
ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದೇ ಒಂದು, ಬರೋದೇ ಇನ್ನೊಂದು. ಇವೇನೂ ಹೊಸ ವಿಷಯವಲ್ಲ. ಅದರಲ್ಲಿಯೂ ಅತಿ ದೊಡ್ಡ ಇ-ಕಾಮರ್ಸ್ ಮಾರ್ಕೆಟ್ ಅಮೆಜಾನ್‌ನಲ್ಲಿ ಆಗ್ತಿರೋ ಅವಾಂತರಗಳು ಒಂದೆರಡಲ್ಲ. ಆದರೆ ಈ ರೀತಿ ಮೋಸ ಹೋದ ಮೇಲೆ ಆ ಕಂಪೆನಿಯ ಕಸ್ಟಮರ್ ಕೇರ್ಗೆ ಕಾಲ್ ಮಾಡಿದ್ರೆ ಅಲ್ಲಿ ಪಿಕ್ ಮಾಡೋರೂ ಇರಲ್ಲ. ಹಲವು ಸಾವಿರ ರೂಪಾಯಿ ಮೊದಲೇ ಪಾವತಿ ಮಾಡಿದವರ ಗೋಳು ಮಾತ್ರ ದೇವರಿಗೇ ಪ್ರೀತಿ ಎನ್ನುವಂತಾಗುತ್ತದೆ. ಇದೀಗ ಹುಬ್ಬಳ್ಳಿಯ ನಿವಾಸಿ ಒಬ್ಬರಿಗೆ ಇದೇ ರೀತಿ ಆಗಿದ್ದು, ಅವರು ಅಮೆಜಾನ್ಗೆ ಕರೆ ಮಾಡಿ ಮಾಡಿ ಸಾಕಾಗಿ ಕೊನೆಗೆ ಮಾಧ್ಯಮದವರ ಮೊರೆ ಹೋಗಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಹುಬ್ಬಳ್ಳಿಗೆ ಬಂದಿದ್ದ ಶಾರ್ಜಾದ ಅಲ್ಫ್ರೆಡ್ ಎನ್ನುವ ಉದ್ಯಮಿಯೊಬ್ಬರು ಅಮೆಜಾನ್‌ನಲ್ಲಿ 60,990 ರೂಪಾಯಿ ಬೆಲೆಯ ಕ್ಯಾಂಡ್ ಕ್ಯಾಮರಾ ಆರ್ಡರ್ ಮಾಡಿದ್ದರಂತೆ. ಡೆಬಿಟ್ ಕಾರ್ಡ್ ಮೂಲಕ ಹಣವನ್ನೂ ಪಾವತಿಸಿಯಾಗಿದೆ. ಆದರೆ ಆರ್ಡರ್ ಬಂದು ತೆರೆದಾಗ ಶಾಕ್ ಆಗಿದ್ದಾರೆ. ಏಕೆಂದರೆ ಅಲ್ಲಿ ಇದ್ದುದು ವಾಷಿಂಗ್ ಪೌಡರ್. ವಿದೇಶದಿಂದ ಬರುವ ಸ್ನೇಹಿತನಿಗೆ ಗಿಫ್ಟ್ ನೀಡಲು ಕ್ಯಾಮೆರಾ ಆರ್ಡರ್ ಮಾಡಿದ್ರೆ, ವಾಷಿಂಗ್ ಪೌಡರ್ ಪ್ಯಾಕೇಟ್‌ಗಳನ್ನು ನೋಡಿ ಸುಸ್ತಾಗಿದ್ದಾರೆ.
ಕೂಡಲೇ ಅಮೆಜಾನ್ನ ಕಸ್ಟಮರ್ ಕೇರ್ಗೆ ಕರೆ ಮಾಡಿದ್ದಾರೆ. ಆದರೆ ಬಹುತೇಕ ಎಲ್ಲಾ ಕಸ್ಟಮರ್ ಕೇರ್ ಹಣೆಬರಹದ ರೀತಿಯಲ್ಲಿಯೇ ಇಲ್ಲಿಯೂ ಆಗಿದೆ. ರಿಂಗ್ ಆಗುತ್ತದೆಯೇ ವಿನಾ ಎತ್ತುವವರು ಯಾರೂ ಇರಲ್ಲ. ರಿಂಗ್ ಆಗದಿದ್ದರೆ ಬಿಜಿ ಬರುತ್ತದೆ. ಆದರೆ ಮತ್ತೊಮ್ಮೆ ರಿಂಗ್ ಆದರೆ ಅಲ್ಲಿ ನೋ ರೆಸ್ಪಾನ್ಸ್. ಇವರಿಗೆ ಹಾಗೆಯೇ ಆಗಿದ್ದರಿಂದ ರೇಗಿ ಹೋಗಿದ್ದಾರೆ. ಕೊನೆಗೆ ಹರಸಾಹಸ ಪಟ್ಟು ಅಮೆಜಾನ್ಗೆ ದೂರು ನೀಡಿದ್ದಾರೆ.
ಕೊನೆಗೆ ತುಂಬಾ ಪ್ರಯತ್ನದ ಬಳಿಕ ಇನ್ನೊಂದು ವಾರದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಉತ್ತರ ಸಿಕ್ಕಿತಂತೆ. ಅದರಿಂದ ಕೋಪಗೊಂಡ ಅವರು ಮಾಧ್ಯಮಗಳನ್ನು ಕರೆಸಿ ತಮಗಾಗಿರುವ ವಂಚನೆಯ ಬಗ್ಗೆ ಮಾತನಾಡಿದ್ದಾರೆ. ತಾವು ತಂಗಿರುವ ಹೋಟೆಲ್ ವಿಳಾಸಕ್ಕೆ ಆರ್ಡರ್ ಮಾಡಿದ್ದರು. ಎರಡು ದಿನಗಳ ಬಳಿಕ ಪಾರ್ಸೆಲ್ ಬಂದಿದೆ. ತೆರೆದುನೋಡಿದಾಗ, ಕ್ಯಾಮರಾ ಬದಲು, 2 ಪಾಕೆಟ್ ವಾಷಿಂಗ್ ಪೌಡರ್ ಇರೋದು ಕಂಡಿದೆ. ಈ ಬಗ್ಗೆ ಅಮೆಜಾನ್ಗೆ ದೂರು ನೀಡಿದ್ರೂ ಅವರಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಅವರು ನೋವಿನಿಂದ ನುಡಿದಿದ್ದಾರೆ. ದುಬೈನಲ್ಲಿ ಇದ್ದಾಗ ಸಾಕಷ್ಟು ವಸ್ತು ಅಮೆಜಾನ್ನಿಂದ ಖರೀದಿ ಮಾಡಿದ್ದೇನೆ. ಆದ್ರೆ ಅಲ್ಲಿ ಸಮಸ್ಯೆ ಆಗ್ಲಿಲ್ಲ. ಇಲ್ಲಿ ಮಾತ್ರ ಮೋಸ ಆಯ್ತು ಎಂದಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.