ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಭಾರೀ ಏರಿಕೆ| ತೆರಿಗೆ ಕಡಿತ ಮಾಡಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಸಂಭವ?
ನವದೆಹಲಿ(ಮಾ.02): ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಭಾರೀ ಏರಿಕೆಯಿಂದ ಜನ ಕಂಗೆಟ್ಟಿರುವ ಬೆನ್ನಲ್ಲೇ, ಶುಭ ಸುದ್ದಿಯೊಂದನ್ನು ನೀಡಲು ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲಿನ ತೆರಿಗೆಗಳನ್ನು ಕಡಿತಗೊಳಿಸಿ, ಆ ಮೂಲಕ ಈ ಎರಡೂ ಇಂಧನಗಳ ಬೆಲೆಗಳ ಇಳಿಕೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ಈಗಾಗಲೇ ರಾಜ್ಯ ಸರ್ಕಾರಗಳು ಮತ್ತು ತೈಲ ಕಂಪನಿಗಳು ಮತ್ತು ಇಂಧನ ಇಲಾಖೆಯೊಂದಿಗೆ ಸಮಾಲೋಚನೆಯಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ.
ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಸ್ಥಿರವಾಗಿಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ಬಾರಿ ತೈಲಗಳ ಮೇಲಿನ ತೆರಿಗೆ ಇಳಿಸಿದ ಬಳಿಕ ಮತ್ತೆ ತೆರಿಗೆ ಹೆಚ್ಚಿಸಲು ಸರ್ಕಾರ ಇಚ್ಛಿಸುತ್ತಿಲ್ಲ. ಹೀಗಾಗಿ ಈ ಸಂಬಂಧ ಕೇಂದ್ರ ಸರ್ಕಾರ ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದೆ. ಮಾಚ್ರ್ ಮಧ್ಯಂತರ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ತನ್ಮೂಲಕ ಮಾಚ್ರ್ ಮಧ್ಯಂತರ ಅವಧಿಯಲ್ಲಿ ಈ ಎರಡೂ ತೈಲಗಳ ಬೆಲೆ ಇಳಿಕೆಯಾಗುವ ಸುಳಿವು ಲಭ್ಯವಾಗಿದೆ.
ಕೊರೋನಾ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಭಾರೀ ಇಳಿಕೆಯಾಗಿತ್ತು. ಆದರೆ ಲಾಕ್ಡೌನ್ ಕಾರಣಕ್ಕೆ ದೇಶದಲ್ಲಿ ಯಾವುದೇ ಆರ್ಥಿಕ ಚಟುವಟಿಕೆಗಳು ಇರಲಿಲ್ಲ. ಹೀಗಾಗಿ ತೈಲ ಬೆಲೆ ಇಳಿಕೆ ಲಾಭವನ್ನು ಕೇಂದ್ರ ಸರ್ಕಾರ ಗ್ರಾಹಕರಿಗೆ ವರ್ಗಾಯಿಸದೇ ತೆರಿಗೆಯನ್ನು ಹೆಚ್ಚಿಸಿತ್ತು.