20 ಸಾವಿರ ರೂ. ಗಡಿ ದಾಟಿದ ಬ್ಯಾಡಗಿ ಮೆಣಸು, ಅತಿವೃಷ್ಠಿಯಿಂದ ಇಳುವರಿ ಕುಸಿತ!

By Suvarna NewsFirst Published Dec 29, 2019, 7:33 AM IST
Highlights

ಬ್ಯಾಡಗಿ ಮೆಣಸು ಭಲೇ ಖಾರ!| ಕ್ವಿಂಟಲ್‌ಗೆ 20 ಸಾವಿರ ರು. ಗಡಿ ದಾಟಿದ ಬ್ಯಾಡಗಿ ಮೆಣಸಿನಕಾಯಿ| ಅತಿವೃಷ್ಠಿಯಿಂದಾಗಿ ಇಳುವರಿಯಲ್ಲಿ ಕುಸಿತ, ಈಗ ಭಾರಿ ಬೇಡಿಕೆ

ಅಶೋಕ ಸೊರಟೂರ

ಲಕ್ಷ್ಮೇಶ್ವರ[ಡಿ.29]: ಈರುಳ್ಳಿ ಬಳಿಕ, ಇದೀಗ ಬ್ಯಾಡಗಿ ಮೆಣಸಿನಕಾಯಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ನಾಲಿಗೆ ಜತೆಗೆ ಜೇಬನ್ನು ಚುರ್‌ ಎನಿಸುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1 ಕ್ವಿಂಟಲ್‌ಗೆ .6ರಿಂದ 10 ಸಾವಿರ ಇದ್ದ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಬೆಲೆ, ಈ ವರ್ಷ .20 ಸಾವಿರದ ಗಡಿ ದಾಟಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ .20ರಿಂದ 25 ಸಾವಿರಕ್ಕೆ ಮಾರಾಟವಾಗುತ್ತಿದೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ಬೆಳೆಗಳು ಕೊಚ್ಚಿಕೊಂಡು ಹೋಗಿದ್ದವು. ಅಲ್ಲದೇ ನಿರಂತರವಾಗಿ ಮಳೆ ಸುರಿದ ಕಾರಣ ಉಳಿದ ಅಲ್ಪಸ್ವಲ್ಪ ಬೆಳೆಯೂ ನೆಲ ಕಚ್ಚಿದ್ದವು. ಹೀಗೆ ಅತಿಯಾದ ಮಳೆಯ ಕಾರಣ ಬ್ಯಾಡಗಿ ಮೆಣಸಿನಕಾಯಿಯು ಗಿಡದಲ್ಲೇ ಕೊಳೆತು ಹೋಗಿ, ರೈತರ ಕಣ್ಣಲ್ಲಿ ನೀರು ತರಿಸಿತ್ತು. ಪ್ರತಿ ವರ್ಷ ಒಂದು ಎಕರೆಯಲ್ಲಿ 5ರಿಂದ 6 ಕ್ವಿಂಟಲ್‌ ಮೆಣಸಿನಕಾಯಿ ಬೆಳೆ ಬೆಳೆಯುತ್ತಿದ್ದ ರೈತರ ಕೈಗೆ ಈ ಬಾರಿ ಲಭಿಸಿದ್ದು, ಕೇವಲ 1ರಿಂದ 2 ಕ್ವಿಂಟಲ್‌ ಮಾತ್ರ. ಹೀಗೆ ಅರ್ಧಕ್ಕೆ ಅರ್ಧದಷ್ಟುಇಳುವರಿ ಕುಸಿತವಾದ ಪರಿಣಾಮ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತೆ ಮಾಡಿತ್ತು. ಆದರೆ, ಇಳುವರಿ ಭಾರೀ ಕುಸಿತವಾದ ಪರಿಣಾಮ ಬ್ಯಾಡಗಿ ಮೆಣಸಿನಕಾಯಿಗೆ ಬೇಡಿಕೆ ಬಂದಿದ್ದು, ಆರಂಭದಿಂದಲೇ ಉತ್ತಮ ಬೆಲೆ ಬಿಕರಿಯಾಗ ತೊಡಗಿತು. ಪರಿಣಾಮ ಕಣ್ಣೀರು ಹಾಕುತ್ತಿದ್ದ ರೈತರು, ನಿಟ್ಟುಸಿರು ಬಿಡುವಂತೆ ಮಾಡಿತು.

ಆರಂಭದಲ್ಲೇ .13 ಸಾವಿರ:

ನವೆಂಬರ್‌ ಮೊದಲ ವಾರದಲ್ಲಿ ಸಗಟು ಮಾರುಕಟ್ಟೆ13ರಿಂದ 14,000 ರು.ಗೆ ಮಾರಾಟವಾಗುತ್ತಿದ್ದ ಮೆಣಸಿನಕಾಯಿ ಬೆಲೆ ಕ್ರಮೇಣ ಏರ ತೊಡಗಿತ್ತು. ಡಿಸೆಂಬರ್‌ ಮೊದಲ ವಾರದಲ್ಲಿ 16ರಿಂದ 18ರು. ತಲುಪಿದ್ದ ಕ್ವಿಂಟಾಲ್‌ ಮೆಣಸಿನಕಾಯಿಯ ಬೆಲೆ ಇದೀಗ 25 ಸಾವಿರ ರು. ತನಕ ಬಂದು ನಿಂತಿದೆ.

ಬ್ಯಾಡಗಿ ಮೆಣಸಿನ ರುಚಿಗಿಲ್ಲ ಸಾಟಿ:

ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಹಲವು ತಾಲೂಕುಗಳು ಬ್ಯಾಡಗಿ ಮೆಣಸಿನಕಾಯಿ ಬೆಳೆಯುವ ಪ್ರಮುಖ ಪ್ರದೇಶಗಳಾಗಿವೆ. ಅದರಲ್ಲೂ ಧಾರವಾಡ ಜಿಲ್ಲೆಯ ಕುಂದಗೋಳ, ಹುಬ್ಬಳ್ಳಿ ತಾಲೂಕು, ಗದಗ ಜಿಲ್ಲೆಯ ಶಿರಹಟ್ಟಿ, ಗದಗ, ರೋಣ ಮತ್ತು ಹಾವೇರಿ ಜಿಲ್ಲೆಯ ಸವಣೂರು ತಾಲೂಕುಗಳಲ್ಲಿ ಈ ಮೆಣಸಿನಕಾಯಿ ಬೆಳೆಗೆ ಹೇಳಿ ಮಾಡಿಸಿದ ಪ್ರದೇಶಗಳಾಗಿವೆ. ಅಲ್ಲದೆ ರಾಯಚೂರ ಮತ್ತು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಗಳಲ್ಲಿಯೂ ಕೂಡಾ ಭಾರಿ ಪ್ರಮಾಣದ ಮೆಣಸಿಕಾಯಿ ಬೆಳೆಯಲಾಗುತ್ತಿದ್ದರೂ ಬ್ಯಾಡಗಿಯ ಮೆಣಸಿನಕಾಯಿ ರುಚಿಗೆ ಸಾಟಿಯಾಗುವುದಿಲ್ಲ ಎನ್ನುತ್ತಾರೆ ಗೃಹಿಣಿಯರು.

4 ಎಕರೆ ಮೆಣಸಿನಕಾಯಿ ಬಿತ್ತನೆ ಮಾಡಿದ್ದೆವು. ಎಕರೆಗೆ 2 ಕ್ವಿಂಟಾಲ್‌ ಬೆಳೆ ಬಂದಿದೆ. ಮೆಣಸಿನ ಸಸಿ ನಾಟಿ ಮಾಡಲು, ಗೊಬ್ಬರ, ಆಳು ಹೀಗೆ ಸಾವಿರಾರು ರುಪಾಯಿ ಖರ್ಚು ಮಾಡಿದ್ದರೂ ಇಳುವರಿ ಮಾತ್ರ ಬಂದಿಲ್ಲ. ಆದರೆ, ಬೆಲೆ ಸ್ವಲ್ಪ ಹೆಚ್ಚಾಗಿರುವುದು ನೆಮ್ಮದಿ ತಂದಿದೆ.

- ಚೆನ್ನಪ್ಪ ಕರೆಯತ್ತಿನ, ಲಕ್ಷ್ಮೇಶ್ವರದ ರೈತ

click me!