ಅಮೆರಿಕದ ಶಾರ್ಟ್-ಸೆಲ್ಲಿಂಗ್ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ತನ್ನ ವ್ಯವಹಾರವನ್ನು ಮುಗಿಸಲಿದೆ. ಸಂಸ್ಥಾಪಕ ನಾಥನ್ ಆಂಡರ್ಸನ್ ಬುಧವಾರ ಈ ಘೋಷಣೆ ಮಾಡಿದರು. ಚರ್ಚೆ ಮತ್ತು ಚಿಂತನೆಯ ನಂತರ ಕಂಪನಿಯನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ನವದೆಹಲಿ (ಜ.16): ಅಮೆರಿಕದ ಶಾರ್ಟ್-ಸೆಲ್ಲಿಂಗ್ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್ ತನ್ನ ವ್ಯವಹಾರವನ್ನು ಮುಗಿಸಲಿದೆ. ಅರ್ಥಾತ್ ಕಂಪನಿಯ ಬಾಗಿಲು ಮುಚ್ಚಲಿದೆ. ಕಂಪನಿಯ ಸಂಸ್ಥಾಪಕ ನಾಥನ್ ಆಂಡರ್ಸನ್ ಬುಧವಾರ ತಡರಾತ್ರಿ ಇದನ್ನು ಘೋಷಿಸಿದರು. ಸಾಕಷ್ಟು ಚರ್ಚೆ ಮತ್ತು ಚಿಂತನೆಯ ನಂತರ ಕಂಪನಿಯನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ಹಾಗಿದ್ದರೂ, ಆಂಡರ್ಸನ್ ಕಂಪನಿಯನ್ನು ಮುಚ್ಚಲು ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ. ಹಿಂಡೆನ್‌ಬರ್ಗ್ ರಿಸರ್ಚ್ ಅನ್ನು 2017 ರಲ್ಲಿ ಪ್ರಾರಂಭಿಸಲಾಗಿತ್ತು. ಹಿಂಡೆನ್‌ಬರ್ಗ್ ರಿಸರ್ಚ್‌ನ ರಿಪೋರ್ಟ್‌ಗಳು ಭಾರತದ ಅದಾನಿ ಗ್ರೂಪ್ ಮತ್ತು ಇಕಾನ್ ಎಂಟರ್‌ಪ್ರೈಸಸ್ ಸೇರಿದಂತೆ ಹಲವಾರು ಕಂಪನಿಗಳಿಗೆ ಶತಕೋಟಿ ಡಾಲರ್‌ಗಳ ನಷ್ಟವನ್ನುಂಟುಮಾಡಿವೆ. ಆಗಸ್ಟ್ 2024 ರಲ್ಲಿ, ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅವರು ಅದಾನಿ ಗ್ರೂಪ್‌ಗೆ ಸಂಬಂಧಿಸಿದ ವಿದೇಶಿ ಕಂಪನಿಯಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಆರೋಪ ಮಾಡಿತ್ತು.
'ಕಳೆದ ವರ್ಷದ ಕೊನೆಯಿಂದ ನನ್ನ ಕುಟುಂಬ, ಸ್ನೇಹಿತರು ಮತ್ತು ನನ್ನ ತಂಡದೊಂದಿಗೆ ಹಂಚಿಕೊಂಡಂತೆ, ನಾನು ಹಿಂಡೆನ್‌ಬರ್ಗ್ ರಿಸರ್ಚ್‌ಅನ್ನು ವಿಸರ್ಜಿಸಲು ನಿರ್ಧರಿಸಿದ್ದೇನೆ. ನಾವು ಕೆಲಸ ಮಾಡುತ್ತಿದ್ದ ಆಲೋಚನೆಗಳು ಪೂರ್ಣಗೊಂಡ ತಕ್ಷಣ ಅದನ್ನು ಮುಚ್ಚುವುದು ಯೋಜನೆಯಾಗಿತ್ತು. ಇತ್ತೀಚಿನ ಪೊಂಜಿ ಕೇಸ್‌ಗಳ ಮಾಹಿತಿಯನ್ನು ನಿಯಂತ್ರಕರೊಂದಿಗೆ ಹಂಚಿಕೊಂಡ ಬಳಿಕ, ಇದು ನಮ್ಮ ಕೊನೆಯ ದಿನ' ಎಂದು ಕಂಪನಿಯ ಸಂಸ್ಥಾಪಕ ನಥನ್ ಆಂಡರ್ಸನ್ ಬರೆದುಕೊಂಡಿದ್ದಾರೆ.
ಆಗಸ್ಟ್ 2024 ರಲ್ಲಿ, ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ, ಅದಾನಿ ಗ್ರೂಪ್ ಮೂಲಕ ಹಣ ವರ್ಗಾವಣೆ ಹಗರಣದಲ್ಲಿ ಬಳಸಲಾದ ಕಡಲಾಚೆಯ ಸಂಸ್ಥೆಗಳಲ್ಲಿ ಸೆಬಿ ಮುಖ್ಯಸ್ಥೆ ಮಾಧಾಬಿ ಪುರಿ ಬುಚ್ ಪಾಲು ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದರು. ದಾಖಲೆಗಳನ್ನು ಉಲ್ಲೇಖಿಸಿ, ಗೌತಮ್ ಅದಾನಿಯ ಸಹೋದರ ವಿನೋದ್ ಅದಾನಿ ದೊಡ್ಡ ಪ್ರಮಾಣದ ಹಣವನ್ನು ಹೂಡಿಕೆ ಮಾಡಿದ್ದ ಕಡಲಾಚೆಯ ನಿಧಿಯಲ್ಲಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಪಾಲು ಹೊಂದಿದ್ದಾರೆ ಎಂದು ಹಿಂಡೆನ್‌ಬರ್ಗ್ ತಿಳಿಸಿತ್ತು. ವಿನೋದ್ ಅದಾನಿ ಗ್ರೂಪ್ ಕಂಪನಿಗಳ ಅಧ್ಯಕ್ಷರಾಗಿದ್ದಾರೆ.
ಕಂಪನಿಗೆ ಹಿಂಡೆನ್‌ಬರ್ಗ್ ಅನ್ನೋ ಹೆಸರು ಬಂದಿದ್ದು ಹೇಗೆ?: 1937 ರ ಮೇ 6 ರಂದು, ಬ್ರಿಟನ್‌ನ ಮ್ಯಾಂಚೆಸ್ಟರ್ ನಗರದಲ್ಲಿ ಹಾರುತ್ತಿರುವಾಗ ಹಿಂಡೆನ್‌ಬರ್ಗ್ ಎಂಬ ಜರ್ಮನ್ ಸ್ಪೇಸ್‌ಶಿಪ್ ಅಪ್ಪಳಿಸಿತು. ಈ ಅಪಘಾತದಲ್ಲಿ 35 ಜನರು ಸಾವನ್ನಪ್ಪಿದರು. ತನಿಖೆಯ ನಂತರ, ಈ ಘಟನೆಯು ಈ ವಿಮಾನದ ಹೈಡ್ರೋಜನ್ ಬಲೂನ್‌ಗಳಲ್ಲಿ ಉಂಟಾದ ಬೆಂಕಿಯಿಂದಾಗಿ ಸಂಭವಿಸಿದೆ ಎನ್ನಲಾಗಿತ್ತು. ಈ ಹಿಂದೆಯೂ ಸಹ, ಹೈಡ್ರೋಜನ್ ಬಲೂನ್‌ಗಳಲ್ಲಿ ಬೆಂಕಿಯಿಂದಾಗಿ ಅಪಘಾತಗಳು ಸಂಭವಿಸಿದ್ದವು. ಕಂಪನಿಯು ನಿಯಮಗಳನ್ನು ಪಾಲಿಸದೆ ಈ ವಿಮಾನದಲ್ಲಿ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಕೂರಿಸಿತ್ತು ಎಂದು ತನಿಖಾ ವರದಿಯು ಬಹಿರಂಗಪಡಿಸಿತ್ತು.
ಲಂಚ, ವಂಚನೆ ಆರೋಪ: ಅಮೆರಿಕ ಕೋರ್ಟ್ ಅರೆಸ್ಟ್ ವಾರೆಂಟ್ ಬೆನ್ನಲ್ಲೇ ಅದಾನಿಗೆ ಸೆಬಿ ಶಾಕ್!
ಹಿಂದಿನ ಘಟನೆಗಳಿಂದ ಪಾಠ ಕಲಿತಿದ್ದರೆ ಕಂಪನಿಯು ಈ ಅಪಘಾತವನ್ನು ತಪ್ಪಿಸಬಹುದಿತ್ತು ಎಂದು ನಾಥನ್ ಆಂಡರ್ಸನ್ ನಂಬಿದ್ದರು. 80 ವರ್ಷಗಳ ಹಿಂದೆ ನಡೆದ ಘಟನೆಯು ನಾಥನ್ ಆಂಡರ್ಸನ್ ಅವರ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರಿತ್ತು. ಅದಕ್ಕಾಗಿಯೇ ಅವರು 2017 ರಲ್ಲಿ ತಮ್ಮ ಕಂಪನಿಗೆ 'ಹಿಂಡೆನ್‌ಬರ್ಗ್' ಎಂದು ಹೆಸರಿಸಿದರು. ಇದಕ್ಕೆ ಹೆಸರಿಡುವ ಉದ್ದೇಶ ಒಂದೇ ಆಗಿತ್ತು. ಹಿಂಡೆನ್‌ಬರ್ಗ್ ಮಾದರಿಯಲ್ಲಿ ಲಾಭ ಗಳಿಸಲು ಷೇರು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಹಿರಂಗಪಡಿಸುವುದು, ಅವುಗಳ ಮೇಲೆ ನಿಗಾ ಇಡುವುದು. ಇದರಿಂದ ಷೇರು ಮಾರುಕಟ್ಟೆಯಲ್ಲಿನ ಹಗರಣಗಳಿಂದ ಉಂಟಾಗುವ ಯಾವುದೇ ಕುಸಿತವನ್ನು ತಡೆಯಬಹುದು ಎನ್ನುವುದು ಅವರ ಉದ್ದೇಶವಾಗಿತ್ತು.
5 ಸ್ವಿಸ್ ಬ್ಯಾಂಕ್‌ಗಳಲ್ಲಿದ್ದ 2575 ಕೋಟಿ ರೂ. ಅದಾನಿ ಹಣ ಜಪ್ತಿ
ಹಿಂಡೆನ್‌ಬರ್ಗ್ ರಿಸರ್ಚ್ ಸೆಪ್ಟೆಂಬರ್ 12 ರಂದು ಅದಾನಿ ಗ್ರೂಪ್ ವಿರುದ್ಧ ಹೊಸ ಆರೋಪಗಳನ್ನು ಮಾಡಿತ್ತು. ಅದಾನಿ ಗ್ರೂಪ್‌ಗೆ ಸಂಬಂಧಿಸಿದ 6 ಸ್ವಿಸ್ ಬ್ಯಾಂಕ್ ಖಾತೆಗಳಿಂದ ಸ್ವಿಸ್ ಅಧಿಕಾರಿಗಳು 310 ಮಿಲಿಯನ್ ಡಾಲರ್‌ಗಳಿಗೂ (ಸುಮಾರು 2602 ಕೋಟಿ ರೂ.) ಹೆಚ್ಚು ಹಣವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ಹೇಳಿತ್ತು.