ತೆರಿಗೆದಾರರೇ ಗಮನಿಸಿ, ಅಕ್ಟೋಬರ್ 1ರಿಂದ ಈ ಎರಡು ನಿಯಮಗಳಲ್ಲಿ ಬದಲಾವಣೆ

By Suvarna News  |  First Published Sep 15, 2022, 5:35 PM IST

*10 ಕೋಟಿ ರೂ. ಹಾಗೂ ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ಉದ್ಯಮಗಳಿಗೆ ಅ. 1ರಿಂದ ಇ-ಇನ್ ವಾಯ್ಸ್ ಕಡ್ಡಾಯ
*ಆದಾಯ ತೆರಿಗೆ ಪಾವತಿಸೋರಿಗಿಲ್ಲ ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಯಾಗುವ ಅವಕಾಶ
*ಈ ಬಗ್ಗೆ ಈಗಾಗಲೇ ಅಧಿಸೂಚನೆ ಹೊರಡಿಸಿರುವ ಸರ್ಕಾರ
 


ನವದೆಹಲಿ (ಸೆ.15): ಸೆಪ್ಟೆಂಬರ್ ತಿಂಗಳು ಕೊನೆಯಾಗುತ್ತಿದ್ದಂತೆ ಈ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕವೂ ಮುಗಿಯುತ್ತದೆ. ಇದರೊಂದಿಗೆ ಅಕ್ಟೋಬರ್ ನಲ್ಲಿ ಪ್ರಾರಂಭವಾಗುವ ಮೂರನೇ ತ್ರೈಮಾಸಿಕದಲ್ಲಿ ಕೆಲವೊಂದು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಅದರಲ್ಲಿ ತೆರಿಗೆ ನಿಯಮಗಳಿಗೆ ಸಂಬಂಧಿಸಿದ ಬದಲಾವಣೆಗಳು ಕೂಡ ಸೇರಿವೆ. ಇದರಲ್ಲಿ ಒಂದು ನಿಯಮ  ಜಿಎಸ್ ಟಿ ಪಾವತಿದಾರರ ಮೇಲೆ ಪರಿಣಾಮ ಬೀರಿದೆ, ಇನ್ನೊಂದು ಆದಾಯ ತೆರಿಗೆ ಪಾವತಿದಾರರಿಗೆ ಸಂಬಂಧಿಸಿದ್ದಾಗಿದೆ. ಅಂದರೆ ಜಿಎಸ್ ಟಿ ಇ-ಇನ್ ವಾಯ್ಸ್ ನಿಯಮ ಬದಲಾಗಲಿದೆ. ಹಾಗೆಯೇ ಅಟಲ್ ಪಿಂಚಣಿ ಯೋಜನೆಯ ನಿಯಮ ಕೂಡ ಬದಲಾಗಲಿದೆ. ಅಟಲ್ ಪಿಂಚಣಿ ಯೋಜನೆಯನ್ನು  (APY scheme) ಕೇಂದ್ರ ಸರ್ಕಾರ 2015-16ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರದ ಈ ಯೋಜನೆ ವೃದ್ಧಾಪ್ಯದಲ್ಲಿ ಆದಾಯ ಭದ್ರತೆ ನೀಡುವ ಜೊತೆಗೆ ಅಸಂಘಟಿತ ವಲಯದ ಎಲ್ಲ ನಾಗರಿಕರನ್ನು ಕೇಂದ್ರೀಕರಿಸಿತ್ತು. ಆದರೆ, ಆದಾಯ ತೆರಿಗೆ ಪಾವತಿಸುವ ಹೂಡಿಕೆದಾರರು ಅಕ್ಟೋಬರ್ 1ರಿಂದ ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಗೊಳ್ಳಲು ಅರ್ಹರಾಗಿರೋದಿಲ್ಲ. ಹಾಗೆಯೇ 10 ಕೋಟಿ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುವ ಉದ್ಯಮಗಳು ಅಕ್ಟೋಬರ್ 1ರಿಂದ ಇ-ಇನ್ ವಾಯ್ಸ್ ಸಲ್ಲಿಕೆ ಮಾಡೋದು ಕಡ್ಡಾಯ. 

ಜಿಎಸ್ ಟಿ ನಿಯಮ ಬದಲಾವಣೆ
ಸರಕು ಹಾಗೂ ಸೇವಾ ತೆರಿಗೆ ಅಡಿಯಲ್ಲಿ ಅಥವಾ ಜಿಎಸ್ ಟಿ ತೆರಿಗೆ ವ್ಯಾಪ್ತಿಯಲ್ಲಿ 10 ಕೋಟಿ ರೂ. ಹಾಗೂ ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ಉದ್ಯಮಗಳಿಗೆ ಅಕ್ಟೋಬರ್ 1ರಿಂದ ಇ-ಇನ್ ವಾಯ್ಸ್ ಕಡ್ಡಾಯ. ಪ್ರಸ್ತುತ ಸರ್ಕಾರ ಈ ಮಿತಿಯನ್ನು 20 ಕೋಟಿ ರೂ.ಗೆ ನಿಗದಿಪಡಿಸಿದ್ದು, ಮುಂದಿನ ತಿಂಗಳಿಂದ 10 ಕೋಟಿ ರೂ.ಗೆ ಇಳಿಕೆ ಮಾಡಿದೆ. ಉದ್ಯಮಗಳಿಂದ ಆದಾಯ ಸೋರಿಕೆ ತಡೆ ಹಾಗೂ ಉತ್ತಮ ತೆರಿಗೆ ಸಂಗ್ರಹದ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಕುರಿತ ಅಧಿಸೂಚನೆಯನ್ನು ನೇರ ತೆರಿಗೆಗಳು ಹಾಗೂ ಸುಂಕಗಳ ಕೇಂದ್ರೀಯ ಮಂಡಳಿ (CBIC) ಆಗಸ್ಟ್ 1ರಂದು ಹೊರಡಿಸಿತ್ತು. ಜಿಎಸ್ ಟಿ ಮಂಡಳಿಯ ಶಿಫಾರಸ್ಸುಗಳ ಆಧಾರದಲ್ಲಿ ನಿಯಮಗಳನ್ನು ರೂಪಿಸಲಾಗಿದೆ.

Tap to resize

Latest Videos

ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿವೆ 57 ಘೋಸ್ಟ್ ಮಾಲ್ ಗಳು!

ಅಟಲ್ ಪಿಂಚಣಿ ಯೋಜನೆ ನಿಯಮ ಬದಲಾವಣೆ
ಆದಾಯ ತೆರಿಗೆ ಪಾವತಿಸುವ ಹೂಡಿಕೆದಾರರು 2022ರ ಅಕ್ಟೋಬರ್ 1ರಿಂದ ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಗೊಳ್ಳಲು ಅರ್ಹರಾಗಿರೋದಿಲ್ಲ. ಒಂದು ವೇಳೆ ಆದಾಯ ತೆರಿಗೆ ಪಾವತಿಸುತ್ತಿರುವ ವ್ಯಕ್ತಿ ಅಕ್ಟೋಬರ್ 1 ಅಥವಾ ಅದರ ನಂತರ ಎಪಿವೈ ಯೋಜನೆಗೆ ಸೇರ್ಪಡೆಗೊಂಡರೆ ಅಂಥ ಖಾತೆಯನ್ನು ಮುಚ್ಚಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಒಂದು ವೇಳೆ ಯಾವುದೇ ಚಂದಾದಾರರು ಅಕ್ಟೋಬರ್ 1 ಅಥವಾ ಅದರ ನಂತರ ಸೇರ್ಪಡೆಗೊಂಡರೆ ಹಾಗೂ ಅವರು ಅರ್ಜಿ ಸಲ್ಲಿಸಿದಾಗ ಅಥವಾ ಅದಕ್ಕೂ ಮೊದಲು ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಎಂಬುದು ತಿಳಿದು ಬಂದರೆ ಎಪಿವೈ ಖಾತೆಯನ್ನು ಮುಚ್ಚಲಾಗುತ್ತದೆ. ಆ ದಿನಾಂಕದ ತನಕ ಸಂಗ್ರಹಣೆಗೊಂಡ ಪಿಂಚಣಿಯನ್ನು ಚಂದಾದಾರರಿಗೆ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಬಿಸ್ಲೆರಿ ಮಾರಾಟಕ್ಕಿದೆ, ಖರೀದಿ ಮಾಡ್ತಿರೋ ಕಂಪನಿ ಇದು!

ಇಲ್ಲಿಯ ತನಕ 18 ಹಾಗೂ 40 ವರ್ಷಗಳ ನಡುವಿನ ಭಾರತದ ಎಲ್ಲ ನಾಗರಿಕರು ಅವರ ತೆರಿಗೆ ಪಾವತಿ ಸ್ಥಿತಿಗತಿಗಳನ್ನು ಹೊರತುಪಡಿಸಿ  ಈ ಯೋಜನೆಗೆ ಸೇರ್ಪಡೆಗೊಳ್ಳಲು ಅರ್ಹರಾಗಿದ್ದರು. ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಚಂದಾದಾರರ ಕೊಡುಗೆಯ ಶೇ.50ರಷ್ಟನ್ನು ಅಥವಾ ವಾರ್ಷಿಕ 1,000ರೂ. ಇದರಲ್ಲಿ ಯಾವುದು ಕಡಿಮೆಯೋ ಅದನ್ನು ನೀಡುತ್ತದೆ. ಸರ್ಕಾರದ ಈ ಕೊಡುಗೆ ಇಲ್ಲಿಯ ತನಕ ಇತರ ಸಾಮಾಜಿಕ ಭದ್ರತ ಯೋಜನೆಗಳ ಫಲಾನುಭವಿ ಆಗದಿರೋರಿಗೆ ಮಾತ್ರ ಲಭಿಸುತ್ತಿತ್ತು. ಅಲ್ಲದೆ, ಇಲ್ಲಿಯ ತನಕ ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದ ಯಾವುದೇ ಷರತ್ತು ಇರಲಿಲ್ಲ. 
 

click me!