ಆನ್‌ಲೈನ್‌ ಮೋಸದಿಂದ ಪಾರಾಗೋದು ಹೇಗೆ? ಈ ಟಿಪ್ಸ್‌ ಫಾಲೋ ಮಾಡಿ

By Suvarna NewsFirst Published Jul 4, 2021, 12:16 PM IST
Highlights

ಕೊರೋನಾ ಬಳಿಕ ಆನ್‌ಲೈನ್‌ ವ್ಯವಹಾರ ವೇಗ ಪಡೆದುಕೊಂಡಿದೆ. ಜೊತೆಗೆ ಆನ್‌ಲೈನ್‌ ವಂಚನೆ ಪ್ರಕರಣಗಳೂ ಹೆಚ್ಚಿವೆ.ಇಂಥ ಸಮಯದಲ್ಲಿ ನಾವು ವಹಿಸಬೇಕಾದ ಎಚ್ಚರಿಕೆಗಳೇನು?

ಕಳೆದೊಂದು ವರ್ಷದಿಂದ ಆನ್‌ಲೈನ್‌ ಶಾಪಿಂಗ್‌ಗೆ ಬೇಡಿಕೆ ಹೆಚ್ಚಿದೆ. ಕೊರೋನಾದ ಕೊಡುಗೆಗಳಾದ ಲಾಕ್‌ಡೌನ್‌, ಸಾಮಾಜಿಕ ಅಂತರ ಹಾಗೂ ವರ್ಕ್‌ ಫ್ರಂ ಹೋಮ್‌ ಕಾರಣಕ್ಕೆ ಮನೆಯೊಳಗೇ ಹೆಚ್ಚಿನ ಸಮಯ ಕಳೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅಲ್ಲದೆ, ದಿನಸಿ, ಹಾಲು, ತರಕಾರಿಗಳಿಂದ ಹಿಡಿದು ಬಟ್ಟೆ ತನಕ ಪ್ರತಿ ವಸ್ತುವನ್ನೂ ಆನ್‌ಲೈನ್‌ನಲ್ಲೇ ಖರೀದಿ ಮಾಡೋ ಟ್ರೆಂಡ್‌ ಹೆಚ್ಚಿದೆ.

ಬ್ಯಾಂಕಿಂಗ್‌ ವ್ಯವಹಾರಗಳು ಕೂಡ ಆನ್‌ಲೈನ್‌ನಲ್ಲೇ ನಡೆಯುತ್ತಿವೆ. ಇವೆಲ್ಲದರ ಪರಿಣಾಮ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ನಾವು ಆನ್‌ಲೈನ್‌ನಲ್ಲಿ ಹೆಚ್ಚಿನ ಸಮಯ ಕಳೆಯಲು ಪ್ರಾರಂಭಿಸುತ್ತಿದ್ದಂತೆ ವಂಚಕರು ಕೂಡ ಹೊಸ ವಿಧಾನಗಳ ಮೂಲಕ ನಾವು ಬೆವರು ಸುರಿಸಿ ದುಡಿದ ಹಣಕ್ಕೆ ಕನ್ನ ಹಾಕುತ್ತಿದ್ದಾರೆ. ಹೀಗಾಗಿ ಆನ್‌ಲೈನ್‌ ವ್ಯವಹಾರ ನಡೆಸೋವಾಗ ನಮ್ಮ ಹಣದ ಸುರಕ್ಷತೆ ದೃಷ್ಟಿಯಿಂದ ಕೆಲವು ಕ್ರಮಗಳನ್ನು ಅನುಸರಿಸೋದು ಅಗತ್ಯ.

ದುಡ್ಡು ಮಾಡೋದು ಹೇಗೆ? ಇಲ್ಲಿವೆ ನೋಡಿ ಸಿಂಪಲ್‌ ಟ್ರಿಕ್ಸ್‌

ಒಟಿಪಿ ಹಂಚಿಕೊಳ್ಳಬೇಡಿ

ನೀವು ಆನ್‌ಲೈನ್‌ ತಾಣದ ವ್ಯವಹಾರಗಳಿಗೆ ಒಟಿಪಿ ಅಗತ್ಯ. ಪ್ರತಿ ವ್ಯವಹಾರಕ್ಕೂ ನಿರ್ದಿಷ್ಟ ಒಟಿಪಿ ಅಥವಾ ಒನ್‌ ಟೈಮ್‌ ಪಾಸ್‌ವಾರ್ಡ್‌ ನಿಮ್ಮ ಮೊಬೈಲ್‌ಗೆ ರವಾನೆಯಾಗುತ್ತೆ. ಈ ಒಟಿಪಿಯನ್ನು ಯಾವುದೇ ಕಾರಣಕ್ಕೂ ಯಾರೊಂದಿಗೂ ಹಂಚಿಕೊಳ್ಳಬೇಡಿ. ಹಾಗೆಯೇ ಅಪರಿಚಿತ ಡಿಜಿಟಲ್‌ ಪೇಮೆಂಟ್‌ ತಾಣಗಳಲ್ಲಿ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಬೇಡಿ.

ಒಂದು ವೇಳೆ ಅಪ್ಪಿತಪ್ಪಿ ನೀವು ಈ ಎರಡು ತಪ್ಪು ಮಾಡಿದ್ರೆ ಹಣ ಕಳೆದುಕೊಳ್ಳೋದು ಗ್ಯಾರಂಟಿ. ಯುಪಿಐ ಅಡಿಯಲ್ಲಿ ವರ್ತಕರಿಗೆ ಗ್ರಾಹಕರ ಖಾತೆಯಿಂದ ಹಣ ಪಡೆಯಲು ಕಲ್ಪಿಸಿರೋ ವ್ಯವಸ್ಥೆಯನ್ನು ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಒಟಿಪಿ ಹಾಗೂ ಕ್ಯುಆರ್‌ ಕೋಡ್‌ ಬಗ್ಗೆ ಎಚ್ಚರವಿರಲಿ.

ಅಪರಿಚಿತ ಲಿಂಕ್‌ಗಳನ್ನು ತೆರೆಯಬೇಡಿ

ನಿಮಗೆ ಅಪರಿಚಿತ ವ್ಯಕ್ತಿ ಅಥವಾ ಸಂಸ್ಥೆ ಹೆಸರಿನಲ್ಲಿ ಮೇಲ್‌ ಬರಬಹುದು. ಯಾವುದೇ ಕಾರಣಕ್ಕೂ ಆ ಮೇಲ್‌ನಲ್ಲಿರೋ ಲಿಂಕ್‌ ಮೇಲೆ ಕ್ಲಿಕ್‌ ಮಾಡಬೇಡಿ. ಇಂಥ ಲಿಂಕ್‌ಗಳ ಮೂಲಕ ನಿಮ್ಮ ವೈಯಕ್ತಿಕ ಹಾಗೂ ಬ್ಯಾಂಕ್‌ ಖಾತೆ ಮಾಹಿತಿಗಳನ್ನು ಕದಿಯಲು ವಂಚಕರು ಪ್ರಯತ್ನಿಸುತ್ತಾರೆ. 

ಎಲ್ಲೂ ಕಾರ್ಡ್‌ ಮಾಹಿತಿ ಉಳಿಸ್ಬೇಡಿ

ನಮ್ಮಲ್ಲಿ ಬಹುತೇಕರು ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿಯನ್ನು ಅನೇಕ ಆನ್‌ಲೈನ್‌ ತಾಣಗಳು ಹಾಗೂ ಆಪ್‌ಗಳಲ್ಲಿ ಸೇವ್‌ ಮಾಡಿಟ್ಟಿರುತ್ತಾರೆ. ಇದು ತಪ್ಪು. ಯಾವುದೇ ಕಾರಣಕ್ಕೂ ಆನ್‌ಲೈನ್‌ ವ್ಯವಹಾರ ನಡೆಸುವಾಗ ನಿಮ್ಮ ಬ್ರೌಸರ್‌ನಲ್ಲಿ ಆಟೋ ಫಿಲ್‌ ಅಥವಾ ಸೇವ್‌ ಆಯ್ಕೆ ಆಪ್‌ ಆಗಿರುವಂತೆ ನೋಡಿಕೊಳ್ಳಿ.

ಹೀಗೆ ಮಾಡೋದ್ರಿಂದ ಆನ್‌ಲೈನ್‌ ವ್ಯವಹಾರದ ಸಮಯದಲ್ಲಿ ನಿಮಗೆ ಕಿರಿಕಿರಿ ಅನಿಸಿದ್ರೂ, ಸುರಕ್ಷತೆ ಒದಗಿಸುತ್ತದೆ. ಅಲ್ಲದೆ, ನಿಮ್ಮ ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ ಬಳಸಿ ಬೇರೆಯವರು ನಿಮ್ಮ ಖಾತೆಯಿಂದ ಹಣ ಎಗರಿಸೋ ಭಯವೂ ಇರೋದಿಲ್ಲ.

ಮಿತವ್ಯಯವೇ ಹಿತ: ವಿದ್ಯುತ್‌ ಬಿಲ್‌ ತಗ್ಗಿಸಲು ಏನ್‌ ಮಾಡ್ಬಹುದು?

ಸಿಮ್‌ ರಕ್ಷಿಸಿಕೊಳ್ಳಿ

ಇಂದು ಬ್ಯಾಂಕಿಂಗ್‌ ವ್ಯವಸ್ಥೆ ನಮ್ಮ ಬೆರಳ ತುದಿಯಲ್ಲೇ ಲಭ್ಯವಿದೆ. ಇದೆಲ್ಲವೂ ಸಾಧ್ಯವಾಗಿದ್ದು ನಮ್ಮ ಕೈಯಲ್ಲಿರೋ ಮೊಬೈಲ್‌ ಎಂಬ ಪುಟ್ಟ ಸಾಧನದಿಂದ. ಹೀಗಾಗಿ ನಿಮ್ಮ ಮೊಬೈಲ್‌ ಜೊತೆ ಸಿಮ್‌ ಬಗ್ಗೆ ಕೂಡ ಎಚ್ಚರ ವಹಿಸಿ. ಸಿಮ್‌ ತದ್ರೂಪಿ ಸೃಷ್ಟಿಸಲು 20-30 ನಿಮಿಷಗಳು ಸಾಕು. ಒಂದು ವೇಳೆ ನೀವು ನಿಮ್ಮ ಸಿಮ್‌ ಬಳಸದೆ ಹಾಗೇ ಬಿಟ್ಟಿದ್ರೆ ವಂಚಕರು ಅದೇ ಸಂಖ್ಯೆಯ ನಕಲಿ ಸಿಮ್‌ ಸೃಷ್ಟಿಸೋ ಸಾಧ್ಯತೆಯಿದೆ. ಹೀಗಾಗಿ ನಿಮ್ಮ ಬಳಿ ಎರಡು ಸಿಮ್‌ ಇದ್ರೆ ಅದ್ರಲ್ಲೂ ಬ್ಯಾಂಕ್‌ಗೆ ನೀಡಿರೋ ಸಂಖ್ಯೆಯನ್ನು ಯಾವುದೇ ಕಾರಣಕ್ಕೂ ಬಳಸದೆ ಇರಬೇಡಿ. ಹಾಗೆಯೇ ಮೊಬೈಲ್‌ ಕಳೆದುಕೊಂಡ್ರೆ ಅಥವಾ ಕಳವಾದ್ರೆ ತಕ್ಷಣ ಸಿಮ್‌ ಬ್ಲಾಕ್‌ ಮಾಡಿಸಿ.

ಸಾಧನಗಳನ್ನು ಸಂರಕ್ಷಿಸಿ

ಮೊಬೈಲ್‌ ಅಥವಾ ಲ್ಯಾಪ್‌ಟ್ಯಾಪ್‌ನಂತಹ ಸಾಧನಗಳನ್ನು ನಿಮ್ಮ ಅನುಪಸ್ಥಿತಿಯಲ್ಲಿ ಬೇರೆಯವರು ದುರ್ಬಳಕೆ ಮಾಡಿಕೊಳ್ಳಬಹುದು. ಉದಾಹರಣೆಗೆ ನೀವು ಮೊಬೈಲ್‌ ದುರಸ್ತಿಗೆ ಕೊಟ್ಟಾಗಲೂ ನಿಮ್ಮ ಬ್ಯಾಂಕ್‌ ಮಾಹಿತಿಗಳು ಸೋರಿಕೆಯಾಗಬಹುದು. ಅಷ್ಟೇ ಅಲ್ಲ, ಕೆಲವೊಮ್ಮೆ ಆಪ್‌ಗಳು ಅಥವಾ ಪೈರಸಿ ಸಿನಿಮಾಗಳನ್ನು ಡೌನ್‌ಲೋಡ್‌ ಮಾಡೋದ್ರಿಂದ ಕೂಡ ಪ್ರಮುಖ ಮಾಹಿತಿಗಳು ನಿಮ್ಮ ಸಾಧನಗಳಿಂದ ಸೋರಿಕೆಯಾಗುತ್ತವೆ. ನೀವು ಬಳಸೋ ಸಾಧನಗಳಲ್ಲಿ ಆಂಟಿ ವೈರಸ್‌ ಸಾಫ್ಟ್‌ವೇರ್‌ ಅಳವಡಿಸಲು ಮರೆಯಬೇಡಿ.

ಇಳಿಸಂಜೇಲಿ ಹೆತ್ತವರ ನೆಮ್ಮದಿ ಜೀವನಕ್ಕೆ ಮಕ್ಕಳೇನು ಮಾಡ್ಬಹುದು?

ಹೊಸ ವ್ಯವಸ್ಥೆಗಳನ್ನು ಬಳಸಿಕೊಳ್ಳಿ

ಬ್ಯಾಂಕ್‌ ಗ್ರಾಹಕರ ಸಂರಕ್ಷಣೆಗೆ ಆರ್‌ಬಿಐ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಇದರಲ್ಲಿ ʼಪಾಸಿಟಿವ್‌ ಪೇ ಸಿಸ್ಟ್ಂʼ ಕೂಡ ಒಂದು. ಈ ವ್ಯವಸ್ಥೆಯಡಿಯಲ್ಲಿ 50 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತದ ಚೆಕ್‌ ಪಾಸ್‌ ಮಾಡೋ ಮುನ್ನ ನಿಮ್ಮ ಬಳಿ ಕ್ರಾಸ್‌ ಚೆಕ್‌ ಮಾಡಿಕೊಳ್ಳುವಂತೆ ಬ್ಯಾಂಕ್‌ ಸಿಬ್ಬಂದಿ ಬಳಿ ಮನವಿ ಮಾಡಿ.ಇದ್ರಿಂದ ಚೆಕ್‌ ದುರ್ಬಳಕೆ ತಡೆಯಬಹುದು. ಹಾಗೆಯೇ ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ಗಳ ವ್ಯವಹಾರಕ್ಕೆ ಕನಿಷ್ಠ ಮಿತಿಯನ್ನು ನೀವೇ ನಿಗದಿಪಡಿಸಲು ಆಯ್ಕೆಗಳಿವೆ. ಅದನ್ನು ಕೂಡ ಬಳಸಿಕೊಳ್ಳಬಹುದು.

ಇತರ ಮಾಹಿತಿಗಳ ಬಗ್ಗೆಯೂ ನಿಗಾ ಇರಲಿ

ವಂಚಕರು ಬರೀ ಆರ್ಥಿಕ ಮಾಹಿತಿಗಳನ್ನಷ್ಟೇ ಕದಿಯೋದಿಲ್ಲ, ಬದಲಿಗೆ ತೀರಾ ಖಾಸಗಿ ವಿಷಯಗಳನ್ನು ಕೂಡ ಕದ್ದು, ದುರ್ಬಳಕೆ ಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ನಕಲಿ ಫೇಸ್‌ಬುಕ್‌ ಖಾತೆಗಳ ಮೂಲಕ ಹಣ ಕೀಳೋ ದಂಧೆ ಹೆಚ್ಚಿದೆ. ಅಂದ್ರೆ ನಿಮ್ಮ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ನಿಮ್ಮ ಆತ್ಮೀಯರ ಬಳಿ ಸಾಲ ಕೇಳುತ್ತಾರೆ.

ಇದೇ ರೀತಿ ನಿಮ್ಮ ವಿವರಗಳನ್ನು ದಾಖಲಿಸಿ ನಿಮ್ಮ ಹೆಸರಿನಲ್ಲೇ ಬ್ಯಾಂಕ್‌ ಅಥವಾ ಫೈನಾನ್ಸ್‌ಗಳಿಂದ ಸಾಲ ಪಡೆಯೋ ದಂಧೆಯೂ ಇದೆ. ಹೀಗಾಗಿ ಆಧಾರ್‌ ಕಾರ್ಡ್‌ ಸಂಖ್ಯೆ, ಜನ್ಮದಿನಾಂಕ ಮುಂತಾದ ಮಾಹಿತಿಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.

click me!