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಡಿ ಎನ್ನುತ್ತಾರೆ ತಜ್ಞರು. ಕಾರು, ಗೃಹ ಸಾಲದಲ್ಲಿ ನಿಮ್ಮ ಕೈನಲ್ಲಿ ಮನೆ ಅಥವಾ ಕಾರಿರುತ್ತದೆ. ಒಂದ್ವೇಳೆ ನೀವು ಸಾಲ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದಾಗ ಕಾರು ಅಥವಾ ಆಸ್ತಿ ಮಾರಿ, ಸಾಲ ತೀರಿಸಬಹುದು. ಆದ್ರೆ ವೈಯಕ್ತಿಕ ಸಾಲದಲ್ಲಿ ಈ ಆಯ್ಕೆ ಇರುವುದಿಲ್ಲ. ಇದ್ರಿಂದ ಹಣಕಾಸಿನ ಪರಿಸ್ಥಿತಿ ಹದಗೆಡುವ ಸಾಧ್ಯತೆ ಹೆಚ್ಚಿರುತ್ತದೆ.