ಬ್ಯಾಂಕ್ ಉದ್ಯೋಗಿಗಳ ವೇತನದಲ್ಲಿ ಶೇ.17ರಷ್ಟು ಹೆಚ್ಚಳ, ವಾರಕ್ಕೆ 5ದಿನ ಕೆಲಸ ನೀಡುವ ಒಪ್ಪಂದಕ್ಕೆ ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್ ಹಾಗೂ ಯೂನಿಯನ್ಸ್ ಒಪ್ಪಿಗೆ ಸೂಚಿಸಿವೆ.
ನವದೆಹಲಿ (ಡಿ.11): ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್ ಹಾಗೂ ಯೂನಿಯನ್ಸ್ ಎಲ್ಲ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಶೇ.17ರಷ್ಟು ವೇತನ ಹೆಚ್ಚಿಸುವ ಒಪ್ಪಂದಕ್ಕೆ ಬಂದಿವೆ. ಇದಕ್ಕೆ ಒಟ್ಟು
12,449 ಕೋಟಿ ರೂ. ವೆಚ್ಚವಾಗಲಿದೆ. ಈ ನಿರ್ಧಾರದಿಂದ ಎಸ್ ಬಿಐ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕುಗಳ 3.8 ಲಕ್ಷ ಅಧಿಕಾರಿಗಳನ್ನೊಳಗೊಂಡ ಸುಮಾರು 9 ಲಕ್ಷ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. ವೇತನ ಪರಿಷ್ಕರಣೆಗೆ ಸಂಬಂಧಿಸಿ ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್ ಹಾಗೂ ಕೆಲಸಗಾರರ ಯೂನಿಯನ್ಸ್ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅಸೋಸಿಯೇಷನ್ಸ್ ನಡುವೆ ಡಿಸೆಂಬರ್ 7ರಂದು ನಡೆದ ಮಾತುಕತೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ತಿಳುವಳಿಕೆ ಒಪ್ಪಂದಕ್ಕೆ ಕೂಡ ಸಹಿ ಮಾಡಲಾಗಿದೆ. ಇನ್ನು ವೇತನ ಪರಿಷ್ಕರಣೆಗೆ ಸಂಬಂಧಿಸಿದ ಅಂತಿಮ ಸೆಟ್ಲಮೆಂಟ್ ಅನ್ನು 180 ದಿನಗಳೊಳಗೆ ಪೂರ್ಣಗೊಳಿಸಲಾಗುವುದು.
'ಎರಡೂ ಪಕ್ಷಗಳು ತಮಗೆ ಅನುಕೂಲಕರವಾದ ದಿನಾಂಕಗಳಂದು ಭೇಟಿಯಾಗಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ ದ್ವಿಪಕ್ಷೀಯ ತೀರ್ಮಾನ ಅಥವಾ ಜಂಟಿ ನಿರ್ಧಾರಕ್ಕೆ ಬರುತ್ತವೆ. ದ್ವಿಪಕ್ಷೀಯ ಸೆಟ್ಲಮೆಂಟ್ ಅಥವಾ ಜಂಟಿ ನೋಟ್ ಅನ್ನು ಈ ಪಕ್ಷಗಳು 180 ದಿನಗಳೊಳಗೆ ಅಂತಿಮಗೊಳಿಸುತ್ತವೆ' ಎಂದು ಎಂಒಯುನಲ್ಲಿ ತಿಳಿಸಲಾಗಿದೆ.
ಬ್ಯಾಂಕ್ ಉದ್ಯೋಗಿಗಳು ಗ್ರಾಹಕರೊಂದಿಗೆ ಕನ್ನಡದಲ್ಲೇ ಮಾತನಾಡ್ಬೇಕು; ಶೀಘ್ರದಲ್ಲಿ ಜಾರಿಯಾಗಲಿದೆ ನಿಯಮ
ವೇತನ ಪರಿಷ್ಕರಣೆ ಪ್ರಮುಖಾಂಶಗಳು ಹೀಗಿವೆ.
*ವೇತನ ಪರಿಷ್ಕರಣೆ 2022ರ ನವೆಂಬರ್ 1ರಿಂದ ಐದು ವರ್ಷಗಳ ಅವಧಿಗೆ ಅನುಷ್ಠಾನಗೊಳ್ಳಲಿವೆ.
*ಒಪ್ಪಂದದ ಪ್ರಕಾರ ವೇತನ ಹಾಗೂ ಭತ್ಯೆಗಳಲ್ಲಿ ಶೇ.17ರಷ್ಟು ಹೆಚ್ಚಳವಾಗಲಿದೆ. ಇದನ್ನು 2021-22ನೇ ಹಣಕಾಸು ಸಾಲಿನ ವಾರ್ಷಿಕ ವೇತನ ಸ್ಲಿಪ್ ವೆಚ್ಚಗಳ ಆಧಾರದಲ್ಲಿ ನಿರ್ಧರಿಸಲಾಗುವುದು.
*ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಸಾರ್ವಜನಿಕ ವಲಯದ ಎಲ್ಲ ಬ್ಯಾಂಕುಗಳ ವೇತನ ಪರಿಷ್ಕರಣೆಗೆ 12,449 ಕೋಟಿ ರೂ. ತಗುಲಲಿದೆ.
*ಹೊಸ ವೇತನ ಸ್ಕೇಲ್ ಲೆಕ್ಕಾಚಾರಕ್ಕೆ ತುಟ್ಟಿ ಭತ್ಯೆಯನ್ನು 2022ರ ಅಕ್ಟೋಬರ್ 31ರ ತುಟ್ಟಿ ಭತ್ಯೆ ಜೊತೆಗೆ ವಿಲೀನಗೊಳಿಸಲಾಗುವುದು. ಇದರೊಂದಿಗೆ ಹೆಚ್ಚುವರಿಯಾಗಿ ಶೇ.3ರಷ್ಟನ್ನು ಸೇರ್ಪಡೆಗೊಳಿಸಲಾಗುವುದು. ಇದರಿಂದ ಒಟ್ಟು 1,795 ಕೋಟಿ ರೂ. ವೆಚ್ಚವಾಗಲಿದೆ.
*2021-22ನೇ ಹಣಕಾಸು ಸಾಲಿನ ವೆಚ್ಚಗಳ ಬ್ರೇಕ್ ಅಪ್ ಆಧಾರದಲ್ಲಿ ಉದ್ಯೋಗಿಗಳು ಹಾಗೂ ಅಧಿಕಾರಿಗಳ ನಡುವಿನ ವಾರ್ಷಿಕ ವೇತನ ಹೆಚ್ಚಳವನ್ನು ಪ್ರತ್ಯೇಕವಾಗಿ ನಿರ್ಧರಿಸಲಾಗಿದೆ.
*ಇನ್ನು ಎಲ್ಲ ನಿವೃತ್ತರಿಗೆ ಪಿಂಚಣಿ ಹೆಚ್ಚಳದ ಬೇಡಿಕೆ ಇನ್ನೂ ಚರ್ಚೆ ಹಂತದಲ್ಲಿದೆ. 2022ರ ಅಕ್ಟೋಬರ್ 31ಕ್ಕೆ ಅನ್ವಯಿಸುವಂತೆ ಪಡೆಯುತ್ತಿರುವ ಪಿಂಚಣಿಗೆ ಅನುಗುಣವಾಗಿ ಪಿಂಚಣಿದಾರರು ಹಾಗೂ ಪಿಂಚಣಿದಾರರ ಕುಟುಂಬಗಳಿಗೆ ಒಂದೇ ಬಾರಿಗೆ ಹೆಚ್ಚುವರಿ ಮೊತ್ತವನ್ನು ಪಿಂಚಣಿ ಜೊತೆಗೆ ಪಾವತಿಸಲಾಗುವುದು.
*ನಿವೃತ್ತರಿಗೆ ಎಕ್ಸ್ ಗ್ರೇಷಿಯಾ (ex-gratia) ಸೆಟ್ಲಮೆಂಟ್ ಅವಧಿ ಬಗ್ಗೆ ಮತ್ತೆ ಚರ್ಚಿಸಲಾಗುವುದು.
*ಎಕ್ಸ್ ಗ್ರೇಷಿಯಾ ಮೊತ್ತ ತುಟ್ಟಿ ಭತ್ಯೆ ಸೇರಿದಂತೆ ಇತರ ಯಾವುದೇ ಭತ್ಯೆಗಳಿಗೆ ಅನ್ವಯಿಸೋದಿಲ್ಲ.
*ಯೂನಿಯನ್ಸ್ /ಅಸೋಸಿಯೇಷನ್ಸ್ ಜೊತೆಗಿನ ಈ ಹಿಂದಿನ ಒಪ್ಪಂದಗಳನ್ನು ಆಧರಿಸಿ ಎನ್ಐ ಕಾಯ್ದೆ ಅಡಿಯಲ್ಲಿ ಎಲ್ಲ ಶನಿವಾರಗಳನ್ನು ರಜಾದಿನಗಳೆಂದು ಘೋಷಿಸುವಂತೆ ಭಾರತೀಯ ಬ್ಯಾಂಕ್ಸ್ ಅಸೋಷಿಯೇಷನ್ಸ್ ಈಗಾಗಲೇ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
Bank Holidays: ಡಿಸೆಂಬರ್ ತಿಂಗಳಲ್ಲಿ 18 ದಿನ ಬ್ಯಾಂಕ್ ರಜೆ; 6 ದಿನ ದೇಶವ್ಯಾಪಿ ಮುಷ್ಕರ
ಮುಷ್ಕರಕ್ಕೆ ಕರೆ ನೀಡಿದ ಉದ್ಯೋಗಿಗಳ ಸಂಘಟನೆ
ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (AIBEA) ಡಿಸೆಂಬರ್ ತಿಂಗಳಲ್ಲಿ 6 ದಿನಗಳ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು. ಡಿಸೆಂಬರ್ 4ರಿಂದ 11ರ ತನಕ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಬೇರೆ ಬೇರೆ ದಿನ ಮುಷ್ಕರ ನಡೆಸುವಂತೆ ಕರೆ ನೀಡಲಾಗಿತ್ತು.
ಬ್ಯಾಂಕ್ ಉದ್ಯೋಗಿಗಳಿಗೆ ಕನ್ನಡ ಕಲಿಕೆ
ಕರ್ನಾಟಕದಲ್ಲಿ ಬ್ಯಾಂಕ್ ಉದ್ಯೋಗಿಗಳು ಕನ್ನಡ ಕಲಿಯಬೇಕು ಹಾಗೂ ಗ್ರಾಹಕರ ಜೊತೆಗೆ ಕನ್ನಡದಲ್ಲಿ ವ್ಯವಹರಿಸಬೇಕು ಎಂಬ ನಿಯಮ ಶೀಘ್ರದಲ್ಲೇ ಜಾರಿಯಾಗಲಿದೆ. ಪರಭಾಷೆಯ ಬ್ಯಾಂಕ್ ಉದ್ಯೋಗಿಗಳು ಹಾಗೂ ಗ್ರಾಹಕರ ನಡುವೆ ಭಾಷೆಗೆ ಸಂಬಂಧಿಸಿ ವಾಗ್ವಾದಗಳು ನಡೆಯುತ್ತಿರುವ ಮಧ್ಯದಲ್ಲಿ ಇಂಥದೊಂದು ನಿಯಮ ಜಾರಿಯಾಗುವ ಸೂಚನೆ ಸಿಕ್ಕಿದೆ. ಈ ಸಂಬಂಧ ಈ ಹಿಂದಿನ ಬಿಜೆಪಿ ಸರ್ಕಾರ ಈ ವರ್ಷದ ಮಾರ್ಚ್ ನಲ್ಲಿ ವಿಧಾನಸಭೆಯಲ್ಲಿ ಕಾನೂನುವೊಂದಕ್ಕೆ ಅನುಮೋದನೆ ನೀಡಿತ್ತು. ಇದು ಇನ್ನಷ್ಟೇ ಅನುಷ್ಠಾನಗೊಳ್ಳಬೇಕಿದೆ.