*ಲೋಕಸಭೆಯಲ್ಲಿ ಬೆಲೆಯೇರಿಕೆ ಚರ್ಚೆ ಸಂದರ್ಭದಲ್ಲಿ ಜಿಎಸ್ ಟಿ ಬಗ್ಗೆ ವಿತ್ತ ಸಚಿವರ ಸ್ಪಷ್ಟನೆ
*ಆಹಾರ ಪದಾರ್ಥಗಳ ಮೇಲಿನ ಜಿಎಸ್ ಟಿ ಬಡವರಿಗೆ ಹೊರೆಯಾಗದು ಎಂದ ಸಚಿವೆ
*ಪ್ರೀಪ್ಯಾಕ್ಡ್ ಹಾಗೂ ಪ್ರೀ ಲೇಬಲ್ಡ್ ಸರಕುಗಳ ಮೇಲೆ ಮಾತ್ರ ತೆರಿಗೆ
ನವದೆಹಲಿ (ಜು. 2): ಮೊಸರು, ಲಸ್ಸಿ ಹಾಗೂ ಗೋಧಿಯಂತಹ ಆಹಾರ ಪದಾರ್ಥಗಳ ಮೇಲೆ ಸರಕು ಹಾಗೂ ಸೇವಾ ತೆರಿಗೆ (GST) ವಿಧಿಸೋದ್ರಿಂದ ಬಡ ಜನರ ಮೇಲೆ ಯಾವುದೇ ಹೊರೆಯಾಗೋದಿಲ್ಲ ಎಂಬ ಅಭಿಪ್ರಾಯವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಎಲ್ಲ ರಾಜ್ಯಗಳ ಪ್ರತಿನಿಧಿಗಳನ್ನೊಳಗೊಂಡ ಜಿಎಸ್ ಟಿ ಮಂಡಳಿ ತೆಗೆದುಕೊಂಡ ನಿರ್ಧಾರಕ್ಕೆ ನರೇಂದ್ರ ಮೋದಿ ಆಡಳಿತ ತೆರಿಗೆಗಳನ್ನು ಹೆಚ್ಚಿಸುತ್ತಿದೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳು ಹಾಗೂ ರಾಜ್ಯ ಸರ್ಕಾರಗಳನ್ನು ಈ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ತರಾಟೆಗೆ ತೆಗೆದುಕೊಂಡರು. ಲೋಕಸಭೆಯಲ್ಲಿ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿ ನಡೆದ ಚರ್ಚೆಯಲ್ಲಿ ಉತ್ತರಿಸುವ ಸಂದರ್ಭದಲ್ಲಿ ಸದಸ್ಯರ ಚರ್ಚೆ ಬೆಲೆಯೇರಿಕೆಗೆ ಸಂಬಂಧಿಸಿದ ನಿಜವಾದ ಕಾಳಜಿಯ ಬದಲು ರಾಜಕೀಯ ಆಯಾಮಗಳನ್ನು ಒಳಗೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ವಿಶ್ಲೇಷಿಸಿದ್ದರು. ಇನ್ನು ಇದಕ್ಕೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂಬ ವಿತ್ತ ಸಚಿವೆಯ ಉತ್ತರದಿಂದ ಕೋಪಗೊಂಡ ಕಾಂಗ್ರೆಸ್ ಸದಸ್ಯರು ಅರ್ಧದಲ್ಲೇ ಸದನದಿಂದ ಹೊರನಡೆದರು. ಇನ್ನು ಡಿಎಂಕೆ ಎಂಪಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರ್ಮಲಾ ಸೀತಾರಾಮನ್ ತಮಿಳಿನಲ್ಲಿ ಮಾತನಾಡಿದ ಪ್ರಸಂಗವೂ ನಡೆಯಿತು.
ಕೋವಿಡ್ -19 ಪೆಂಡಾಮಿಕ್ ಹಾಗೂ ಅದರ ಅನೇಕ ಅಲೆಗಳು, ಉಕ್ರೇನ್-ರಷ್ಯಾ ಯುದ್ಧ, ಚೀನಾದ ಕೆಲವು ಭಾಗಗಳಲ್ಲಿನ ಲಾಕ್ ಡೌನ್ ನಿಂದ ಪೂರೈಕೆ ಸರಪಳಿ ವ್ಯವಸ್ಥೆಯಲ್ಲಿ ವ್ಯತ್ಯಯ ಮುಂತಾದ ಅನೇಕ ಸಮಸ್ಯೆಗಳ ನಡುವೆಯೂ ಸರ್ಕಾರ ಹಣದುಬ್ಬರವನ್ನು ಶೇ.7 ಅಥವಾ ಅದಕ್ಕಿಂತ ಕಡಿಮೆ ಮಟ್ಟದಲ್ಲಿಟ್ಟಿದೆ ಎಂದು ಸಚಿವೆ ಹೇಳಿದರು. ಬೆಲೆಯೇರಿಕೆಯನ್ನು ಇನ್ನಷ್ಟು ತಗ್ಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವೆ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಜಗತ್ತಿನ ಶ್ರೀಮಂತ ವ್ಯಕ್ತಿಗಳ ಸರಳ ಅಭ್ಯಾಸಗಳಿವು, ಅಳವಡಿಸಿಕೊಂಡರೆ ಜೀವನ ಬಿಂದಾಸ್!
'ಜನರ ನಿರೀಕ್ಷೆಗಳಿಗೆ ತಕ್ಕಂತೆ ನಾವು ಕಾರ್ಯನಿರ್ವಹಿಸುತ್ತಿದ್ದು, ಹಣದುಬ್ಬರ ತಗ್ಗಿಸಲು ಪ್ರಯತ್ನಿಸುತ್ತಿದ್ದೇವೆ. ಇಂದು ಕೂಡ ಜಾಗತಿಕ ವ್ಯಾಪಾರ ಸಾಮಾನ್ಯ ಸ್ಥಿತಿಗೆ ಮರಳಿಲ್ಲ. ಇಂಥ ಸಂದರ್ಭದಲ್ಲಿ ನಾವು ಹಣದುಬ್ಬರವನ್ನು ಶೇ.7 ಅಥವಾ ಅದಕ್ಕಿಂತ ಕೆಳಗಿರಿಸುವಲ್ಲಿ ಸಫಲರಾಗಿದ್ದೇವೆ. ನಾವೀಗ ಶೇ.7ರಲ್ಲಿದ್ದು, ಇನ್ನಷ್ಟು ಕೆಳಗೆ ತರಲು ಪ್ರಯತ್ನಿಸುತ್ತಿದ್ದೇವೆ. ಆದರೂ ಹಣದುಬ್ಬರ ತಗ್ಗಿಸಲು ನೀವೇನು ಮಾಡಿದ್ದೀರಿ ಎಂಬ ಪ್ರಶ್ನೆಗಳನ್ನು ನಮಗೆ ಕೇಳಲಾಗುತ್ತಿದೆ' ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.ಪ್ರಸ್ತುತ ದೇಶದಲ್ಲಿರುವ ಹಣದುಬ್ಬರವನ್ನು ಯುಪಿಎ ಆಡಳಿತಾವಧಿಯಲ್ಲಿನ ರಿಟೇಲ್ ಹಣದುಬ್ಬರದ ಜೊತೆಗೆ ನಿರ್ಮಲಾ ಸೀತಾರಾಮನ್ ಹೋಲಿಕೆ ಮಾಡಿದರು.
'ಪ್ರೀಪ್ಯಾಕ್ಡ್ ಹಾಗೂ ಪ್ರೀ ಲೇಬಲ್ಡ್ ಸರಕುಗಳ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತಿದೆ. ಹೀಗಾಗಿ ಬಡ ಜನರ ಮೇಲೆ ಇದ್ರಿಂದ ಯಾವುದೇ ಪರಿಣಾಮ ಉಂಟಾಗೋದಿಲ್ಲ. ಹಾಗೆಯೇ 25ಕೆಜಿಗಿಂತ ಅಧಿಕ ತೂಕದ ಪ್ಯಾಕ್ ಗಳ ಮೇಲೆ ಕೂಡ ನಾವು ತೆರಿಗೆ ವಿಧಿಸುತ್ತಿಲ್ಲ. ಏಕೆಂದ್ರೆ ಇದ್ರಿಂದ ಸಗಟು ವ್ಯಾಪಾರಿಗಳು ತೆರಿಗೆಯಿಲ್ಲದೆ ಕಿರಾಣಿ ಅಂಗಡಿಗಳಿಗೆ ಪೂರೈಕೆ ಮಾಡಬಹುದು. ಬಡವರನ್ನು ಗಮನದಲ್ಲಿಟ್ಟುಕೊಂಡು ಬಿಡಿಯಾಗಿ ಮಾರಾಟ ಮಾಡುವ ಯಾವುದೇ ವಸ್ತುವಿಗೂ ತೆರಿಗೆ ವಿಧಿಸುತ್ತಿಲ್ಲ' ಎಂದು ವಿತ್ತ ಸಚಿವೆ ಸ್ಪಷ್ಟಪಡಿಸಿದರು.
ಇನ್ನು ತಮಿಳುನಾಡು, ತೆಲಂಗಣ, ಪಂಜಾಬ್, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶ ರಾಜ್ಯ ಸರ್ಕಾರಗಳು ಜಿಎಸ್ ಟಿ ಜಾರಿಗೂ ಮುನ್ನ ಗೋಧಿ ಹಿಟ್ಟು, ಬೇಳೆಕಾಳು, ಗೋಧಿ, ಅಕ್ಕಿ, ಕಡ್ಲೆಹಿಟ್ಟು ಹಾಗೂ ಪನ್ನೀರು ಸೇರಿದಂತೆ ಕೆಲವು ವಸ್ತುಗಳ ಮೇಲೆ ತೆರಿಗೆ ವಿಧಿಸುತ್ತಲೇ ಬಂದಿವೆ ಎಂಬ ವಿಚಾರವನ್ನು ಈ ಸಂದರ್ಭದಲ್ಲಿ ವಿತ್ತ ಸಚಿವೆ ನೆನಪಿಸಿದರು.
ದೇಶದ ಆರ್ಥಿಕತೆ ಭದ್ರವಾಗಿದೆ: ಸಮರ್ಥಿಸಿಕೊಂಡ ವಿತ್ತ ಸಚಿವೆ
ಇಂಧನ ವಲಯದ ಬಾಕಿ ಪಾವತಿಸಿ
ರಾಜ್ಯ ಸರ್ಕಾರಗಳು ತಮ್ಮ ವಿದ್ಯುತ್ ಉತ್ಪಾದನಾ ಕೇಂದ್ರ ಗಳು ಹಾಗೂ ಡಿಸ್ಕಾಂಗಳಿಗೆ ನೀಡಬೇಕಿರುವ ಬಾಕಿಯನ್ನು ತಕ್ಷಣ ಪಾವತಿಸಬೇಕು. ಇಲ್ಲವಾದ್ರೆ ಅವು ಜನರಿಗೆ ವಿದ್ಯುತ್ ಉತ್ಪಾದನೆ ಮಾಡೋದು ಹೇಗೆ? ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದರು.