Hubballi: ನೈಋತ್ಯ ರೈಲ್ವೆಯಿಂದ ದಾಖಲೆಗಳ ಮೇಲೆ ದಾಖಲೆ; ಆದಾಯ ಕೇಳಿದ್ರೆ ಶಾಕ್ ಆಗ್ತೀರಿ!

Published : Apr 02, 2026, 08:00 AM IST
Hubballi South Western Railway

ಸಾರಾಂಶ

2025-26ನೇ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆಯು ಸರಕು ಸಾಗಣೆ, ಆದಾಯ ಮತ್ತು ಮೂಲಸೌಕರ್ಯದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ವಲಯದ ಒಟ್ಟು ಆದಾಯ ₹9,488 ಕೋಟಿಗೆ ಏರಿಕೆಯಾಗಿದ್ದು, 52.46 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದೆ

ಹುಬ್ಬಳ್ಳಿ: 2025–26ನೇ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆ ಸರಕು ಸಾಗಣೆ, ಆದಾಯ ಉತ್ಪಾದನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿ, ಕಾರ್ಯಕ್ಷಮತೆಯಲ್ಲಿ ಹೊಸ ದಾಖಲೆ ಸ್ಥಾಪಿಸಿದೆ.

ಈ ಅವಧಿಯಲ್ಲಿ ವಲಯವು ₹5,347.40 ಕೋಟಿ ಮೌಲ್ಯದ ಸರಕು ಸಾಗಣೆ ಆದಾಯ ದಾಖಲಿಸಿದ್ದು, 2024-25ರಲ್ಲಿ ₹4,672 ಕೋಟಿಗಳ ಹಿಂದಿನ ದಾಖಲೆ ಮೀರಿಸಿದೆ. ಒಟ್ಟು ಆದಾಯವು ₹8,489 ಕೋಟಿಯಿಂದ ₹9,488 ಕೋಟಿಗೆ ಏರಿಕೆಯಾಗಿದೆ.

ಪ್ರಯಾಣಿಕರ ವಿಭಾಗದಲ್ಲಿ ಆದಾಯವು ₹3,172.5 ಕೋಟಿಯಿಂದ ₹3,468 ಕೋಟಿಗೆ ಏರಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆ 165.53 ಮಿಲಿಯನ್‌ನಿಂದ 176.93 ಮಿಲಿಯನ್‌ಗೆ ಹೆಚ್ಚಳವಾಗಿದೆ. ಇತರ ಆದಾಯ ಮೂಲಗಳಲ್ಲಿ, ಇತರ ಕೋಚಿಂಗ್ ಆದಾಯ ₹329.5 ಕೋಟಿಗೆ ಏರಿದ್ದು, ಪಾರ್ಸೆಲ್ ಆದಾಯ ₹166.4 ಕೋಟಿಯಿಂದ ₹170.4 ಕೋಟಿಗೆ ಹೆಚ್ಚಾಗಿದೆ. ವಾಣಿಜ್ಯ ವಿವಿಧ ಆದಾಯವು ₹92.82 ಕೋಟಿಯಿಂದ ₹121.08 ಕೋಟಿಗೆ ಏರಿಕೆಯಾಗಿ ಗಮನಾರ್ಹ ಬೆಳವಣಿಗೆ ದಾಖಲಿಸಿದೆ. ಜತೆಗೆ, ಟಿಕೆಟ್ ಪರಿಶೀಲನೆ ಆದಾಯವು ₹53.61 ಕೋಟಿಯಿಂದ ₹70.76 ಕೋಟಿಗೆ ಏರಿಕೆಯಾಗಿ ಒಟ್ಟು ಆದಾಯ ವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ.

45.65 ಮಿಲಿಯನ್ ಟನ್‌ನಿಂದ 52.46 ಮಿಲಿಯನ್ ಟನ್‌ಗೆ ಏರಿಕೆ

2025-26ರಲ್ಲಿ ಸರಕು ಸಾಗಣೆಯ ಕಾರ್ಯಕ್ಷಮತೆ ಎಲ್ಲ ಸ್ಥರಗಳಲ್ಲಿ ಏರಿಕೆಯ ಪ್ರವೃತ್ತಿ ಸಾಧಿಸಿದೆ. ಒಟ್ಟು ಲೋಡಿಂಗ್ 45.65 ಮಿಲಿಯನ್ ಟನ್‌ನಿಂದ 52.46 ಮಿಲಿಯನ್ ಟನ್‌ಗೆ ಏರಿಕೆಯಾಗಿ 6.81 ಮಿಲಿಯನ್ ಟನ್‌ಗಳ (ಶೇ. 14.9) ಬೆಳವಣಿಗೆ ದಾಖಲಿಸಿದೆ. ಕಬ್ಬಿಣದ ಅದಿರು 20.98 ಮಿಲಿಯನ್ ಟನ್‌ನೊಂದಿಗೆ ಅತಿ ಹೆಚ್ಚು ಕೊಡುಗೆ ನೀಡಿದರೆ, ಕಬ್ಬಿಣ ಮತ್ತು ಸಿದ್ಧ ಉಕ್ಕು 10.95 ಮಿಲಿಯನ್ ಟನ್ ಲೋಡಿಂಗ್ ಸಾಧಿಸಿದೆ, ಇದು ಶೇ. 29.4 ಏರಿಕೆ ಸೂಚಿಸುತ್ತದೆ.

ಕಲ್ಲಿದ್ದಲು ಲೋಡಿಂಗ್ 8.92 ಮಿಲಿಯನ್ ಟನ್‌ನಿಂದ 10.31 ಮಿಲಿಯನ್ ಟನ್‌ಗೆ ಏರಿಕೆಯಾಗಿ ಶೇ. 15.6ರಷ್ಟು ಬೆಳವಣಿಗೆ ದಾಖಲಿಸಿದೆ. ಉಕ್ಕಿನ ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಲ್ಲಿ ಶೇ 88.1 ಅತಿ ಹೆಚ್ಚು ಶೇಕಡಾವಾರು ಬೆಳವಣಿಗೆ ಕಂಡುಬಂದಿದೆ. ಇತರ ಸರಕುಗಳಲ್ಲಿ, ರಸಗೊಬ್ಬರ ಲೋಡಿಂಗ್ 1.13 ಮಿಲಿಯನ್ ಟನ್‌ನಿಂದ 1.18 ಮಿಲಿಯನ್ ಟನ್‌ಗೆ ಏರಿಕೆಯಾಗಿದೆ. ಕಂಟೇನರ್ ಸಂಚಾರವು 0.82 ಮಿಲಿಯನ್ ಟನ್‌ನಿಂದ 0.99 ಮಿಲಿಯನ್ ಟನ್‌ಗೆ ಏರಿಕೆಯಾಗಿ ಶೇ. 21 ಬೆಳವಣಿಗೆ ದಾಖಲಿಸಿದೆ. ಆಹಾರ ಧಾನ್ಯಗಳ ಲೋಡಿಂಗ್ ಕೂಡ 0.46 ಮಿಲಿಯನ್ ಟನ್‌ನಿಂದ 0.50 ಮಿಲಿಯನ್ ಟನ್‌ಗೆ ಏರಿಕೆಯಾಗಿದೆ.

ಶೇ. 13ರಷ್ಟು ಕೊಡುಗೆ

ಇದೇ ಅವಧಿಯಲ್ಲಿ ಭಾರತೀಯ ರೈಲ್ವೆಯ ಒಟ್ಟು ಸರಕು ಸಾಗಣೆ 1,615 ಮಿಲಿಯನ್ ಟನ್‌ನಿಂದ 1,667.8 ಮಿಲಿಯನ್ ಟನ್‌ಗೆ ಏರಿಕೆಯಾಗಿದ್ದು, ಈ ಹೆಚ್ಚುವರಿ ಸಾಗಣೆಯಲ್ಲಿ ನೈಋತ್ಯ ರೈಲ್ವೆ ಸುಮಾರು ಶೇ. 13ರಷ್ಟು ಕೊಡುಗೆ ನೀಡಿದೆ. ಮಾ. 31ರಂದು ಒಂದೇ ದಿನದಲ್ಲಿ 31 ರೇಕ್‌ ಲೋಡ್ ಮಾಡುವ ಮೂಲಕ ಫಿನಿಶ್ಡ್ ಸ್ಟೀಲ್‌ನಲ್ಲಿ ಹೊಸ ದಾಖಲೆ ನಿರ್ಮಿಸಲಾಗಿದ್ದು, 2025ರ 29 ರೇಕ್‌ಗಳ ಹಿಂದಿನ ದಾಖಲೆ ಮೀರಿಸಲಾಗಿದೆ.

ಮೂಲಸೌಕರ್ಯ ಅಭಿವೃದ್ಧಿಯಲ್ಲಿಯೂ ನೈಋತ್ಯ ರೈಲ್ವೆ ಗಮನಾರ್ಹ ಪ್ರಗತಿ ಸಾಧಿಸಿದೆ. ವರ್ಷದಲ್ಲಿ 53 ರೂಟ್ ಕಿ.ಮೀ. ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಒಟ್ಟು ವಿದ್ಯುದ್ದೀಕೃತ ಮಾರ್ಗದ ಉದ್ದ 3,339 ಕಿಮೀ ಆಗಿದೆ. ಇದರ ಜತೆಗೆ, 24 ಕಿಮೀ ಹೊಸ ರೈಲ್ವೆ ಮಾರ್ಗಗಳನ್ನು ಪ್ರಾರಂಭಿಸಲಾಗಿದ್ದು, 78.1 ಕಿಲೋಮೀಟರ್ ಡಬಲ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದ ಸಾಮರ್ಥ್ಯ ಹೆಚ್ಚಳ ಮತ್ತು ಸಂಪರ್ಕ ಸುಧಾರಣೆ ಸಾಧ್ಯವಾಗಿದೆ.

ಇದನ್ನೂ ಓದಿ: ಕಬಕ-ಪುತ್ತೂರು ರೈಲು ನಿಲ್ದಾಣದಲ್ಲಿ ಬೃಹತ್ ಶೆಲ್ಟರ್ ನಿರ್ಮಾಣಕ್ಕೆ 2.91 ಕೋಟಿ ರು. ಮಂಜೂರು

ಸರಕು ಸಾಗಣೆ, ಆದಾಯ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾಧಿಸಿದ ಈ ಯಶಸ್ಸುಗಳು ನೈಋತ್ಯ ರೈಲ್ವೆಯ ಶ್ರೇಷ್ಠತೆ ಮತ್ತು ದಕ್ಷತೆಗೆ ಬದ್ಧತೆಯನ್ನು ತೋರಿಸುತ್ತವೆ. ಈ ಸಾಧನೆಗಳೊಂದಿಗೆ ನೈಋತ್ಯ ರೈಲ್ವೆ ಭವಿಷ್ಯದಲ್ಲಿಯೂ ಉತ್ತಮ ಸಂಪರ್ಕ ಹಾಗೂ ನಿರಂತರ ಸೇವೆಗಳನ್ನು ಒದಗಿಸುವಲ್ಲಿ ತನ್ನ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: SWR job notification Kannada row: ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡ ಕಡೆಗಣನೆ; ಹಿಂದಿ, ಆಂಗ್ಲ ಭಾಷೆಯಲ್ಲಿ ಹೊರಡಿಸಿದ್ದಅಧಿಸೂಚನೆಗೆ ತಡೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಸ್ಥಳೀಯರನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಿದ ನೋಯ್ಡಾ ಏರ್‌ಪೋರ್ಟ್: ಹೆಲಿಕಾಪ್ಟರ್ ಖರೀದಿಸಿದ ರೈತ
FASTag ವಾರ್ಷಿಕ ಪಾಸ್‌ ದರ ಹೆಚ್ಚಳ, ಈಗಾಗಲೇ ಪಾಸ್‌ ಖರೀದಿ ಮಾಡಿದವರಿಗೂ ತಟ್ಟುತ್ತಾ ಬೆಲೆ ಏರಿಕೆ ಬಿಸಿ, ಇಲ್ಲಿದೆ ಡೀಟೇಲ್ಸ್‌..