Privatization of Companies: ಈ ವರ್ಷಾಂತ್ಯದೊಳಗೆ 5 ಕಂಪೆನಿಗಳ ಖಾಸಗೀಕರಣಕ್ಕೆ ಸರ್ಕಾರದ ಸಿದ್ಧತೆ!

By Suvarna News  |  First Published Apr 13, 2022, 6:09 PM IST

*2022-23ನೇ ಹಣಕಾಸಿನ ಸಾಲಿನಲ್ಲಿ 65,000 ಕೋಟಿ ರೂ. ಹೂಡಿಕೆ ಹಿಂತೆಗೆತದ ಗುರಿ
*ಪಟ್ಟಿಯಲ್ಲಿBPCL,RINL ಹಾಗೂ ಪವನ್ ಹನ್ಸ್ 
*ಈಗಾಗಲೇ  ಏರ್ ಇಂಡಿಯಾದಲ್ಲಿನ  ಶೇ.100ರಷ್ಟು ಷೇರುಗಳನ್ನು ಟಾಟಾ ಗ್ರೂಪ್ ಗೆ ವರ್ಗಾಯಿಸಿದ ಸರ್ಕಾರ


ನವದೆಹಲಿ (ಏ.13): ಈ ವರ್ಷದ ಕೊನೆಯೊಳಗೆ ಕೇಂದ್ರ ಸರ್ಕಾರ 5 ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸೋ (Privatization) ಸಾಧ್ಯತೆಯಿದೆ ಎಂದು ಬ್ಲೂಮ್ ಬರ್ಗ್ (Bloomberg) ವರದಿ ಮಾಡಿದೆ. 2022-23ನೇ ಹಣಕಾಸಿನ ಸಾಲಿನಲ್ಲಿ 65,000 ಕೋಟಿ ರೂ. ಹೂಡಿಕೆ ಹಿಂತೆಗೆತದ (Disinvestment) ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು,ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯತಂತ್ರ ಕೂಡ ಸಿದ್ಧಪಡಿಸಲಾಗಿದೆ.

ಈ ವರ್ಷ ಕೇಂದ್ರ ಸರ್ಕಾರ ಹೂಡಿಕೆ ಹಿಂತೆಗೆದುಕೊಳ್ಳಲು ಬಯಸಿರೋ ಕಂಪೆನಿಗಳಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (BPCL), ಆರ್ ಐಎನ್ ಎಲ್ (RINL) ಹಾಗೂ ಪವನ್ ಹನ್ಸ್ ಕೂಡ ಸೇರಿದೆ. ಇವೆಲ್ಲದರ ಹೊರತಾಗಿ ಎಲ್ಐಸಿ ಐಪಿಒಗೆ ಕೂಡ ಸರ್ಕಾರ ಈಗಾಗಲೇ ಸಿದ್ಧತೆ ನಡೆಸಿದ್ದು, ಶೇ.5ರಷ್ಟು ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.

Tap to resize

Latest Videos

LIC IPO ಮೇಲೆ ರಷ್ಯಾ ಉಕ್ರೇನ್ ಯುದ್ಧದ ಕರಿನೆರಳು; ಮಾರ್ಚ್ ನಲ್ಲಿ ನಡೆಯಬೇಕಿದ್ದ ಐಪಿಒ ಮೇಗೆ ಮುಂದೂಡಿಕೆ

ಈ ವರ್ಷದ ಪ್ರಾರಂಭದಲ್ಲಿ ಸರ್ಕಾರ ಏರ್ ಇಂಡಿಯಾದಲ್ಲಿನ ತನ್ನ ಶೇ.100ರಷ್ಟು ಷೇರುಗಳನ್ನು ಟಾಟಾ ಗ್ರೂಪ್ ಗೆ ವರ್ಗಾಯಿಸಿದೆ. ಅಷ್ಟೇ ಅಲ್ಲದೆ, ನೀಲಾಚಲ್  ಇಸ್ಪಾಟ್ ನಿಗಮ್ ಲಿಮಿಟೆಡ್  (NINL) ಅನ್ನು 12,100 ಕೋಟಿ ರೂ.ಗೆ ಖರೀದಿಸಲು ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ ಲಿ. ಈಗಾಗಲೇ ಹರಾಜಿನಲ್ಲಿ ಜಯ ಗಳಿಸಿದೆ.
2021-22ನೇ ಹಣಕಾಸು ಸಾಲಿನಲ್ಲಿ ಕೇಂದ್ರ ಸರ್ಕಾರ  1.75 ಲಕ್ಷ ಕೋಟಿ ರೂ. ಹೂಡಿಕೆ ಹಿಂತೆಗೆತದ ಗುರಿ ನಿಗದಿಪಡಿಸಿತ್ತು. ಆದ್ರೆ ಇದರಲ್ಲಿ ಕೇವಲ 78,000 ಕೋಟಿ ರೂ. ಅಷ್ಟೇ ಗಳಿಸಲು ಸಾಧ್ಯವಾಗಿತ್ತು. ಅಂದ್ರೆ ಶೇ. 55.4 ಗುರಿಯನ್ನಷ್ಟೇ ತಲುಪಲು ಸಾಧ್ಯವಾಗಿತ್ತು.

ತೈಲ ಮಾರ್ಕೇಟಿಂಗ್ ಕಂಪೆನಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ.(BPCL) ಹೂಡಿಕೆ ಹಿಂತೆಗೆತ ಪ್ರಕ್ರಿಯೆ ಎರಡನೇ ಹಂತ ತಲುಪಿದ್ದು, ಈ ಬಗ್ಗೆ ಅನೇಕರು ಆಸಕ್ತಿ ತೋರಿದ್ದಾರೆ ಎಂಬ ಮಾಹಿತಿಯನ್ನು ಇತ್ತೀಚೆಗೆ ಹಣಕಾಸು ರಾಜ್ಯ ಸಚಿವ ಭಗ್ವತ್ ಕರಾಡ್ ರಾಜ್ಯಸಭೆಗೆ ನೀಡಿದ್ದರು.ಹೆಲಿಕಾಪ್ಟರ್ ಸೇವಾ ಪೂರೈಕೆದಾರ ಪವನ್ ಹನ್ಸ್ ಖಾಸಗೀಕರಣಕ್ಕೆ ಸಂಬಂಧಿಸಿ ಸರ್ಕಾರ ಈಗಾಗಲೇ ಮೂರು ಬಿಡ್ ಗಳನ್ನು ಸ್ವೀಕರಿಸಿದ್ದು, ಹೂಡಿಕೆ ಹಿಂತೆಗೆತ ಪ್ರಕ್ರಿಯೆಯನ್ನು ಆದಷ್ಟು ಶೀಘ್ರದಲ್ಲೇ ಪೂರ್ಣಗೊಳಿಸುವ ಸಾಧ್ಯತೆಯಿದೆ. ಪವನ್ ಹನ್ಸ್ ಖಾಸಗೀಕರಣದಿಂದ ಸರ್ಕಾರ 300-350 ಕೋಟಿ ರೂ. ಗಳಿಸೋ ಅಂದಾಜಿದೆ. ಈ ಕಂಪೆನಿಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಇದು ಸರ್ಕಾರದ ಐದನೇ ಪ್ರಯತ್ನವಾಗಿದೆ.

ರಾಷ್ಟ್ರೀಯ ಇಸ್ಪಾತ್ ನಿಗಮ ಲಿಮಿಟೆಡ್ (RINL) ಹೂಡಿಕೆ ಹಿಂತೆಗೆತದಿಂದ ಅಗತ್ಯ ಬಂಡವಾಳ ದೊರಕುವ ಜೊತೆಗೆ ಸಾಮರ್ಥ್ಯ ವಿಸ್ತರಣೆ, ಹೊಸ ತಂತ್ರಜ್ಞಾನ ಹಾಗೂ ಉತ್ತಮ ನಿರ್ವಹಣಾ ವ್ಯವಸ್ಥೆಗಳನ್ನು ಅಳವಡಿಸಲು ಸಾಧ್ಯವಾಗಲಿದೆ ಎಂದು ಕೇಂದ್ರ ಉಕ್ಕು ಸಚಿವ ರಾಮ್ ಚಂದ್ರ ಪ್ರಸಾದ್ ಸಿಂಗ್ ಇತ್ತೀಚೆಗೆ ಲೋಕಸಭೆಗೆ ಮಾಹಿತಿ ನೀಡಿದ್ದರು.  RINLಕಳೆದ 10 ವರ್ಷಗಳಲ್ಲಿ ತನ್ನ ಲಾಭವನ್ನು ಹೆಚ್ಚಿಸಿಕೊಂಡಿಲ್ಲ ಹಾಗೂ ಇತರ ಒಟ್ಟು ನಷ್ಟ 7,122.25 ಕೋಟಿ ರೂ. ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದ್ದರು.

Retail Inflation: 17 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ; ಮಾರ್ಚ್ ನಲ್ಲಿ ಶೇ.6.95ಕ್ಕೆ ಏರಿಕೆ

ಭಾರತೀಯ ಜೀವ ವಿಮಾ ನಿಗಮ( LIC) ಐಪಿಒ ಕೂಡ ಈ ತಿಂಗಳ ಕೊನೆಯಲ್ಲಿ ನಡೆಯೋ ನಿರೀಕ್ಷೆಯಿದೆ. ಸರ್ಕಾರ ಶೇ.5ರಷ್ಟು ಷೇರುಗಳನ್ನು ಮಾರಾಟ ಮಾಡೋ ಮೂಲಕ ಸುಮಾರು 60,000 ಕೋಟಿ ರೂ. ಸಂಗ್ರಹಿಸೋ ಗುರಿ ಹೊಂದಿದೆ. ಕಳೆದ ತಿಂಗಳಷ್ಟೇ ಸರ್ಕಾರ ಎಲ್ಐಸಿ ಐಪಿಒ ಕರಡು ಪ್ರತಿಯನ್ನು ಮಾರುಕಟ್ಟೆ ನಿಯಂತ್ರಕ ಸೆಬಿಗೆ ಸಲ್ಲಿಕೆ ಮಾಡಿ ಅನುಮತಿ ಪಡೆದಿತ್ತು. ಆದ್ರೆ ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಸರ್ಕಾರ ಐಪಿಒ ಮುಂದೂಡಿದೆ. ಮೇ 12ರ ತನಕ ಐಪಿಒ ನಡೆಸಲು ಸರ್ಕಾರಕ್ಕೆ ಕಾಲವಾಕಾಶವಿದೆ. ಇದರ ಬಳಿಕ ಮತ್ತೆ ಎಲ್ ಐಸಿ ಐಪಿಒ ನಡೆಸಬೇಕೆಂದ್ರೆ ಸರ್ಕಾರ ಇನ್ನೊಮ್ಮೆ ಹೊಸದಾಗಿ ಕರಡು ಪ್ರತಿಯನ್ನು ಸೆಬಿಗೆ ಸಲ್ಲಿಕೆ ಮಾಡಬೇಕು. 
 

click me!