ಮೈಕ್ರೋಸಾಫ್ಟ್ ಭಾರತೀಕರಣದ ಹಿಂದಿನ ‘ಸತ್ಯಾ’
ಕಂಪನಿ ಜಾಗತಿಕರಣಗೊಳಿಸಿದ ಸತ್ಯಾ ನಡೆಲ್ಲಾ
ಮೈಕ್ರೋಸಾಫ್ಟ್ ಮೌಲ್ಯ ಹೆಚ್ಚಿಸಿದ ದಿಗ್ಗಜ
ಜಗತ್ತಿಗೆ ಸಾಫ್ಟವೇರ್ ತಂತ್ರಜ್ಞಾನ ಪರಿಚಯ
ನವದೆಹಲಿ(ಜು.21): 2014ರಲ್ಲಿ ಸ್ಟೀವ್ ಬಾಲ್ಮೇರ್ ಅವರಿಂದ ತೆರವಾದ ಮೈಕ್ರೋಸಾಫ್ಟ್ ಸಿಇಒ ಸ್ಥಾನಕ್ಕೆ ಆಯ್ಕೆಯಾದ ಸತ್ಯಾ ನಡೆಲ್ಲಾ, ಜವಾಬ್ದಾರಿವಹಿಸಿಕೊಂಡ ದಿನದಿಂದ ಕಂಪನಿಯಲ್ಲಿ ಅನೇಕ ಬದಲಾವಣೆಗೆ ಮುನ್ನುಡಿ ಬರೆದವರು.
ಪ್ರಮುಖವಾಗಿ ವಿಶ್ವದ ಅತ್ಯಂತ ಕೆಟ್ಟ ಸಿಇಒ ಎಂದು 2012 ರ ಫೋಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಸ್ಟೀವ್ ಬಾಲ್ಮೇರ್, ಮೈಕ್ರೋಸಾಫ್ಟ್ ಕಂಪನಿಯ ಹೆಸರು ಪಾತಾಳಕ್ಕೆ ಕುಸಿಯಲು ಕಾರಣರಾಗಿದ್ದರು. ಆದರೆ ಸತ್ಯಾ ನಡೆಲ್ಲಾ ಕಂಪನಿಯ ಮೌಲ್ಯ ಹೆಚ್ಚಿಸುವಲ್ಲಿ ಅವಿರತವಾಗಿ ಶ್ರಮಿಸಿದವರು.
ಅದರಲ್ಲೂ ಮೈಕ್ರೋಸಾಫ್ಟ್ ಕಂಪನಿಯನ್ನು ಭಾರತೀಕರಣಗೊಳಿಸಿದ ಶ್ರೇಯಸ್ಸು ಸತ್ಯಾ ನಡೆಲ್ಲಾ ಅವರಿಗೆ ಸಲ್ಲುತ್ತದೆ. ಬಾಲ್ಮೇರ್ ಅವಧಿಯಲ್ಲಿ ಉದ್ಯೋಗಿಗಳಿಗೆ ಉಸಿರಾಡಲೂ ಕಷ್ಟ ಎಂಬಂತಹ ಪರಿಸ್ಥಿತಿ ಇತ್ತು. ಆದರೆ ಸತ್ಯಾ ಸಹೋದ್ಯೋಗಿಗಳ ವಿಶ್ವಾಸ ಗಳಿಸುವಲ್ಲಿ ಸಫಲವಾದರು. ಸಹೋದ್ಯೋಗಿಗಳ ಕಷ್ಟ ಕಾರ್ಪಣ್ಯಗಳನ್ನು ಅರಿತು ಅವುಗಳಿಗೆ ಸೂಕ್ತ ಪರಿಹಾರ ಒದಗಿಸಿದ ನಡೆಲ್ಲಾ ಕಾರ್ಯವೈಖರಿ ಜನಮನ್ನಣೆ ಗಳಿಸಿತು.
ಜಗತ್ತು ಎಂದರೆ ಕೇವಲ ಬಿಳಿ ಚರ್ಮದ ಜನರಿರುವ ಪ್ರದೇಶ ಎಂದು ತಿಳಿದಿದ್ದ ಕಂಪನಿಗೆ ಅದರಾಚೆಗಿನ ಕಂದು ಬಣ್ಣದ ಜನರ ಜಗತ್ತನ್ನು ಪರಿಚಯಿಸಿದ್ದು ಸತ್ಯಾ ನಡೆಲ್ಲಾ ಅವರೇ. ತಮ್ಮ ಸಾಫ್ಟವೇರ್ ತಂತ್ರಜ್ಞಾನದ ಉಪಯುಕ್ತತೆ ಇಡೀ ಜಗತ್ತಿಗೆ ಸಿಗಲಿ ಎಂಬ ಆಶಯದಿಂದ ಕಂಪನಿಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ ಕೀರ್ತಿ ಕೂಡ ಅವರಿಗೆ ಸಲ್ಲಬೇಕು.
ಅಮೆರಿಕ, ಯೂರೋಪ್ ಹೊರತುಪಡಿಸಿ ಏಷ್ಯಾ ಮತ್ತು ತೃತೀಯ ಜಗತ್ತಿಗೂ ಮೈಕ್ರೋಸಾಫ್ಟ್ ತಂತ್ರಜ್ಞಾನವನ್ನು ಕೊಂಡೊಯ್ದ ಸತ್ಯಾ ನಡೆಲ್ಲಾ, ಈ ಮೂಲಕ ಕಂಪನಿಯ ಉನ್ನತಿಗೆ ಕಾರಣೀಭೂತರಾದರು.
ಸತ್ಯಾ ನಡೆಲ್ಲಾ ಅವರ ಅವಿರತ ಪರಿಶ್ರಮದ ಫಲವಾಗಿ ಮೈಕ್ರೋಸಾಫ್ಟ್ ಕಂಪನಿ 2018 ರ ಹಣಕಾಸು ಅವಧಿಯಲ್ಲಿ ಸುಮಾರು 100 ಬಿಲಿಯನ್ ಅಮೆರಿಕನ್ ಡಾಲರ್ ಲಾಭ ಗಳಿಸಿದೆ. ಇಷ್ಟೇ ಅಲ್ಲದೇ ಕಂಪನಿಯ ಷೇರುದಾರರಿಗೆ ಹೆಚ್ಚಿನ ಲಾಭಾಂಶ ಸಿಗುವಂತೆ ಮಾಡುವಲ್ಲಿ ನಡೆಲ್ಲಾ ಯಶಸ್ವಿಯಾಗಿದ್ದಾರೆ.