
ಮುಂಬೈ/ಚಂಡೀಗಢ (ಫೆ.23): ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ IDFC ಫಸ್ಟ್ ಬ್ಯಾಂಕ್‌ನ ಸಿಬ್ಬಂದಿಯೇ ಸೇರಿಕೊಂಡು ಸುಮಾರು 590 ಕೋಟಿ ರೂಪಾಯಿಗಳ ಹಣಕಾಸು ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹರಿಯಾಣ ಸರ್ಕಾರಕ್ಕೆ ಸೇರಿದ ಖಾತೆಗಳಲ್ಲಿ ಈ ವಂಚನೆ ನಡೆದಿದ್ದು, ಬ್ಯಾಂಕ್ ಶೇರುಗಳು ಒಂದೇ ದಿನ ಸುಮಾರು 19% ರಷ್ಟು ಕುಸಿತ ಕಂಡು ಹೂಡಿಕೆದಾರರಲ್ಲಿ ಆತಂಕ ಮೂಡಿಸಿವೆ.
ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ, ಚಂಡೀಗಢ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವು ಉದ್ಯೋಗಿಗಳು ಮತ್ತು ಹೊರಗಿನ ವ್ಯಕ್ತಿಗಳು ಸೇರಿಕೊಂಡು ಹರಿಯಾಣ ಸರ್ಕಾರಕ್ಕೆ ಸಂಬಂಧಿಸಿದ ಖಾತೆಗಳಲ್ಲಿ ಅಕ್ರಮ ಎಸಗಿದ್ದಾರೆ. ಹರಿಯಾಣ ಸರ್ಕಾರದ ಇಲಾಖೆಯೊಂದು ತನ್ನ ಖಾತೆಯನ್ನು ಮುಚ್ಚಿ ಹಣವನ್ನು ಬೇರೆ ಬ್ಯಾಂಕ್‌ಗೆ ವರ್ಗಾಯಿಸಲು ಕೋರಿದಾಗ, ಖಾತೆಯಲ್ಲಿದ್ದ ಅಸಲಿ ಮೊತ್ತ ಮತ್ತು ದಾಖಲೆಗಳಲ್ಲಿದ್ದ ಮೊತ್ತದ ನಡುವೆ ವ್ಯತ್ಯಾಸ ಕಂಡುಬಂದಿದೆ. ಈ ಮೂಲಕ ವಂಚನೆ ಬೆಳಕಿಗೆ ಬಂದಿದೆ.
ಸೋಮವಾರದ ವಹಿವಾಟಿನಲ್ಲಿ IDFC ಫಸ್ಟ್ ಬ್ಯಾಂಕ್ ಶೇರುಗಳು 19% ರಷ್ಟು ಕುಸಿದು ಪ್ರತಿ ಶೇರಿಗೆ 68 ರೂಪಾಯಿಗೆ ತಲುಪಿದೆ. ಮಾರುಕಟ್ಟೆಯಲ್ಲಿ ಸುಮಾರು 21 ಲಕ್ಷಕ್ಕೂ ಹೆಚ್ಚು ಶೇರುಗಳನ್ನು ಮಾರಾಟ ಮಾಡಲು ಹೂಡಿಕೆದಾರರು ಮುಂದಾಗಿದ್ದರೂ, ಅವುಗಳನ್ನು ಖರೀದಿಸಲು ಯಾರೂ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಬ್ರೋಕರೇಜ್ ಸಂಸ್ಥೆಗಳ ಪ್ರಕಾರ, ಈ ವಂಚನೆಯ ಮೊತ್ತವು ಬ್ಯಾಂಕ್‌ನ ಒಟ್ಟು ಆಸ್ತಿಯ (Net worth) 0.9% ಮತ್ತು 2026ರ ಆರ್ಥಿಕ ವರ್ಷದ ಅಂದಾಜು ಲಾಭದ 20% ರಷ್ಟಿದೆ.
ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಹರಿಯಾಣ ಸರ್ಕಾರವು ಕಠಿಣ ಕ್ರಮ ಕೈಗೊಂಡಿದೆ. IDFC ಫಸ್ಟ್ ಬ್ಯಾಂಕ್ ಮತ್ತು AU ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳನ್ನು ಸರ್ಕಾರಿ ವ್ಯವಹಾರಗಳಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ (De-empanelled). ಇನ್ನು ಮುಂದೆ ಈ ಬ್ಯಾಂಕ್‌ಗಳಲ್ಲಿ ಯಾವುದೇ ಸರ್ಕಾರಿ ಹಣವನ್ನು ಠೇವಣಿ ಇಡುವಂತಿಲ್ಲ ಅಥವಾ ಹೂಡಿಕೆ ಮಾಡುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ.
ವಂಚನೆಯಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ನಾಲ್ಕು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇನ್ನು ಘಟನೆಯ ಬಗ್ಗೆ ಆರ್‌ಬಿಐಗೆ ಮಾಹಿತಿ ನೀಡಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಸ್ವತಂತ್ರ ಫೋರೆನ್ಸಿಕ್ ಆಡಿಟ್ ನಡೆಸಲು ನಿರ್ಧರಿಸಲಾಗಿದೆ. ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಇತರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು (Lien mark) ಮನವಿ ಮಾಡಲಾಗಿದೆ.
ಈ ವಂಚನೆಯು ಕೇವಲ ಚಂಡೀಗಢ ಶಾಖೆಯ ನಿರ್ದಿಷ್ಟ ಸರ್ಕಾರಿ ಖಾತೆಗಳಿಗೆ ಮಾತ್ರ ಸೀಮಿತವಾಗಿದ್ದು, ಇತರ ಗ್ರಾಹಕರ ಹಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಬ್ಯಾಂಕ್ ಭರವಸೆ ನೀಡಿದೆ.
ಡಿಸೆಂಬರ್ 2025ರ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ನಿವ್ವಳ ಲಾಭ 48% ರಷ್ಟು ಹೆಚ್ಚಾಗಿ 503 ಕೋಟಿ ರೂ. ತಲುಪಿತ್ತು. ಇಂತಹ ಉತ್ತಮ ಬೆಳವಣಿಗೆಯ ನಡುವೆಯೇ ಈ ವಂಚನೆ ಪ್ರಕರಣ ಬ್ಯಾಂಕ್‌ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.