ಇಲಾಖೆ ಹೊಸ ಆದೇಶ: NRIಗಳ ಆಸ್ತಿ ನೋಂದಣಿ ಮೋಸಕ್ಕೆ ಬ್ರೇಕ್‌!

By Kannadaprabha NewsFirst Published Feb 13, 2020, 11:31 AM IST
Highlights

20% ಟಿಡಿಎಸ್‌ ಕಟ್ಟದೆ ಎನ್‌ಆರ್‌ಐಗಳ ವಂಚನೆ ಹಿನ್ನೆಲೆ| ಎನ್ನಾರೈಗಳ ಆಸ್ತಿ ನೋಂದಣಿ ಮೋಸಕ್ಕೆ ಬ್ರೇಕ್‌| ನೋಂದಣಿಗೆ ಎನ್ನಾರೈ ಹೌದು/ಅಲ್ಲ ಪತ್ರ ಕಡ್ಡಾಯ

ಬೆಂಗಳೂರು[ಫೆ.13]: ಅನಿವಾಸಿ ಭಾರತೀಯರು (ಎನ್‌ಆರ್‌ಐ) ಭಾರತದಲ್ಲಿರುವ ತಮ್ಮ ಆಸ್ತಿ ಮಾರಾಟದ ವೇಳೆ ತಾವು ಎನ್‌ಆರ್‌ಐ ಎಂಬುದನ್ನು ಮರೆಮಾಚಿ ತೆರಿಗೆ ಇಲಾಖೆಗೆ ಪಾವತಿಸಬೇಕಾಗಿದ ಶೇ.20ರಷ್ಟುಟಿಡಿಎಸ್‌ ವಂಚಿಸುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆ ಆಸ್ತಿ ನೋಂದಣಿ ವೇಳೆ ಪ್ರತಿಯೊಬ್ಬರಿಂದಲೂ ತಾವು ಎನ್‌ಆರ್‌ಐ ಹೌದು ಅಥವಾ ಅಲ್ಲ ಎಂಬುದರ ಬಗ್ಗೆ ಪ್ರಮಾಣಪತ್ರ ಸ್ವೀಕರಿಸುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದೆ.

ಭಾರತೀಯ ನಿವಾಸಿ ಮತ್ತೊಬ್ಬ ನಿವಾಸಿಗೆ 50 ಲಕ್ಷ ರು.ಗಿಂತ ಹೆಚ್ಚು ಮೌಲ್ಯದ ಆಸ್ತಿ ಮಾರಾಟ ಮಾಡುವ ವೇಳೆ ಖರೀದಿದಾರ ಮಾರಾಟ ಮಾಡಿದ ವ್ಯಕ್ತಿಗೆ ನೀಡಿದ ಮೊತ್ತದಲ್ಲಿ ಶೇ.1ರಷ್ಟನ್ನು ಟಿಡಿಎಸ್‌ ಮೊತ್ತವಾಗಿ ಕಡಿತಗೊಳಿಸಬೇಕು. ಅದೇ ರೀತಿ ಎನ್‌ಆರ್‌ಐ ವ್ಯಕ್ತಿಯೊಬ್ಬರು ದೇಶದಲ್ಲಿರುವ ಅನ್ಯರ ಆಸ್ತಿಯನ್ನು ಖರೀದಿಸಿದಾಗ ಶೇ.20ರಷ್ಟುಟಿಡಿಎಸ್‌ ಹಣ ಕಡಿತಗೊಳಿಸಬೇಕು ಎಂದು ಆದಾಯ ತೆರಿಗೆ ಕಾಯಿದೆ 1961ರ ನಿಯಮದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಆದರೆ, ಇತ್ತೀಚೆಗೆ ಎನ್‌ಆರ್‌ಐ ವ್ಯಕ್ತಿಗಳು ಸಹ ತಾವು ಎನ್‌ಆರ್‌ಐ ಎಂಬುದನ್ನು ಮರೆಮಾಚಿ ಹಳೆಯ ಪಾನ್‌ಕಾರ್ಡ್‌, ಆಧಾರ್‌ ಕಾರ್ಡ್‌ ನೀಡಿ ಶೇ.1ರಷ್ಟುಟಿಡಿಎಸ್‌ ಪಾವತಿ ಮಾಡುತ್ತಿದ್ದಾರೆ. ಈ ಮೂಲಕ ಆದಾಯ ತೆರಿಗೆ ಇಲಾಖೆಗೆ ಭಾರೀ ಪ್ರಮಾಣದ ತೆರಿಗೆ ವಂಚನೆ ಮಾಡುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆ ಪ್ರತಿ ಆಸ್ತಿ ನೋಂದಣಿ ವೇಳೆಯಲ್ಲೂ ಆಸ್ತಿ ಮಾರಾಟ ಮಾಡುವ ಅಥವಾ ಖರೀದಿಸುವ ವ್ಯಕ್ತಿಯಿಂದಲೂ ಅವರು ಎನ್‌ಆರ್‌ಐ ಹೌದೇ ಅಥವಾ ಅಲ್ಲವೇ ಎಂಬ ಬಗ್ಗೆ ಪ್ರಮಾಣಪತ್ರ ಸ್ವೀಕರಿಸಬೇಕು ಎಂದು ಫೆ.12, 2019ರಂದು ಆದಾಯ ತೆರಿಗೆ ಇಲಾಖೆ ಆಯುಕ್ತರು (ಅಂತಾರಾಷ್ಟ್ರೀಯ ತೆರಿಗೆ) ಆದೇಶ ಹೊರಡಿಸಿದ್ದರು. ಇದರಂತೆ ಇತ್ತೀಚೆಗೆ ಆದೇಶ ಹೊರಡಿಸಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರು, ಇನ್ನು ಮುಂದೆ ಆಸ್ತಿಗಳ ನೋಂದಣಿ ವೇಳೆ ಎನ್‌ಆರ್‌ಐ ಹೌದು ಅಥವಾ ಅಲ್ಲ ಎಂಬ ಬಗ್ಗೆ ಪ್ರಮಾಣ ಪತ್ರ ಸ್ವೀಕರಿಸಬೇಕು ಎಂದು ಎಲ್ಲಾ ಉಪ ನೋಂದಣಾಧಿಕಾರಿಗಳಿಗೆ ಸುತ್ತೋಲೆ ರವಾನಿಸಿದ್ದಾರೆ.

ಸುಳ್ಳು ಮಾಹಿತಿ ಕೊಟ್ಟರೆ ಕ್ರಿಮಿನಲ್‌ ಕೇಸು

ಈವರೆಗೆ ಸಾಕಷ್ಟುಜನ ಎನ್‌ಆರ್‌ಐಗಳು ತಪ್ಪು ಮಾಹಿತಿ ನೀಡಿ ಟಿಡಿಎಸ್‌ ಪಾವತಿಸದೆ ವಂಚಿಸುತ್ತಿದ್ದಾರೆ. ಅವರು ಎನ್‌ಆರ್‌ಐ ಹೌದು ಅಥವಾ ಎಲ್ಲ ಎಂಬುದನ್ನು ಪರಿಶೀಲಿಸಲು ಉಪ ನೋಂದಣಾಧಿಕಾರಿಗಳ ಬಳಿ ಯಾವುದೇ ಆಯ್ಕೆಗಳಿಲ್ಲ. ಇನ್ನು ಮುಂದೆ ಕನಿಷ್ಠ ಪ್ರಮಾಣಪತ್ರ ಪಡೆದರೆ ಸುಳ್ಳು ಮಾಹಿತಿ ನೀಡಿದ ಆಧಾರದ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅವಕಾಶ ಇರುತ್ತದೆ. ಈ ಭಯಕ್ಕಾದರೂ ವಂಚನೆಗಳು ಕಡಿಮೆಯಾಗಲಿವೆ ಎಂಬುದು ತೆರಿಗೆ ಇಲಾಖೆಯ ಈ ಕ್ರಮದ ಹಿಂದಿರುವ ಉದ್ದೇಶ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನೋಂದಣಿ ಇಲಾಖೆ ಹೊಸ ಆದೇಶ

- ಭಾರತೀಯ ನಿವಾಸಿಯಿಂದ ಮತ್ತೊಬ್ಬ ನಿವಾಸಿ .50 ಲಕ್ಷಕ್ಕಿಂತ ಮೇಲ್ಪಟ್ಟಆಸ್ತಿ ಖರೀದಿಸಿದರೆ, ಹಣ ಪಾವತಿಸುವಾಗ ಶೇ.1ರಷ್ಟುಟಿಡಿಎಸ್‌ ಕಡಿತಗೊಳಿಸಬೇಕು

- ಎನ್‌ಆರ್‌ಐ ವ್ಯಕ್ತಿ ದೇಶದಲ್ಲಿ ಆಸ್ತಿ ಖರೀದಿಸಿದರೆ ಶೇ.20 ಟಿಡಿಎಸ್‌ ಕಡಿತಗೊಳಿಸಿ ಮಾಲೀಕನಿಗೆ ಹಣ ಪಾವತಿಸಬೇಕು ಎಂದು ತೆರಿಗೆ ನಿಯಮ ಹೇಳುತ್ತದೆ

- ಆದರೆ ಎನ್‌ಆರ್‌ಐ ವ್ಯಕ್ತಿಗಳು ತಾವು ಎನ್‌ಆರ್‌ಐ ಎಂಬುದನ್ನು ಮರೆಮಾಚಿ ಹಳೆಯ ದಾಖಲೆಗಳನ್ನು ತೋರಿಸಿ ಶೇ.1 ಟಿಡಿಎಸ್‌ ಕಡಿತ ಮಾಡುತ್ತಿದ್ದರು

- ಅದಕ್ಕೆ ಕಡಿವಾಣ ಹಾಕಲು ತೆರಿಗೆ ಇಲಾಖೆಯು ಆಸ್ತಿ ನೋಂದಣಿ ವೇಳೆ ಎನ್‌ಆರ್‌ಐ ಹೌದೇ ಅಥವಾ ಅಲ್ಲವೇ ಎಂಬ ಪ್ರಮಾಣ ಪತ್ರ ಸ್ವೀಕರಿಸಲು ಹೇಳಿದೆ

click me!