ರೆಪೋದರ ಏರಿಕೆಯಿಂದ ಗೃಹಸಾಲ ಮತ್ತಷ್ಟು ದುಬಾರಿ;ಇಎಂಐ ಎಷ್ಟು ಹೆಚ್ಚಬಹುದು ?ಇಲ್ಲಿದೆ ಮಾಹಿತಿ

By Suvarna NewsFirst Published Aug 6, 2022, 1:42 PM IST
Highlights

ಬ್ಯಾಂಕುಗಳಿಂದ ಸಾಲ ಪಡೆದವರಿಗೆ ಈ ವರ್ಷ ಬಡ್ಡಿದರ ಹೆಚ್ಚಳದ ಬಿಸಿ ಹೆಚ್ಚುತ್ತಲೇ ಸಾಗಿದೆ. ಆರ್ ಬಿಐ ಮೂರು ಬಾರಿ ರೆಪೋ ದರ ಹೆಚ್ಚಳ ಮಾಡಿದ ಪರಿಣಾಮ ಬ್ಯಾಂಕುಗಳಿಗೆ  ಕೂಡ ಬಡ್ಡಿದರ ಏರಿಕೆ ಮಾಡೋದು ಅನಿವಾರ್ಯವಾಗಿದೆ.ಇದು ಸಾಲ ಪಡೆದವರ ತಿಂಗಳ ಇಎಂಐ ಮೊತ್ತವನ್ನು ಹೆಚ್ಚಿಸಿದೆ. ಬೆಲೆಯೇರಿಕೆಯ ಜೊತೆಗೆ ಇಎಂಐ ಹೆಚ್ಚಳ ಜನಸಾಮಾನ್ಯರನ್ನು ಮತ್ತಷ್ಟು ಕಂಗೆಡಿಸಿರೋದು ಮಾತ್ರ ಸುಳ್ಳಲ್ಲ.
 

ನವದೆಹಲಿ (ಆ.6): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಶುಕ್ರವಾರ (ಆ.5) ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದೆ. ಹೀಗಾಗಿ ರೆಪೋ ದರ ಶೇ. 5.4ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್ ಬಿಐ ಈ ವರ್ಷದ ಪ್ರಾರಂಭದಿಂದ ಈ ತನಕ ಮೂರು ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದೆ.  ಮೇನಲ್ಲಿ ನಡೆದ ತುರ್ತು ಎಂಪಿಸಿ ಸಭೆಯಲ್ಲಿ ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ಸ್  ಹೆಚ್ಚಳ ಮಾಡಿದ್ರೆ, ಜೂನ್ ನಲ್ಲಿ 50 ಬೇಸಿಸ್ ಪಾಯಿಂಟ್ಸ್ ಏರಿಕೆ ಮಾಡಲಾಗಿತ್ತು. ಚಿಲ್ಲರೆ ಹಣದುಬ್ಬರ ಮೇಗೆ ಹೋಲಿಸಿದ್ರೆ ಜೂನ್ ನಲ್ಲಿ ಹಣದುಬ್ಬರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ದಾಖಲಾಗಿದ್ರೂ ಆರ್ ಬಿಐ ಸಹನ ಮಿತಿಗಿಂತ ಹೆಚ್ಚಿದೆ. ಮೇನಲ್ಲಿ ಶೇ.7.04ರಷ್ಟಿದ್ದ ಚಿಲ್ಲರೆ ಹಣದುಬ್ಬರ, ಜೂನ್ ನಲ್ಲಿ ಶೇ. 7.01ಕ್ಕೆ ಇಳಿಕೆಯಾಗಿತ್ತು. ಇನ್ನು ರೆಪೋ ದರ ಏರಿಕೆಯಿಂದ ಗೃಹ ಸಾಲ ಸೇರಿದಂತೆ ಬ್ಯಾಂಕಿನಿಂದ ವಿವಿಧ ಸಾಲಗಳನ್ನು ಪಡೆದವರ ಮೇಲಿನ ಹೊರೆ ಇನ್ನಷ್ಟು ಹೆಚ್ಚಿದೆ. ರೆಪೋ ದರ ಏರಿಕೆಯಿಂದ ಬ್ಯಾಂಕುಗಳು ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡಲಿವೆ, ಇದ್ರಿಂದ ಇಎಂಐ ಮೊತ್ತ ಕೂಡ ಏರಿಕೆಯಾಗಲಿದೆ. ಈಗಾಗಲೇ ಎರಡು ಬಾರಿ ಬಡ್ಡಿದರ ಏರಿಕೆ ಹಾಗೂ ಇಎಂಐ ಹೆಚ್ಚಳದ ಬಿಸಿ ಸಾಲಗಾರರ ಜೇಬು ಸುಡುತ್ತಿದೆ. ಈಗ ಮತ್ತೊಮ್ಮೆ ಇಎಂಐ ಹೆಚ್ಚಳವಾಗಲಿದೆ.

ಬ್ಯಾಂಕುಗಳು ಏಕೆ ಬಡ್ಡಿದರ ಹೆಚ್ಚಿಸುತ್ತವೆ?
ರೆಪೋ ದರವೆಂದ್ರೆ ವಾಣಿಜ್ಯ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆಯುವ ಸಾಲದ ಮೇಲೆ ವಿಧಿಸುವ ಬಡ್ಡಿದರ. ಹೀಗಾಗಿ ಆರ್ ಬಿಐ ರೆಪೋ ದರ ಹೆಚ್ಚಳ ಮಾಡಿದಾಗ ಬ್ಯಾಂಕುಗಳು ಪಡೆಯುವ ಸಾಲದ ಮೇಲಿನ ಬಡ್ಡಿ ಕೂಡ ಏರಿಕೆಯಾಗುತ್ತದೆ. ಬ್ಯಾಂಕುಗಳು ತಮ್ಮ ಮೇಲೆ ಹೆಚ್ಚಿದ  ಹೊರೆಯನ್ನು ತಾವು ನೀಡುವ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ ವರ್ಗಾಯಿಸುತ್ತವೆ. ಪರಿಣಾಮ ಬ್ಯಾಂಕಿನಿಂದ ಗೃಹ (home) ಹಾಗೂ ವೈಯಕ್ತಿಕ ಸಾಲ (personal loan) ಪಡೆದವರ ಮಾಸಿಕ ಇಎಂಐ  (EMIs) ಮೊತ್ತ ಹೆಚ್ಚಳವಾಗುತ್ತದೆ. 

ರೆಪೋ ದರವನ್ನು ಮತ್ತೆ ಹೆಚ್ಚಿಸಿದ ಆರ್‌ಬಿಐ: ಹಣಕಾಸು ನೀತಿ ಸಮಿತಿ ನಿರ್ಧಾರ

ಗೃಹಸಾಲದ ಇಎಂಐ ಎಷ್ಟು ಹೆಚ್ಚಳವಾಗಬಹುದು?
ಏಪ್ರಿಲ್ ಗಿಂತ ಮುನ್ನ ಗೃಹ ಸಾಲ ಪಡೆದಿರೋರ ಬಡ್ಡಿದರ ಆರ್ ಬಿಐ ಆಗಸ್ಟ್ ತಿಂಗಳ ರೆಪೋದರ ಏರಿಕೆ ಬಳಿಕ ಈ ಹಿಂದಿನ ಶೇ.6.5 - 7ರಿಂದ ಸುಮಾರು ಶೇ.8ಕ್ಕೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಉದಾಹರಣೆಗೆ ನೀವು ಈಗಾಗಲೇ ಶೇ.7 ಬಡ್ಡಿದರದಲ್ಲಿ 20 ವರ್ಷಗಳ ಅವಧಿಗೆ  2022ರ ಏಪ್ರಿಲ್ ನಲ್ಲಿ 30ಲಕ್ಷ ರೂ. ಗೃಹ ಸಾಲ ಪಡೆದಿದ್ದರೆ, ನಿಮ್ಮ ಇಎಂಐ 23,259ರೂ.ನಿಂದ 25,845 ರೂ.ಗೆ ಹೆಚ್ಚಳವಾಗಲಿದೆ. ಅಂದರೆ ಒಂದರ ಹಿಂದೆ ಒಂದರಂತೆ  ಮೂರು ರೆಪೋದರ ಹೆಚ್ಚಳದ ಪರಿಣಾಮ ನಿಮ್ಮ ಬಡ್ಡಿದರ ಶೇ.7ರಿಂದ ಶೇ.8.4ಕ್ಕೆ ಏರಿಕೆಯಾಗಿದ್ರೆ ನಿಮ್ಮ ಇಎಂಐ ಮೊತ್ತದಲ್ಲಿ ಈಗ ತಿಳಿಸಿರುವಂತೆ 2,586ರೂ. ಹೆಚ್ಚಳವಾಗುತ್ತದೆ. 

ಮೂರು ವರ್ಷದಲ್ಲಿಆರ್ಥಿಕ ವಂಚನೆಗೆ ಶಿಕಾರಿಯಾದ ಭಾರತೀಯರು ಶೇ.42;ಹಣ ಹಿಂದೆ ಸಿಕ್ಕಿದ್ದು ಶೇ.17 ಮಂದಿಗೆ ಮಾತ್ರ

ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಪರಿಣಾಮ
ತಜ್ಞರ ಪ್ರಕಾರ ರೆಪೋದರ ಏರಿಕೆ ಭಾರತದ ರಿಯಲ್ ಎಸ್ಟೇಟ್ ಮಾರುಕಟ್ಟೆ ಮೇಲೆ ಮಧ್ಯಮ ಪ್ರಮಾಣದಲ್ಲಿ ಪರಿಣಾಮ ಬೀರಲಿದೆ. 50 ಬೇಸಿಸ್ ಪಾಯಿಂಟ್ ರೆಪೋದರ ಏರಿಕೆ ಗೃಹ ಸಾಲದ ಬಡ್ಡಿದರದ ಮೇಲೆ ದೊಡ್ಡ ಪ್ರಮಾಣದಲ್ಲೇ ಪರಿಣಾಮ ಬೀರಲಿದೆ. ಕೊರೋನಾ ಅವಧಿಯಲ್ಲಿ ಭಾರತದಲ್ಲಿ ಬಡ್ಡಿದರ ಕಡಿಮೆ ಪ್ರಮಾಣದಲ್ಲಿದ್ದ ಕಾರಣ ಗೃಹಸಾಲಕ್ಕೆ ಬೇಡಿಕೆ ಹೆಚ್ಚಿತ್ತು. ಇನ್ನು ಇತ್ತೀಚೆಗೆ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಬಳಕೆಯಾಗುವ ಸಿಮೆಂಟ್, ಉಕ್ಕು, ಕಾರ್ಮಿಕರು ಸೇರಿದಂತೆ ಪ್ರಾಥಮಿಕ ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿರೋದು ಕೂಡ ಆಸ್ತಿಗಳ ಬೆಲೆಯೇರಿಕೆಗೆ ಕಾರಣವಾಗಿದೆ. ಏರಿಕೆಯಾಗಿರುವ ಗೃಹಸಾಲದ ಬಡ್ಡಿದರ, ನಿರ್ಮಾಣ ವೆಚ್ಚದ ಏರಿಕೆ ಎರಡೂ ಸೇರಿ ಮನೆ, ಕಟ್ಟಡಗಳ ಮಾರಾಟದ ಮೇಲೆ ಮುಂದಿನ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯೂ ಇದೆ. 

click me!