ಆನ್ ಲೈನ್ ನಲ್ಲಿ ಹಾಳಾದ ಹಾಲು ಹಿಂದಿರುಗಿಸಲು ಹೋಗಿ 77,000ರೂ. ಕಳೆದುಕೊಂಡ ಬೆಂಗಳೂರಿನ ಮಹಿಳೆ

By Suvarna NewsFirst Published Mar 25, 2024, 4:28 PM IST
Highlights

ಬೆಂಗಳೂರು ಮೂಲದ ವಯಸ್ಸಾದ ಮಹಿಳೆಯೊಬ್ಬರು ಹಾಳಾದ ಹಾಲನ್ನು ಆನ್ ಲೈನ್ ನಲ್ಲಿ ಹಿಂದಿರುಗಿಸಲು ಹೋಗಿ 77,000ರೂ. ಕಳೆದುಕೊಂಡಿದ್ದಾರೆ. 
 

ಬೆಂಗಳೂರು (ಮಾ.25): ಆನ್ ಲೈನ್ ಪ್ಲಾಟ್ ಫಾರ್ಮ್ ವೊಂದರಲ್ಲಿ ಖರೀದಿಸಿದ ಹಾಲು, ಕೆಟ್ಟು ಹೋಗಿರೋದನ್ನು ಗಮನಿಸಿದ ಮಹಿಳೆ, ಅದನ್ನು ಮರಳಿ ಹಿಂದಿರುಗಿಸಲು ಪ್ರಯತ್ನಿಸಿದ್ದು, ಈ ವೇಳೆ  77,000 ರೂ. ಕಳೆದುಕೊಂಡಿದ್ದಾರೆ. ಆನ್ ಲೈನ್ ವಂಚನೆ ಯಾವ ರೂಪದಲ್ಲಿ ಬೇಕಾದರೂ ನಡೆಯಬಹುದು ಎಂಬುದಕ್ಕೆ ಇದು ಅತ್ಯುತ್ತಮ ನಿದರ್ಶನ. ಬೆಂಗಳೂರು ಮೂಲದ 65 ವರ್ಷ ವಯಸ್ಸಿನ ಮಹಿಳೆ ಖಾತೆಯಲ್ಲಿದ್ದ ಹಣವನ್ನು ಸೈಬರ್ ವಂಚಕರು ಎಗರಿಸಿದ್ದಾರೆ. ಆನ್ ಲೈನ್ ನಲ್ಲಿ ಖರೀದಿಸಿದ ಹಾಲನ್ನು ಹಿಂದಿರುಗಿಸಲು ಪ್ರಯತ್ನಿಸಿದ ಮಹಿಳೆ ಸೈಬರ್ ಖದೀಮರ ಬಲೆಗೆ ಬಿದ್ದಿದ್ದು, ಅವರ ನಿರ್ದೇಶನದಂತೆ ಯುಪಿಐ ಪಿನ್ ಸೇರಿದಂತೆ ಇತರ ಎಲ್ಲ ಮಾಹಿತಿಗಳನ್ನು ದಾಖಲಿಸಿದ್ದಾರೆ. ತಕ್ಷಣವೇ ಅವರ ಬ್ಯಾಂಕ್ ಖಾತೆಯಿಂದ 77,000ರೂ. ಕಡಿತವಾಗಿದೆ. 

ಬೆಂಗಳೂರಿನ ಕಸ್ತೂರಿನಗರದ ನಿವಾಸಿಯಾಗಿರುವ ಮಹಿಳೆ ಯಾವಾಗಲೂ ಆನ್ ಲೈನ್ ಪ್ಲಾಟ್ ಫಾರ್ಮ್ ವೊಂದರಮೂಲಕವೇ ಹಾಲನ್ನು ಖರೀದಿಸುತ್ತಿದ್ದರು. ಅದೇರೀತಿ ಮಾ.18ರಂದು ಕೂಡ ಅದೇ ಪ್ಲಾಟ್ ಫಾರ್ಮ್ ನಿಂದ ಹಾಲು ಖರೀದಿಸಿದ್ದಾರೆ. ಆದರೆ, ಹಾಲು ಕೆಟ್ಟಿತ್ತು. ಹೀಗಾಗಿ ಅದನ್ನು ಹಿಂದಿರುಗಿಸಲು ನಿರ್ಧರಿಸಿದರು. ಇಂಟರ್ನೆಟ್ ನಲ್ಲಿ ಆ ಪ್ಲಾಟ್ ಫಾರ್ಮ್ ಕಸ್ಟಮರ್ ಕೇರ್ ಸಂಖ್ಯೆ ಹುಡುಕಿದ್ದಾರೆ. ಅದರಲ್ಲಿರುವ ಒಂದು ಸಂಖ್ಯೆಗೆ ಕರೆ ಮಾಡಿದ್ದರೆ, ಆಗ ಅವರ ಕರೆ ಸ್ವೀಕರಿಸಿದ ವ್ಯಕ್ತಿ ತಾನು ಆ ಆನ್ ಲೈನ್ ಪ್ಲಾಟ್ ಫಾರ್ಮನ ಎಕ್ಸಿಕ್ಯುಟಿವ್ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ, ಹಾಲನ್ನು ಹಿಂದಿರುಗಿಸೋದು ಬೇಡ. ಹಣವನ್ನು ಆಕೆಯ ಖಾತೆಗೆ ಹಿಂದಿರುಗಿಸುವ ಭರವಸೆ ನೀಡಿದ್ದಾನೆ. ಆದರೆ, ಇದಕ್ಕಾಗಿ ಒಂದಿಷ್ಟು ಪ್ರಕ್ರಿಯೆಗಳನ್ನು ಪೂರೈಸುವಂತೆ ತಿಳಿಸಿದ್ದಾನೆ.

ಪಾರ್ಟ್ ಟೈಮ್ ಉದ್ಯೋಗ ನೆಪದಲ್ಲಿ ವಂಚಿಸಿ 15 ಕೋಟಿ ರೂ ಚೀನಾಗೆ ಕಳುಹಿಸಿದ ನಾಲ್ವರು ಅರೆಸ್ಟ್!

ಆ ಬಳಿಕ ಆ ಮಹಿಳೆ ವಾಟ್ಸಾಪ್ ಸಂದೇಶ ಬಂದಿದೆ. ಅದರಲ್ಲಿ ಯುಪಿಐ ಐಡಿ ಸಂಖ್ಯೆ 081958 ಅಂದಿತ್ತು. ವರದಿ ಪ್ರಕಾರ ಆ ಮಹಿಳೆ ನಿವೃತ್ತ ಸೇನಾಧಿಕಾರಿಯ ಪತ್ನಿಯಾಗಿದ್ದು, ಆ ವ್ಯಕ್ತಿ ಹೇಳಿದ ಎಲ್ಲ ಹಂತಗಳನ್ನು ಅನುಸರಿಸಿದ್ದಾರೆ. ಆ ವ್ಯಕ್ತಿ ಆಕೆಗೆ  ಡಿಜಿಟಲ್ ಪೇಮೆಂಟ್ ಆಪ್ ನಲ್ಲಿ (ಫೋನ್ ಪೇ) 'transfer money'ಆಯ್ಕೆ ಆರಿಸುವಂತೆ ಕೋರಿದ್ದಾರೆ. ಹಾಗೆಯೇ 'To Bank/UPI ID' ಮೇಲೆ ಕ್ಲಿಕ್ ಮಾಡುವಂತೆ ತಿಳಿಸಿದ್ದಾರೆ. ಮಹಿಳೆ ಆತ ಹೇಳಿದಂತೆ ಮಾಡಿದ್ದಾರೆ. ಮುಂದೇನಾಗುತ್ತದೆ ಎಂಬ ಮಾಹಿತಿ ಆಕೆಗೆ ಇರಲಿಲ್ಲ. ಹೀಗಾಗಿ ಆತ ಹೇಳಿದಂತೆ ಮಾಡಿದರು. ವಾಟ್ಸಾಪ್ ನಲ್ಲಿ ಬಂದ ಸಂಖ್ಯೆಯನ್ನು ನಮೂದಿಸಿ ಯುಪಿಐ ಐಡಿ ಆಯ್ಕೆ ಮೇಲೆ ಕ್ಲಿಕ್ ಮಾಡಿದ್ದಾರೆ. ಆಕೆ ತನ್ನ ಮೊಬೈಲ್ ಸಂಖ್ಯೆಯ ಕೊನೆಯ ಐದು ಅಂಕೆಗಳನ್ನು ದಾಖಲಿಸಿದ ಬಳಿಕ 'pay'ಮೇಲೆ ಕ್ಲಿಕ್ ಮಾಡಿ ಆ ಬಳಿಕ ಆಕೆ ಯುಪಿಐ ಪಿನ್ ದಾಖಲಿಸುವಂತೆ ತಿಳಿಸಿದ್ದಾನೆ. ಹೀಗೆ ಮಾಡಿದರೆ ಹಣ ರೀಫಂಡ್ ಆಗೋದಾಗಿ ಹೇಳಿದ್ದಾನೆ.

ಸುಲಭವಾಗಿ ವರ್ಕ್‌ ಫ್ರಂ ಹೋಂ ಮಾಡಿ ಹಣ ಗಳಿಸ್ಬೋದೆಂದು ನಂಬ್ಕೊಂಡು 14 ಲಕ್ಷ ಕಳ್ಕೊಂಡ ಭೂಪ!

ಯಾವಾಗ ಮಹಿಳೆ ತನ್ನ ಯುಪಿಐ ಪಿನ್ ನಮೂದಿಸಿದಳೋ, ಆಗ ಆಕೆ ಖಾತೆಯಿಂದ  77,000ರೂ. ಕಡಿತವಾಯಿತು. ಆಗಲೇ ಆಕೆಗೆ ತಾನು ಸೈಬರ್ ವಂಚಕರ ಬಲೆಗೆ ಬಿದ್ದಿದ್ದೇನೆ ಎಂಬ ಸತ್ಯದ ಅರಿವಾಗಿದ್ದು. ಆ ಬಳಿಕ ಆಕೆ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಆ ಬಳಿಕ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ಕುರಿತು ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು,' ಈ ಪ್ರಕರಣವನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ ಹಾಗೂ ವಂಚಕರ ಖಾತೆಯಿಂದ ಹಣ ವಿತ್ ಡ್ರಾ ಮಾಡಲು ಸಾಧ್ಯವಾಗದಂತೆ ಕ್ರಮ ಕೈಗೊಂಡಿರೋದಾಗಿ' ತಿಳಿಸಿದ್ದಾರೆ. 

click me!