Bitcoinನಂಥ ಕ್ರಿಪ್ಟೋಕರೆನ್ಸಿಗೆ ಮಾನ್ಯತೆ ಇಲ್ಲ, ನಿಯಂತ್ರಣಕ್ಕೆ ಶೀಘ್ರ ಮಸೂದೆ

By Suvarna News  |  First Published Nov 15, 2021, 7:35 AM IST

* ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌, ಜಿಎಸ್‌ಟಿ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ

* ಕರೆನ್ಸಿ ಮಾನ್ಯತೆ ಇಲ್ಲ ಹೂಡಿಕೆಯ ಒಂದು ಆಯ್ಕೆಯಾಗಿ ಮನ್ನಣೆ ಸಾಧ್ಯತೆ

* ಬಿಟ್‌ಕಾಯಿನ್‌ನಂಥ ಕ್ರಿಪ್ಟೋಕರೆನ್ಸಿ ನಿಯಂತ್ರಣಕ್ಕೆ ಶೀಘ್ರ ಮಸೂದೆ


ನವದೆಹಲಿ(ನ.15): ದೇಶಾದ್ಯಂತ ನಾನಾ ಕಾರಣಕ್ಕಾಗಿ ಬಿಟ್‌ಕಾಯಿನ್‌ನಂಥ (Bitcoin) ಕ್ರಿಪ್ಟೋಕರೆನ್ಸಿಗಳು (Cryptocurrency)ಭಾರೀ ಸದ್ದು ಮಾಡುತ್ತಿರುವ ಹೊತ್ತಿನಲ್ಲೇ, ಇದುವರೆಗೂ ಯಾವುದೇ ನಿಯಂತ್ರಣಕ್ಕೆ ಒಳಪಡದ ಇಂಥ ವರ್ಚುವಲ್‌ ಕರೆನ್ಸಿಗಳನ್ನು (Virtual Currency) ತನ್ನ ನಿಯಂತ್ರಣದ ವ್ಯಾಪ್ತಿಗೆ ತರುವ ಸಂಬಂಧ ಮಸೂದೆಯೊಂದನ್ನು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಆದರೆ, ಕ್ರಿಪ್ಟೋಕರೆನ್ಸಿ ಕುರಿತ ಆರ್‌ಬಿಐನ (RBI) ಕಠಿಣ ನಿಲುವುಗಳ ಹೊರತಾಗಿಯೂ, ಅದರ ಮೇಲೆ ಸಂಪೂರ್ಣ ನಿಷೇಧ ಹೇರುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಚೀನಾ (China) ಸೇರಿದಂತೆ ಕೆಲ ದೇಶಗಳು ಕ್ರಿಪ್ಟೋಕರೆನ್ಸಿಗಳ ಮೇಲೆ ಸಂಪೂರ್ಣ ನಿಷೇಧ ಹೇರಿವೆ. ಆದರೆ ಇಂಥ ಪೂರ್ಣ ನಿಷೇಧದ ಬದಲು ಈ ವಿಷಯದಲ್ಲಿ ಸ್ವಲ್ಪ ಸೌಮ್ಯವಾದ ನಿಲುವನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ.

Tap to resize

Latest Videos

"

ಈ ಬಗ್ಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ. ಈ ನಡುವೆ ಕ್ರಿಪ್ಟೋಕರೆನ್ಸಿ ಆಸ್ತಿಗಳ ಕುರಿತು ಚರ್ಚೆ ನಡೆಸಲು ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಸಭೆ ನ.15ರ ಸೋಮವಾರ ನಿಗದಿಯಾಗಿದೆ. ಈ ಸಭೆ ಚರ್ಚಿಸುವ ವಿಷಯ ಅಥವಾ ಕೈಗೊಳ್ಳುವ ನಿರ್ಧಾರಗಳು ಸಾಕಷ್ಟು ಕುತೂಹಲ ಕೆರಳಿಸಿವೆ.

ಮಾನ್ಯತೆ ಇಲ್ಲ?:

ಮೂಲಗಳ ಪ್ರಕಾರ, ಕ್ರಿಪ್ಟೋಕರೆನ್ಸಿಗಳಿಗೆ ಕರೆನ್ಸಿಯ ಮಾನ್ಯತೆ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿಲ್ಲ. ಅದರ ಬದಲಾಗಿ ಅದನ್ನು ಕೇವಲ ಹೂಡಿಕೆಯ ಒಂದು ತಾಣವಾಗಿಯಷ್ಟೇ ಮಾನ್ಯತೆ ನೀಡುವ ಇರಾದೆ ಹೊಂದಿದೆ ಎನ್ನಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಕ್ರಿಪ್ಟೋಕರೆನ್ಸಿ (Cryptocurrency) ದೊಡ್ಡ ಮಟ್ಟದಲ್ಲಿ ಚಲಾವಣೆಯಾಗುತ್ತಿದ್ದು, ಹೂಡಿಕೆದಾರರಿಗೆ ದೊಡ್ಡ ಮಟ್ಟದ ಲಾಭವನ್ನೂ ತಂದುಕೊಡುತ್ತಿದೆ. ಹೀಗಾಗಿ ಸೂಕ್ತ ಕಾಯ್ದೆಗಳ ಮೂಲಕ ಕ್ರಿಪ್ಟೋಕರೆನ್ಸಿಯನ್ನು ನಿಯಂತ್ರಿಸಿದರೆ, ಅದರ ಹೂಡಿಕೆಯ ಮೇಲೆ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ (Capital Gain Tax) ರೂಪದಲ್ಲಿ ಆದಾಯ ಸಂಗ್ರಹ ಮಾಡಬಹುದು. ಇನ್ನು ಇಂಥ ಕ್ರಿಪ್ಟೊಕರೆನ್ಸಿಯನ್ನು ಸೇವೆಯ ವ್ಯಾಪ್ತಿಗೆ ತಂದರೆ ಅದರ ಮೇಲೆ ಜಿಎಸ್‌ಟಿ ವಿಧಿಸುವ ಅವಕಾಶವೂ ಇದೆ. ಹೀಗಾಗಿ ಇದನ್ನು ಜನರಿಗೆ ಹೂಡಿಕೆಯ ಮತ್ತು ಸರ್ಕಾರಕ್ಕೆ ತೆರಿಗೆಯ ಹೊಸ ಮೂಲವಾಗಿ ಪರಿಗಣಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಭಾರೀ ಹೂಡಿಕೆ:

ಸದ್ಯ ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಷೇಧವೂ ಇಲ್ಲ, ಅದಕ್ಕೆ ಮಾನ್ಯತೆಯೂ ಇಲ್ಲ. ಹೀಗಿದ್ದರೂ ಕನಿಷ್ಠ 2 ಕೋಟಿ ಭಾರತೀಯರು ಕ್ರಿಪ್ಟೋಕರೆನ್ಸಿಯಲ್ಲಿ ಅಂದಾಜು 10 ಲಕ್ಷ ಕೋಟಿ ರು. ಹೂಡಿಕೆ ಮಾಡಿದ್ದಾರೆ ಎಂಬ ಅಂದಾಜಿದೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚಿನ ಜನರು ಕೇವಲ 25 ವರ್ಷದ ಆಜುಬಾಜಿನವರು. ಒಟ್ಟು ಹೂಡಿಕೆಯಲ್ಲಿ ದೆಹಲಿ, ಮುಂಬೈ, ಬೆಂಗಳೂರಿನ ಟೆಕ್ಕಿಗಳೇ ಹೆಚ್ಚಿನವರು ಎಂಬ ವರದಿ ಇದೆ.

ಜೊತೆಗೆ ಇತ್ತೀಚಿನ ದಿನಗಳಲ್ಲಿ ಭಾರೀ ಲಾಭದ ಆಮಿಷ ಒಡ್ಡಿ ಯುವಜನರನ್ನು ಕ್ರಿಪ್ಟೋಕರೆನ್ಸಿಯತ್ತ ಸೆಳೆಯುವ ಜಾಹೀರಾತುಗಳು ಹೆಚ್ಚುತ್ತಿವೆ. ಅಲ್ಲದೆ ಡಿಜಿಟಲ್‌ ಕರೆನ್ಸಿಗಳು ಅಕ್ರಮ ಹಣ ವರ್ಗಾವಣೆ ಮತ್ತು ಉಗ್ರವಾದಕ್ಕೆ ಹಣ ಪೂರೈಸುವ ವೇದಿಕೆಯಾಗಬಹುದೆಂಬ ಆತಂಕವೂ ಸರ್ಕಾರಕ್ಕಿದೆ. ಹೀಗಾಗಿಯೇ ಅವುಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ಸೂಕ್ತ ಮಸೂದೆಯೊಂದರ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

10 ಲಕ್ಷ ಕೋಟಿ: ಕ್ರಿಪ್ಟೋಕರೆನ್ಸಿಯಲ್ಲಿ ಭಾರತೀಯರು ಹೂಡಿದ್ದಾರೆನ್ನಲಾದ ಮೊತ್ತ

2 ಕೋಟಿ: ಡಿಜಿಟಲ್‌ ಕರೆನ್ಸಿಯಲ್ಲಿ ಹೂಡಿರುವ ಅಂದಾಜು ಭಾರತೀಯರ ಸಂಖ್ಯೆ

25 ವರ್ಷ: ಹೂಡಿಕೆದಾರರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು 25ರ ಆಜುಬಾಜಿನವರು

click me!