ಜನವರಿ ತಿಂಗಳ ವೇತನವನ್ನು ತಡವಾಗಿ ಪಾವತಿಸಿದರ ಹಿಂದಿನ ಕಾರಣವನ್ನು ವಿವರಿಸಿ ಬೈಜುಸ್ ಸಿಇಒ ರವೀಂದ್ರನ್, ಉದ್ಯೋಗಿಗಳಿಗೆ ಭಾವನಾತ್ಮಕ ಮೇಲ್ ಬರೆದಿದ್ದಾರೆ. ಅಲ್ಲದೆ, ಈ ಹೋರಾಟದಲ್ಲಿ ಸಾಥ್ ನೀಡುವಂತೆ ಉದ್ಯೋಗಿಗಳನ್ನು ಕೋರಿದ್ದಾರೆ.
ನವದೆಹಲಿ (ಫೆ.6): ಆರ್ಥಿಕ ಸಂಕಷ್ಟದಲ್ಲಿರುವ ಎಜುಟೆಕ್ ಕಂಪನಿ ಬೈಜುಸ್ ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಿದೆ. 22 ಬಿಲಿಯನ್ ಡಾಲರ್ ಕಂಪನಿಯ ಮೌಲ್ಯ ಇದೀಗ 3 ಸಾವಿರ ಡಾಲರ್‌ಗೆ ಕುಸಿದಿದೆ. ಆನ್ ಲೈನ್ ಶಿಕ್ಷಣ, ಕೋಚಿಂಗ್ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಬೈಜುಸ್ ಹೊಸ ಕ್ರಾಂತಿ ಸೃಷ್ಟಿಸಿತ್ತು. ಆದರೆ, ಕಳೆದ ಕೆಲವು ತಿಂಗಳಿಂದ ಉದ್ಯೋಗಿಗಳಿಗೆ ಸಮರ್ಪಕವಾಗಿ ವೇತನ ಪಾವತಿಸಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿಯನ್ನು ಬೈಜುಸ್ ಎದುರಿಸಿತ್ತು. ಇಂಥ ಪರಿಸ್ಥಿತಿಯಲ್ಲಿ ಬೈಜುಸ್ ಸಿಇಒ ರವೀಂದ್ರನ್ ತಮ್ಮ ಸ್ವಂತ ಮನೆ ಹಾಗೂ ಕುಟುಂಬದವರ ಮನೆಯನ್ನು ಅಡವಿಟ್ಟು ಉದ್ಯೋಗಿಗಳಿಗೆ ವೇತನ ಪಾವತಿಸಲು ಮುಂದಾಗಿದ್ದರು. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಉದ್ಯೋಗಿಗಳಿಗೆ ಬೈಜುಸ್ ಸಿಇಒ ಇ-ಮೇಲ್ ಕಳುಹಿಸಿದ್ದು, ಕಷ್ಟಕರ ಪರಿಸ್ಥಿತಿಯಲ್ಲಿ ಸಮಯಕ್ಕೆ ಸರಿಯಾಗಿ ವೇತನ ಪಾವತಿಸೋದು ಎಷ್ಟು ಪ್ರಯಾಸಕರ ಸಂಗತಿಯಾಗಿತ್ತು ಎಂಬ ವಿಚಾರವನ್ನು ತಿಳಿಸಿದ್ದಾರೆ. ಅಲ್ಲದೆ, ಉದ್ಯೋಗಿಗಳ ತಾಳ್ಮೆ ಹಾಗೂ ಸಹನೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹಾಗೆಯೇ ಜನವರಿ ತಿಂಗಳ ವೇತನ ನೀಡಲು ತೆಗೆದುಕೊಂಡ ಅಪಾರ ಪರಿಶ್ರಮಗಳ ಬಗ್ಗೆ ಕೂಡ ಮೇಲ್ ನಲ್ಲಿ ಪ್ರಸ್ತಾಪಿಸಿದ್ದಾರೆ.
ಸಂಸ್ಥೆಯ ಪ್ರಾಮಾಣಿಕ, ಬದ್ಧತೆಯುಳ್ಳ ಉದ್ಯೋಗಿಗಳಿಗೆ ರವೀಂದ್ರನ್ ಬರೆದಿರುವ ಹೃದಯಸ್ಪರ್ಶಿ ಪತ್ರದಲ್ಲಿ, ಉದ್ಯೋಗಿಗಳು ಒಟ್ಟಾಗಿ ಮಾಡಿದ ತ್ಯಾಗಗಳು ಹಾಗೂ ಕಂಪನಿಯ ಸಂಕಷ್ಟದ ಹಂತದಲ್ಲಿ ಅವರು ನೀಡಿದ ದೃಢವಾದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಹಾಗೆಯೇ ಅವರು ಜನವರಿ ತಿಂಗಳ ವೇತನವನ್ನು ಉದ್ಯೋಗಿಗಳಿಗೆ ತಲುಪಿಸಲು ಪಟ್ಟ ಅಪಾರ ಪರಿಶ್ರಮಗಳ ಬಗ್ಗೆ ಕೂಡ ಇದರಲ್ಲಿ ಅವರು ವಿವವರಿಸಿದ್ದಾರೆ.
ಉದ್ಯೋಗಿಗಳಿಗೆ ಸ್ಯಾಲರಿ ನೀಡಲು ಸ್ವಂತ ಮನೆಯನ್ನೇ ಅಡವಿಟ್ಟ ಬೈಜುಸ್ ಸಂಸ್ಥಾಪಕ!
'ಕಳೆದ ಕೆಲವು ತಿಂಗಳಿಂದ ವೇತನ ಪಾವತಿಸಲು ನಾನು ಬೆಟ್ಟವನ್ನೇ ನೂಕಿದಷ್ಟು ಪರಿಶ್ರಮ ಪಟ್ಟಿದ್ದೇನೆ. ಈ ಬಾರಿಯಂತೂ ಸಂಕಷ್ಟ ಇನ್ನೂ ದೊಡ್ಡದಾಗಿತ್ತು. ನಿಮಗೆ ನ್ಯಾಯಬದ್ಧವಾಗಿ ಸಿಗಬೇಕಾಗಿರೋದನ್ನು ತಲುಪುವಂತೆ ಮಾಡಲು ನಾನು ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ. ಪ್ರತಿಯೊಬ್ಬರೂ ತ್ಯಾಗ ಮಾಡಿದ್ದಾರೆ. ಹಾಗೆಯೇ ಪ್ರತಿಯೊಬ್ಬರು ತಾವು ಎಂದಿಗೂ ಮಾಡಲು ಬಯಸದ ನಿರ್ಧಾರಗಳ ಜೊತೆಗೆ ಗಟ್ಟಿಯಾಗಿರಲು ಹೋರಾಟ ನಡೆಸಿದ್ದಾರೆ. ಈ ಹೋರಾಟದಲ್ಲಿ ಪ್ರತಿಯೊಬ್ಬರೂ ಸ್ವಲ್ಪ ಮಟ್ಟಿಗೆ ದಣಿದಿದ್ದಾರೆ ಕೂಡ. ಆದರೆ, ಯಾರು ಕೂಡ ಈ ಹೋರಾಟವನ್ನು ಕೈಬಿಡಲು ಮುಂದಾಗಿಲ್ಲ' ಎಂದು ಫೆ.4ರಂದು ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಬೈಜುಸ್ ಸಿಇಒ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ವರದಿಗಳ ಪ್ರಕಾರ ಬೈಜುಸ್ ತನ್ನ ಪ್ರಸಕ್ತ ಉದ್ಯೋಗಿಗಳಿಗೆ ನೀಡಬೇಕಿದ್ದ ಎಲ್ಲ ಬಾಕಿ ಪಾವತಿಗಳನ್ನು ಈ ಹಿಂದೆ ನೀಡಿದ್ದ ಅಂತಿಮ ಗಡುವಿಗೆ ಒಂದು ದಿನ ಮುಂಚಿತವಾಗಿ ಸೆಟ್ಲ್ ಮಾಡಿದೆ.
'ನನ್ನ ಸಾಮರ್ಥ್ಯದ ಮೇಲೆ ನೀವಿಟ್ಟಿರುವ ನಂಬಿಕೆಗಿಂತ ದೊಡ್ಡದು ಬೇರೆ ಯಾವುದೂ ಇಲ್ಲ. ನಾನು ನಿಮಗಾಗಿ ಹೋರಾಟ ಮಾಡುತ್ತೇನೆ. ನೀವೂ ನನ್ನೊಂದಿಗೆ ಹೋರಾಡಿ. ಈ ಪವಿತ್ರ ಸಂಬಂಧವೇ ನನಗೆ ಪ್ರತಿ ಬಿರುಗಾಳಿಯ ವಿರುದ್ಧ ಹೋರಾಡಲು ನೆರವು ನೀಡಿರೋದು' ಎಂದು ರವೀಂದ್ರನ್ ಮೇಲ್ ನಲ್ಲಿ ಬರೆದಿದ್ದಾರೆ.
ಇನ್ನು ಜನವರಿ ತಿಂಗಳ ವೇತನ ವಿಳಂಬವಾಗಲು ಹೂಡಿಕೆದಾರರ ನಿರ್ದಿಷ್ಟ ಗುಂಪು 'ಕೃತಕವಾಗಿ ಸೃಷ್ಟಿಸಿದ ಸಂದಿಗ್ಧತೆ' ಕಾರಣ ಎಂದು ಬೈಜುಸ್ ಉದ್ಯೋಗಿಗಳಿಗೆ ಕಳುಹಿಸಿರುವ ಮೇಲ್ ನಲ್ಲಿ ತಿಳಿಸಿದೆ.
'ಕೆಲವು ಹೂಡಿಕೆದಾರರು ನಾವು ಎದುರಿಸಿದ ಸಂಕಷ್ಟವನ್ನು ಸಂಸ್ಥೆ ವಿರುದ್ಧ ಪಿತೂರಿ ನಡೆಸಲು ಸಿಕ್ಕ ಅವಕಾಶ ಎಂದು ಭಾವಿಸಿದರು. ಹಾಗೆಯೇ ನಮ್ಮ ಸಂಸ್ಥಾಪಕರು ಬೈಜುಸ್ ಸಿಇಒ ಹುದ್ದೆಯಿಂದ ಕೆಳಗಿಳಿಯುವಂತೆ ಆಗ್ರಹಿಸಿದರು. ಇಂಥ ಸವಾಲಿನ ಸಮಯದಲ್ಲಿ ನಮಗೆ ಬೆಂಬಲ ನೀಡಬೇಕಾದ ಕೆಲವು ಹೂಡಿಕೆದಾರರ ಈ ರೀತಿಯ ವರ್ತನೆಯಿಂದ ನಮಗೆ ಬೇಸರವಾಗಿದೆ. ನಮ್ಮೊಂದಿಗೆ ನೇರವಾಗಿ ಮಾತನಾಡುವ ಬದಲು ಮಾಧ್ಯಮದ ಮುಂದೆ ಮಾತನಾಡಿರೋದು ಕೂಡ ನಮಗೆ ನೋವು ನೀಡಿದೆ' ಎಂಬ ವಿಚಾರವನ್ನು ಕೂಡ ಮೇಲ್ ನಲ್ಲಿ ಪ್ರಸ್ತಾಪಿಸಲಾಗಿದೆ.
9,000 ಕೋಟಿ ರೂ ದಂಡ ಪಾವತಿಗೆ ಇಡಿ ನೋಟಿಸ್ ವರದಿ, ಸ್ಪಷ್ಟನೆ ನೀಡಿದ ಕಂಪನಿ!
'ಹೌದು, ಹಳೆಯ ಸಾಲಗಳು ಇನ್ನೂ ತೀರಿಸಲು ಬಾಕಿ ಉಳಿದಿವೆ. ಹಾಗೆಯೇ ಕಿರು ಅವಧಿಯ ಬೆಳವಣಿಗೆಯನ್ನು ಕೂಡ ದಾಖಲಿಸಬೇಕಿದೆ. ಈ ಹಕ್ಕುಗಳ ಯಶಸ್ಸು ನಮಗೆ ಮುಂದಿನ ಸವಾಲುಗಳನ್ನು ಎದುರಿಸಲು ನೆರವು ನೀಡಲಿದೆ' ಎಂದು ಅವರು ತಿಳಿಸಿದರು.
ಬೈಜು ರವೀಂದ್ರನ ಕಂಪನಿಯನ್ನು ಉಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಕೊರೋನಾ ಹಾಗೂ ಅದಕ್ಕಿಂತ ಮೊದಲು ಬೈಜುಸ್ ದೇಶದ ಅತೀ ದೊಡ್ಡ ಎಜುಟೆಕ್ ಕಂಪನಿಯಾಗಿ ಬೆಳೆದಿತ್ತು. ಸಾವಿರಾರು ಕೋಟಿ ರೂಪಾಯಿ ವ್ಯವಹಾರದಲ್ಲಿ ತೊಡಗಿಸಿಕೊಂಡಿತ್ತು. ಇದೀಗ ಆರ್ಥಿಕ ನಷ್ಟ, ಸಾಲದ ಸುಳಿ, ಕಾನೂನು ಹೋರಾಟ ಸೇರಿದಂತೆ ಹಲವು ಸಂಕಷ್ಟಗಳು ಎದುರಾಗಿದೆ.