
ನವದೆಹಲಿ(ಜೂ.06): ಕೋವಿಡ್ 2ನೇ ಅಲೆಯ ತೀವ್ರ ಹೊಡೆತದ ಹೊರತಾಗಿಯೂ, ಮೇ ತಿಂಗಳಿನಲ್ಲೂ ಕೇಂದ್ರ ಸರ್ಕಾರಕ್ಕೆ ಜಿಎಸ್ಟಿಯಿಂದ 1.02 ಲಕ್ಷ ಕೋಟಿ ರು. ವರಮಾನ ಬಂದಿದೆ. ಇದರೊಂದಿಗೆ ಜಿಎಸ್‌ಟಿ ಮೂಲದಿಂದ ಸತತ 8 ತಿಂಗಳುಗಳಿಂದ ಕೇಂದ್ರ ಸರ್ಕಾರಕ್ಕೆ 1 ಲಕ್ಷ ಕೋಟಿ ರು.ಗಿಂತ ಹೆಚ್ಚಿನ ಆದಾಯ ಬಂದಂತಾಗಿದೆ.
ಆದರೆ ಕಳೆದ ತಿಂಗಳ ಜಿಎಸ್‌ಟಿ ವರಮಾನ 1.41 ಲಕ್ಷ ಕೋಟಿ ರು.ಗೆ ಹೋಲಿಸಿದರೆ, ಮೇ ತಿಂಗಳ ಆದಾಯದಲ್ಲಿ 39 ಸಾವಿರ ಕೋಟಿ ರು. ಇಳಿಕೆಯಾಗಿದೆ. ಆದಾಗ್ಯೂ, ಕಳೆದ ವರ್ಷದ ಮೇ ತಿಂಗಳ 62,009 ಕೋಟಿ ರು. ಜಿಎಸ್‌ಟಿ ಸಂಗ್ರಹಕ್ಕೆ ಹೋಲಿಸಿದರೆ, ಈ ವರ್ಷದ ಮೇ ತಿಂಗಳ ಆದಾಯವು ಶೇ.65ರಷ್ಟುಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕಳೆದ ವರ್ಷ ಕೊರೋನಾ ಹಾವಳಿ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‌ಡೌನ್ ಹೇರಿದ್ದ ಕಾರಣ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಇದರಿಂದ ಜಿಎಸ್‌ಟಿ ಆದಾಯದಲ್ಲಿ ಖೋತಾ ಆಗಿತ್ತು. ಈ ಸಲ ದೇಶವ್ಯಾಪಿ ಲಾಕ್‌ಡೌನ್ ಹೇರದೇ ಸೋಂಕು ಹೆಚ್ಚಿರುವ ಸ್ಥಳಗಳಲ್ಲಿ ಮಾತ್ರ ನಿರ್ಬಂಧ ಹೇರಲಾಗಿದೆ ಹಾಗೂ ಹಲವು ಚಟುವಟಿಕೆಗೆ ಅನುಮತಿಸಲಾಗಿದೆ. ಹೀಗಾಗಿ ಜಿಎಸ್‌ಟಿ ಸಂಗ್ರಹ ಸಮತೋಲನ ಕಾಯ್ದುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.