
ವಾಷಿಂಗ್ಟನ್(ಜು.21): ಆರ್ಥಿಕವಾಗಿ ಅಮೆರಿಕವನ್ನು ಕಟ್ಟಿಹಾಕಲು ಚೀನಾ ಜಾಗತಿಕ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಈ ಕುರಿತಂತೆ ಎಚ್ಚರಿಕೆಯಿಂದ ಇರುವಂತೆ ಸಿಐಎ ಟ್ರಂಪ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಅಮೆರಿಕದೊಂದಿಗೆ ಶೀತಲ ಸಮರ ನಡೆಸಲು ಚೀನಾ ಸಜ್ಜಾಗಿದೆ ಎಂದು ಸಿಐಎ ನೇರ ಆರೋಪ ಮಾಡಿದೆ.
ಯುಎಸ್-ಏಷ್ಯಾ ಸಂಬಂಧಗಳ ಕುರಿತಂತೆ ನಡೆದ ಸಭೆಯಲ್ಲಿ ಸಿಐಎ ತಜ್ಞರು ಈ ಅನುಮಾನ ವ್ಯಕ್ತಪಡಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಹವಣಿಸುತ್ತಿರುವ ಚೀನಾ, ಅಮೆರಿಕದ ವಿರುದ್ಧ ಟ್ರೇಡ್ ವಾರ್ ಆರಂಭಿಸಿದೆ ಎಂದು ಸಿಐಎ ಅಭಿಪ್ರಾಯಪಟ್ಟಿದೆ.
ಅಮೆರಿಕದ ವಾಣಿಜ್ಯ ರಹಸ್ಯಗಳನ್ನು ತಿಳಿದುಕೊಳ್ಳುವ ಮೂಲಕ, ವಾಣಿಜ್ಯ ಮತ್ತು ಆರ್ಥಿಕ ಆದಾಯದ ಮೂಲಕ್ಕೆ ಕೊಡಲಿಪೆಟ್ಟು ನೀಡಲು ಚೀನಾ ಹವಣಿಸುತ್ತಿದೆ ಎಂಬುದು ಸಿಐಎ ತಜ್ಞರ ಅಂಬೋಣ.
ಈ ಕುರಿತು ಮಾತನಾಡಿರುವ ಸಿಐಎ ಉಪ ನಿರ್ದೇಶಕ ಮೈಕೆಲ್ ಕೊಲ್ಲಿನ್ಸ್, ಬೀಜಿಂಗ್ ಪರೋಕ್ಷವಾಗಿ ನಮ್ಮ ವಾಣಿಜ್ಯ ಆದಾಯದ ಮೂಲಗಳ ಮೇಲೆ ಕಣ್ಣಿಟ್ಟಿದೆ. ಪ್ರಮುಖವಾಗಿ ಚೀನಾ ಈಗಾಗಲೇ ರಷ್ಯಾದೊಂದಿಗಿನ ತನ್ನ ವಾಣಿಜ್ಯ ವಹಿವಾಟನ್ನು ದ್ವಿಗುಣಗೊಳಿಸಿಕೊಂಡಿದ್ದು, ಅಮೆರಿಕದ ವಾಣಿಜ್ಯ ರಹಸ್ಯಗಳನ್ನು ತಿಳಿದುಕೊಳ್ಳಲು ಚೀನಾ ಪ್ರಯತ್ನ ನಡೆಸಿದೆ ಎಂದು ಹೇಳಿದರು.
ಇದೇ ವೇಳೆ ಚೀನಾ ದೇಶ ತನ್ನ ಸೇನೆಯನ್ನೂ ಅಧುನೀಕರಣಗೊಳಿಸುತ್ತಿದ್ದು, ದಕ್ಷಿಣ ಚೀನಾ ಸಮುದ್ರದಲ್ಲಿ ಅನಧಿಕೃತವಾಗಿ ದ್ವೀಪಗಳನ್ನು ಸೃಷ್ಟಿ ಮಾಡಿದೆ ಎಂದು ಮೈಕೆಲ್ ಕೊಲ್ಲಿನ್ಸ್ ಆತಂಕ ವ್ಯಕ್ತಪಡಿಸಿದ್ದಾರೆ. ಚೀನಾ ಆಕ್ರಮಣಕಾರಿ ಮನೋಭಾವ ತೋರುತ್ತಿದ್ದು, ಅಮೆರಿಕಕ್ಕೆ ಸೆಡ್ಡುಹೊಡೆದು ನಿಂತಿದೆ ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ದಳದ ನಿರ್ದೇಶಕ ಡ್ಯಾನ್ ಕೋಟ್ಸ್ ಅಭಿಪ್ರಾಯಪಟ್ಟಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.