ಈರುಳ್ಳಿ ಬೆಲೆಯೇರಿಕೆ ಬಳಿಕ ಈಗ ಬೆಳ್ಳುಳ್ಳಿ ದರದಲ್ಲಿ ಹೆಚ್ಚಳ ಕಂಡುಬಂದಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಬೆಳ್ಳುಳ್ಳಿ ಬೆಲೆ ಕೆಜಿಗೆ 400ರೂ. ತಲುಪಿದೆ.
ಮುಂಬೈ (ಡಿ.11): ಈರುಳ್ಳಿ ಆಯ್ತು ಈಗ ಬೆಳ್ಳುಳ್ಳಿ ಸರದಿ. ಗಗನಕ್ಕೇರಿರುವ ಬೆಳ್ಳುಳ್ಳಿ ಬೆಲೆ ಸಾಮಾನ್ಯ ಗ್ರಾಹಕನ ಜೇಬು ಸುಡುತ್ತಿದೆ. ಹೀಗಾಗಿ ಸ್ವಲ್ಪ ದಿನಗಳ ಕಾಲ ಅಡುಗೆಯಲ್ಲಿ ಬೆಳ್ಳುಳ್ಳಿ ಬಳಸದಿರೋದೆ ಉತ್ತಮ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ 300-400ರೂ. ತಲುಪಿದೆ. ಹವಾಮಾನ ವೈಪರೀತ್ಯದಿಂದಾಗಿ ಬೆಳ್ಳುಳ್ಳಿ ಫಸಲು ಉತ್ತಮವಾಗಿರದ ಕಾರಣ ಈ ಬಾರಿ ಮಹಾರಾಷ್ಟ್ರದಿಂದ ಇದರ ಪೂರೈಕೆ ತಗ್ಗಿದೆ. ನಾಸಿಕ್ ಹಾಗೂ ಪುಣೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಹವಮಾನ ವೈಪರೀತ್ಯದಿಂದಾಗಿ ಬೆಳೆ ಚೆನ್ನಾಗಿ ಬಂದಿಲ್ಲ. ಹೀಗಾಗಿ ಮುಂಬೈನಲ್ಲಿರುವ ಬೆಳ್ಳುಳ್ಳಿ ಸಗಟು ವ್ಯಾಪಾರಿಗಳು ನೆರೆಯ ರಾಜ್ಯಗಳಾದ ಗುಜರಾತ್, ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದ ಬೆಳ್ಳುಳ್ಳಿಇ ಖರೀದಿಸುತ್ತಿದ್ದಾರೆ. ಇದರಿಂದ ಸಾಗಣೆ ವೆಚ್ಚ ಹಾಗೂ ಸ್ಥಳೀಯ ತೆರಿಗೆಗಳ ಕಾರಣಕ್ಕೆ ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ.
ಬೆಳ್ಳುಳ್ಳಿ ಬೆಲೆ ದುಪ್ಪಟ್ಟು
ಕಳೆದ ಕೆಲವು ವಾರಗಳಲ್ಲಿ ಪೂರೈಕೆಯಲ್ಲಿನ ವ್ಯತ್ಯಾಸ ಹಾಗೂ ಎಪಿಎಂಸಿ ಯಾರ್ಡ್ ನಲ್ಲಿನ ವ್ಯಾಪಾರಿಗಳು ಪರಿಸ್ಥಿತಿ ಶೀಘ್ರದಲ್ಲಿ ಸುಧಾರಿಸೋದಿಲ್ಲ ಎಂದು ಅಂದಾಜಿಸಿದ ಹಿನ್ನೆಲೆಯಲ್ಲಿ ಬೆಳ್ಳುಳ್ಳಿ ದರ ದುಪ್ಪಟ್ಟಾಗಿದೆ. ಈಗಾಗಲೇ ಗ್ರಾಹಕರಿಗೆ ಈ ಬೆಲೆಯೇರಿಕೆ ಬಿಸಿ ತಟ್ಟಿದೆ. ಕಳೆದ ತಿಂಗಳು ಕೆಜಿಗೆ 100-150ರೂ.ಗೆ ಮಾರಾಟವಾಗುತ್ತಿದ್ದ ಬೆಳ್ಳುಳ್ಳಿ ಬೆಲೆ ಈಗ 150-250ರೂ.ಗೆ ಏರಿಕೆಯಾಗಿದೆ. ಈ ಬದಲಾವಣೆಯಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಈಗ ಕೆಜಿಗೆ 300-400ರೂ. ತಲುಪಿದೆ.
ಸೋಡಾ ಕುಡಿಯೋಕೆ ಹೋದವಳು 83 ಲಕ್ಷ ರೂಪಾಯಿ ಗೆದ್ಲು!
ತಗ್ಗಿದ ಪೂರೈಕೆ
ಸಗಟು ಮಾರುಕಟ್ಟೆಗೆ ಈಗ ಬೆಳ್ಳುಳ್ಳಿ ದಿನಕ್ಕೆ 15-20 ವಾಹನಗಳಲ್ಲಿ ಬರುತ್ತಿದೆ. ಈ ಹಿಂದೆ ದಿನಕ್ಕೆ 25ರಿಂದ 30 ವಾಹನಗಳಲ್ಲಿ ಬೆಳ್ಳುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು. ಇನ್ನು ದಕ್ಷಿಣ ರಾಜ್ಯಗಳಿಂದ ಕೂಡ ಬೆಳ್ಳುಳ್ಳಿ ಪೂರೈಕೆ ತಗ್ಗಿದೆ. ಇದು ಕೂಡ ಬೆಳ್ಳುಳ್ಳಿ ಬೆಲೆಯಲ್ಲಿ ಭಾರೀ ಏರಿಕೆಗೆ ಕಾರಣವಾಗಿದೆ. ಇನ್ನು ಊಟಿ ಹಾಗೂ ಮಲಪುರಂನಿಂದ ಪೂರೈಕೆಯಾಗುತ್ತಿದ್ದ ಬೆಳ್ಳುಳ್ಳಿ ಪ್ರಮಾಣದಲ್ಲಿ ಕೂಡ ಭಾರೀ ಇಳಿಕೆಯಾಗಿದೆ. ಇದು ಕೂಡ ಬೆಲೆಯೇರಿಕೆಗೆ ಕಾರಣವಾಗಿದೆ.
ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳಲ್ಲಿ ಬೆಳ್ಳುಳ್ಳಿ ದರದಲ್ಲಿ ಭಾರೀ ಏರಿಕೆಯಾಗಿದೆ. ಇದು ಜನಸಾಮಾನ್ಯರ ತಿಂಗಳ ಅಡುಗೆಮನೆಯ ವೆಚ್ಚದ ಮೇಲೆ ಪರಿಣಾಮ ಬೀರಲಿದೆ. ಕಳೆದ ಕೆಲವು ತಿಂಗಳಿಂದ ಒಂದರ ಮೇಲೊಂದರಂತೆ ತರಕಾರಿ ಹಾಗೂ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ. ಈ ಹಿಂದೆ ಟೊಮ್ಯಾಟೋ ಹಾಗೂ ಈರುಳ್ಳಿ ಬೆಲೆಗಳಲ್ಲಿ ಕೂಡ ಭಾರೀ ಏರಿಕೆಯಾಗಿತ್ತು. ಆದರೆ, ಆ ಬಳಿಕ ಬೆಲೆ ಇಳಿಕೆಯಾಗಿತ್ತು. ಈಗ ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.
'ಮಳೆಗಾಲದಲ್ಲಿ ಮಳೆ ಸಮರ್ಪಕ ಪ್ರಮಾಣದಲ್ಲಿ ಆಗದ ಕಾರಣ ಹಾಗೂ ಅಕಾಲಿಕ ಮಳೆಯಿಂದ ಈ ಬಾರಿ ಬೆಳ್ಳುಳ್ಳಿ ಉತ್ಪಾದನೆ ಕುಸಿದಿದೆ. ಹಾಗೆಯೇ ಬೆಳ್ಳುಳ್ಳಿಯನ್ನು ವರ್ತಕರು ಅನಧಿಕೃತ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಂಡಿರುವ ಕಾರಣ ಸ್ಥಳೀಯ ಮಾರುಕಟ್ಟೆಯಲ್ಲಿ ಪೂರೈಕೆ ಕುಸಿದಿದೆ. ಹೀಗಾಗಿ ನಾವು ಬೆಳ್ಳುಳ್ಳಿ ಪೂರೈಕೆಗಾಗಿ ಗುಜರಾತ್, ರಾಜಸ್ಥಾನ ಹಾಗೂ ಮಧ್ಯ ಪ್ರದೇಶವನ್ನು ಆಶ್ರಯಿಸಿದ್ದೇವೆ. ಇದು ನಮಗೆ ದುಬಾರಿಯಾಗಿದೆ ಕೂಡ' ಎಂದು ಮುಂಬೈ ಎಪಿಎಂಸಿ ನಿರ್ದೇಶಕ ಅಶೋಕ್ ವಲುಂಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಬ್ಬರಿ ಬೆಲೆ ಏರಿಕೆ: ಚಕಾರವೆತ್ತದ ಸಚಿವ, ಶಾಸಕ
ಇನ್ನು ವರ್ತಕರ ಪ್ರಕಾರ ಹೊಸ ಬೆಳೆ ಮಾರುಕಟ್ಟೆಗೆ ಬರಲು ಸಮಯ ಹಿಡಿಯುತ್ತದೆ ಹಾಗೂ ಅಲ್ಲಿಯ ತನಕ ಬೆಳ್ಳುಳ್ಳಿ ಬೆಲೆ ಅಧಿಕ ಮಟ್ಟದಲ್ಲೇ ಇರುತ್ತದೆ. ಇನ್ನು ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ಅಕಾಲಿಕ ಮಳೆಯಿಂದಾಗಿ ಅನೇಕ ಭಾಗಗಳಲ್ಲಿ ಬೆಳೆ ಹಾನಿಯಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಬೆಲೆಯೇರಿಕೆಗೆ ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು ಒಬ್ಬರ ಮೇಲೋಬ್ಬರು ಅಪವಾದ ಹೊರಿಸುತ್ತಿದ್ದಾರೆ.