Grow Rich: ಶ್ರೀಮಂತರಾಗೋದು ಹೇಗೆ? ಇಲ್ಲಿವೆ 10 ಟಿಪ್ಸ್

By Suvarna NewsFirst Published May 14, 2023, 5:18 PM IST
Highlights

ಹಣ ಮಾಡಬೇಕು,ಶ್ರೀಮಂತರಾಗಬೇಕು ಎಂಬ ಬಯಕೆ ಯಾರಿಗೆ ಇಲ್ಲ ಹೇಳಿ? ಆದರೆ,ಶ್ರೀಮಂತರಾಗಲು ಸೂಕ್ತ ಯೋಜನೆ ಅಗತ್ಯ.ಹಾಗಾದ್ರೆ ಹಣ ಗಳಿಸಲು ಏನ್ ಮಾಡ್ಬೇಕು? ನಮ್ಮ ಆರ್ಥಿಕ ಯೋಜನೆಗಳು ಹೇಗಿರಬೇಕು? ಇಲ್ಲಿದೆ ಮಾಹಿತಿ. 
 

Business Desk: ಹಣ ಮಾಡಬೇಕು ಎಂಬ ಬಯಕೆ ಯಾರಿಗೆ ಇರೋದಿಲ್ಲ ಹೇಳಿ? ಆದರೆ, ಹಣ ಮಾಡೋದು ಅಷ್ಟು ಸುಲಭದ ಕೆಲಸವಂತೂ ಅಲ್ಲ. ಅದಕ್ಕೆ ಹಣಕಾಸಿನ ಯೋಜನೆ, ಬಜೆಟ್, ನಿವೃತ್ತಿ ಯೋಜನೆಗಳು, ಸಾಲದ ನಿರ್ವಹಣೆ ಅಗತ್ಯ. ಯಾವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು? ಎಷ್ಟು ಉಳಿತಾಯ ಮಾಡಬೇಕು? ಎಷ್ಟು ಖರ್ಚು ಮಾಡಬೇಕು ಎಂಬ ಬಗ್ಗೆ ಮೊದಲೇ ಯೋಜನೆ ರೂಪಿಸಿದ್ರೆ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಬಹುದು. ಇತ್ತೀಚಿನ ದಿನಗಳಲ್ಲಿ ಹಣಕಾಸಿನ ನಿರ್ವಹಣೆಗೆ ಸಂಬಂಧಿಸಿ ಜನರಲ್ಲಿ ಹೆಚ್ಚಿನ ಅರಿವು ಮೂಡುತ್ತಿದೆ. ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಲು ಸಮರ್ಪಕ ಯೋಜನೆ ರೂಪಿಸುತ್ತಿದ್ದಾರೆ ಕೂಡ. ಸೂಕ್ತ ನಿರ್ಧಾರ ಹಾಗೂ ಹೆಜ್ಜೆಯಿಂದ ಮಾತ್ರ ದೊಡ್ಡ ಪ್ರಮಾಣದ ಹಣವನ್ನು ಸಂಗ್ರಹಿಸಬಹುದು. ಹಾಗಾದ್ರೆ ಹೂಡಿಕೆ ಮಾಡುವಾಗ ನಾವು ಯಾವೆಲ್ಲ ವಿಚಾರಗಳಿಗೆ ಮಹತ್ವ ನೀಡಬೇಕು? ಶ್ರೀಮಂತರಾಗಲು ಹೂಡಿಕೆದಾರರು ಯಾವೆಲ್ಲ ಟಿಪ್ಸ್ ಅನುಸರಿಸಬೇಕು? ಇಲ್ಲಿದೆ ಮಾಹಿತಿ.
ಶ್ರೀಮಂತರಾಗಲು ಇಲ್ಲಿದೆ 10 ಟಿಪ್ಸ್

1.ದೀರ್ಘಾವಧಿ ಹೂಡಿಕೆ (Long Term Investment)
ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋರಾದ್ರೆ ದೀರ್ಘಾವಧಿ ಹೂಡಿಕೆ ಯೋಜನೆಗಳನ್ನು ಅನುಸರಿಸಿ. ಯಾವುದೇ ಕಾರಣಕ್ಕೂ ಮಾರುಕಟ್ಟೆಯ ಸಮಯ ನೋಡಿ ಹೂಡಿಕೆ ಮಾಡಬೇಡಿ. ಈ ತಂತ್ರ ಕೆಲವೊಮ್ಮೆ ಈಕ್ವಿಟಿ ಹೂಡಿಕೆದಾರರಿಗೆ ದೊಡ್ಡ ಅಪಾಯ ತಂದೊಡ್ಡಬಹುದು. ನಿರ್ದಿಷ್ಟ ಅವಧಿಗೆ ಉತ್ತಮ ಷೇರಿನಲ್ಲಿ ಹೂಡಿಕೆ ಮಾಡೋದು ಉತ್ತಮ. 

2. ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ (Investment in various sectors)
ಒಂದೇ ಕಡೆ ಹೂಡಿಕೆ ಮಾಡಿದ್ರೆ ಅಪಾಯ ಹೆಚ್ಚು. ಹಾಗೆಯೇ ರಿಟರ್ನ್ ಕೂಡ ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ ನಿಮ್ಮ ಹಣವನ್ನು ಈಕ್ವಿಟಿ, ರಿಯಲ್ ಎಸ್ಟೇಟ್, ಚಿನ್ನ, ಬೆಳ್ಳಿ ಮುಂತಾದ ವಿವಿಧ ವಲಯಗಳಲ್ಲಿ ಹೂಡಿಕೆ ಮಾಡಿ. ಇದ್ರಿಂದ ಅಪಾಯ ಕಡಿಮೆ ಹಾಗೂ ಉತ್ತಮ ರಿಟರ್ನ್ ಸಿಗಲಿದೆ ಕೂಡ.

3.ತುರ್ತು ನಿಧಿ (Emergency Fund)
ತುರ್ತು ಅಥವಾ ಅಗತ್ಯ ಸಂದರ್ಭಕ್ಕೆಂದು ಒಂದಿಷ್ಟು ಹಣವನ್ನು ತೆಗೆದಿಡೋದು ಅಗತ್ಯ. ತುರ್ತು ಸಂದರ್ಭಗಳಲ್ಲಿ ತುರ್ತು ನಿಧಿ ನಮಗೆ ನೆರವು ನೀಡುತ್ತದೆ. ಈ ತುರ್ತು ನಿಧಿ ನಮ್ಮ ದೀರ್ಘಾವದಿ ಹೂಡಿಕೆಯನ್ನು ತಲುಪಲು ನೆರವು ನೀಡುತ್ತದೆ. ಹೀಗಾಗಿ ನಿಮ್ಮ ಹಾಗೂ ಕುಟುಂಬ ಸದಸ್ಯರ ಆರೋಗ್ಯ ಹಾಗೂ ಹಣಕಾಸಿನ ಸಮಸ್ಯೆಗಳ ಸಂದರ್ಭಗಳಲ್ಲಿ ನೆರವಾಗಲು ತುರ್ತು ನಿಧಿಯನ್ನು ಹೊಂದಿರೋದು ಅಗತ್ಯ.

Earn Money : ನಿಮ್ಮತ್ರ ಇರೋ ಕಾರಿನಿಂದಾನೇ ಗಳಿಸಬಹುದು ದುಡ್ಡು? ಇಲ್ಲಿವೆ ಟಿಪ್ಸ್

4.ನಿಗದಿತ ರಿಟರ್ನ್ ನೀಡುವ ಯೋಜನೆಗಳಲ್ಲಿ ಹೂಡಿಕೆ (Investment in fixed Return Policies)
ಎಲ್ಲ ಹೂಡಿಕೆಗಳು ನಮಗೆ ನಿಗದಿತ ರಿಟರ್ನ್ ನೀಡೋದಿಲ್ಲ. ಹೀಗಾಗಿ ನಿಗದಿತ ರಿಟರ್ನ್ ನೀಡುವ, ಅಪಾಯ ಕಡಿಮೆಯಿರುವ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ಪಿಪಿಎಫ್, ಬ್ಯಾಂಕ್ ಸ್ಥಿರ ಠೇವಣಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಅಂಚೆ ಕಚೇರಿ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (ಎನ್ ಎಸ್ ಸಿ), ಸುಕನ್ಯಾ ಸಮೃದ್ಧಿಯಂತಹ ಯೋಜನೆಗಳಲ್ಲಿ ಒಂದಿಷ್ಟು ಹೂಡಿಕೆ ಮಾಡೋದು ಅಗತ್ಯ.

5.ಇಪಿಎಫ್ ನಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ ಮಾಡಿ (EPF Investment)
ಉದ್ಯೋಗಿಗಳ ಭವಿಷ್ಯ ನಿಧಿ (EPF) ಕೇಂದ್ರ ಸರ್ಕಾರದ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಗಳಿಗೆ ಹೂಡಿಕೆಗೆ ಇದು ಅತ್ಯುತ್ತಮ ಯೋಜನೆಯಾಗಿದೆ. ಈ ಯೋಜನೆಯಲ್ಲಿನ ಹೂಡಿಕೆ ಸುರಕ್ಷಿತ ಹಾಗೂ ಉತ್ತಮ ರಿಟರ್ನ್ ನೀಡುತ್ತದೆ. ಹೀಗಾಗಿ ಈ ಯೋಜನೆಯಲ್ಲಿ ಆದಷ್ಟು ಹೆಚ್ಚಿನ ಪ್ರಮಾಣದ ಹಣವನ್ನು ಹೂಡಿಕೆ ಮಾಡಲು ಪ್ರಯತ್ನಿಸಿ.

6.ಜೀವ ವಿಮೆ ಹಾಗೂ ಟರ್ಮ್ ಇನ್ಯುರೆನ್ಸ್ ನಲ್ಲಿ ಹೂಡಿಕೆ ಮಾಡಿ (Life Insurance Policy and Term Insurance)
ನಿಮ್ಮ ಅನುಪಸ್ಥಿತಿಯಲ್ಲಿ ಕುಟುಂಬದವರ  ಆರ್ಥಿಕ ಭದ್ರತೆ ದೃಷ್ಟಿಯಿಂದ ಜೀವ ವಿಮೆ ಹಾಗೂ ಟರ್ಮ್ ಇನ್ಯುರೆನ್ಸ್ ಮಾಡಿಸೋದು ಅಗತ್ಯ. ನಿಮ್ಮ ಕುಟುಂಬ ಸದಸ್ಯರು ನಿಮ್ಮ ಮೇಲೆಯೇ ಅವಲಂಬಿತರಾಗಿರುತ್ತಾರೆ. ಹೀಗಿರುವಾಗ ಅವರಿಗೆ ಆರ್ಥಿಕ ಭದ್ರತೆ ಒದಗಿಸಲು ನೀವು ಜೀವ ವಿಮೆ ಹಾಗೂ ಟರ್ಮ್ ಇನ್ಯುರೆನ್ಸ್ ಹೊಂದಿರೋದು ಅಗತ್ಯ.

7.ಹಣಕಾಸಿನ ವೆಚ್ಚಗಳನ್ನು ಬರೆದಿಡಿ
ನಿಮ್ಮ ಹಣಕಾಸಿನ ಯಶಸ್ಸು ನಿಮ್ಮ ವೈಯಕ್ತಿಕ ಯಶಸ್ಸು ಕೂಡ ಹೌದು. ಹೀಗಾಗಿ ನಿಮ್ಮ ಖರ್ಚು-ವೆಚ್ಚಗಳನ್ನು ಬರೆದಿಡುವ ಅಭ್ಯಾಸ ಮಾಡಿ. ಇದರಿಂದ ನೀವು ಎಷ್ಟು ವೆಚ್ಚ ಮಾಡುತ್ತಿದ್ದೀರಿ? ಎಲ್ಲಿ ಅನಗತ್ಯವಾಗಿ ಹಣ ಪೋಲು ಮಾಡುತ್ತಿದ್ದೀರಿ? ಎಂಬುದು ತಿಳಿಯುತ್ತದೆ. ಇದು ವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸಲು ನೆರವು ನೀಡುತ್ತದೆ.

Make Money : ಆರ್ಡರ್ ಹಾಕೋದು ಮಾತ್ರವಲ್ಲ ಹಣ ಸಂಪಾದನೆಗೂ ಅಮೆಜಾನ್ ಬಳಸಿ

8.ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಿ
ಯಾವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು? ಎಷ್ಟು ಹೂಡಿಕೆ ಮಾಡಬೇಕು? ಎಂಬುದನ್ನು ಮೊದಲೇ ನಿರ್ಧರಿಸಿ. ಇದ್ರಿಂದ ಹಣವನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ. 

9.ನಷ್ಟದ ಬಗ್ಗೆ ಭಯ ಬೇಡ
ಹೂಡಿಕೆ ಮಾಡುವಾಗ ನಷ್ಟದ ಭಯ ಕಾಡೋದು ಸಹಜ. ಆದರೆ, ಭಯಪಡುತ್ತ ಸುಮ್ಮನಿದ್ದರೆ ಹಣ ಗಳಿಸಲು ಸಾಧ್ಯವಿಲ್ಲ. ಹೀಗಾಗಿ ಹಣ ಹೂಡಿಕೆ ಮಾಡಿದ್ರೆ ನಷ್ಟವಾಗುತ್ತದೆ ಎಂಬ ಭಯ ಬಿಟ್ಟು ಹೂಡಿಕೆ ಮಾಡಿ.

10.ಆರ್ಥಿಕ ಸ್ವಾತಂತ್ರ್ಯ (Financial Freedom) ಹೊಂದಲು ನಿಮ್ಮನ್ನು ನೀವೇ ಉತ್ತೇಜಿಸಿ
ಹೆಚ್ಚಿನ ಹಣ ಗಳಿಸಬೇಕು ಎಂಬ ಬಯಕೆ ನಿಮ್ಮಲ್ಲಿ ಮೂಡೋದು ಅಗತ್ಯ. ಹೀಗಾಗಿ ಹೆಚ್ಚು ಹಣ ಮಾಡಬೇಕು ಎಂದು ನಿಮ್ಮನ್ನು ನೀವೇ ಉತ್ತೇಜಿಸಿ. ಆಗ ನಿಮಗೆ ಹೂಡಿಕೆ ಮಾಡಲು ಹೆಚ್ಚಿನ ಉತ್ತೇಜನ ಸಿಗುತ್ತದೆ.


 

click me!