ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಚ್‌ಡಿಎಫ್‌ಸಿ ಲಿ. ವಿಲೀನ, ದೇಶದ 2ನೇ ಅತಿದೊಡ್ಡ ಕಂಪನಿ!

By Suvarna NewsFirst Published Apr 5, 2022, 7:42 AM IST
Highlights

* ಇದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಲೀನ ಪ್ರಕ್ರಿಯೆ

* ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಚ್‌ಡಿಎಫ್‌ಸಿ ಲಿ. ವಿಲೀನ

* ದೇಶದ 2ನೇ ಅತಿದೊಡ್ಡ ಕಂಪನಿಯಾದ ಎಚ್‌ಡಿಎಫ್‌ಸಿ ಬ್ಯಾಂಕ್‌

ನವದೆಹಲಿ(ಏ.05): ದೇಶದ ಅತಿದೊಡ್ಡ ಖಾಸಗಿ ಬ್ಯಾಂಕುಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ದೇಶದ ಅತಿದೊಡ್ಡ ಖಾಸಗಿ ಗೃಹಸಾಲ ನೀಡಿಕೆ ಕಂಪನಿ ಎಚ್‌ಡಿಎಫ್‌ಸಿ ಲಿ. ಅನ್ನು ವಿಲೀನಗೊಳಿಸಲು ನಿರ್ಧರಿಸಲಾಗಿದೆ. ಇದು ಭಾರತದ ಇತಿಹಾಸದಲ್ಲೇ ಅತಿದೊಡ್ಡ ಖಾಸಗಿ ಕಂಪನಿಗಳ ವಿಲೀನ ಪ್ರಕ್ರಿಯೆ ಎನ್ನಿಸಿಕೊಳ್ಳಲಿದೆ. 2024ರಲ್ಲಿ ಈ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ವಿಲೀನ ಪ್ರಕ್ರಿಯೆಯ ಅಂಗವಾಗಿ ಮೊದಲಿಗೆ ಎಚ್‌ಡಿಎಫ್‌ಸಿ ಇನ್ವೆಸ್ಟ್‌ಮೆಂಟ್ಸ್‌ ಮತ್ತು ಎಚ್‌ಡಿಎಫ್‌ಸಿ ಹೋಲ್ಡಿಂಗ್‌್ಸ ಕಂಪನಿಯನ್ನು ಎಚ್‌ಡಿಎಫ್‌ಸಿ ಲಿ.ನಲ್ಲಿ ವಿಲೀನಗೊಳಿಸಲಾಗುತ್ತದೆ. ನಂತರ ಎಚ್‌ಡಿಎಫ್‌ಸಿ ಲಿ. ಕಂಪನಿಯನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲಾಗುತ್ತದೆ. ವಿಲೀನದ ನಂತರ ಎಚ್‌ಡಿಎಫ್‌ಸಿ ಷೇರುದಾರರಿಗೆ ಪ್ರತಿ 42 ಷೇರಿಗೆ ಎಚ್‌ಡಿಎಫ್‌ಸಿ ಬ್ಯಾಂಕಿನ 25 ಷೇರುಗಳು ಲಭಿಸಲಿವೆ. ಈ ಬ್ಯಾಂಕ್‌ನಲ್ಲಿ ಎಚ್‌ಡಿಎಫ್‌ಸಿಯ ಶೇ.41ರಷ್ಟುಪಾಲು ಇರಲಿದೆ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಶೇ.100ರಷ್ಟುಷೇರುದಾರರ ಒಡೆತನದ ಕಂಪನಿಯಾಗಲಿದೆ.

ಸೋಮವಾರ ವಿಲೀನ ಸುದ್ದಿ ಹೊರಬಿದ್ದ ಬೆನ್ನಲ್ಲೇ ಎರಡೂ ಕಂಪನಿಯ ಷೇರು ಮೌಲ್ಯ ಭಾರೀ ಏರಿಕೆ ಕಂಡಿದೆ. ಪರಿಣಾಮ ಕಂಪನಿಯ ಮಾರುಕಟ್ಟೆಮೌಲ್ಯ ಒಂದೇ ದಿನದಲ್ಲಿ 2 ಲಕ್ಷ ಕೋಟಿ ರು.ನಷ್ಟುಹೆಚ್ಚಳವಾಗಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ ದೇಶದ 2ನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ. ಹಾಲಿ ಮಾರುಕಟ್ಟೆಬಂಡವಾಳ ಹಾಗೂ ಆಸ್ತಿಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ 18 ಲಕ್ಷ ಕೋಟಿ ರು.ನೊಂದಿಗೆ ಮೊದಲ ಸ್ಥಾನದಲ್ಲಿದೆ. 14.04 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಎಚ್‌ಡಿಎಫ್‌ಸಿ 2ನೇ ಸ್ಥಾನಕ್ಕೆ ತಲುಪಿದೆ. 13.79 ಲಕ್ಷ ಕೋಟಿ ರು. ಮಾರುಕಟ್ಟೆಮೌಲ್ಯದೊಂದಿಗೆ ಟಿಸಿಎಸ್‌ ನಂತರದ ಸ್ಥಾನದಲ್ಲಿದೆ.

click me!