
ನವದೆಹಲಿ(ಅ.22): ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಲವೆಡೆ ಪ್ರತಿ ಕೆ.ಜಿ.ಗೆ 100 ರು. ದಾಟಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ವಿದೇಶಗಳಿಂದ ಈರುಳ್ಳಿ ಆಮದಿಗೆ ವಿಧಿಸಿರುವ ಷರತ್ತುಗಳನ್ನು ಸಡಿಲಿಸಿದೆ. ಇದರಿಂದ ದೇಸೀ ಮಾರುಕಟ್ಟೆಗೆ ಹೆಚ್ಚು ಈರುಳ್ಳಿ ಪೂರೈಕೆಯಾಗಿ, ಬೆಲೆ ಇಳಿಮುಖವಾಗಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.
ಈ ಕುರಿತು ಬುಧವಾರ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ, ‘ವಿದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳುವುದಕ್ಕೆ ಡಿ.15ರವರೆಗೆ ಅನ್ವಯಿಸುವಂತೆ ಹಲವಾರು ಷರತ್ತುಗಳನ್ನು ಸಡಿಲಿಸಲಾಗಿದೆ. ಜೊತೆಗೆ, ಸರ್ಕಾರದ ಬಳಿಯಿರುವ ಹೆಚ್ಚುವರಿ ಈರುಳ್ಳಿ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಸದ್ಯದಲ್ಲೇ ಸುಮಾರು 37 ಲಕ್ಷ ಟನ್‌ನಷ್ಟುಖಾರಿಫ್ ಈರುಳ್ಳಿ ಬೆಳೆ ಮಾರುಕಟ್ಟೆಗೆ ಬರಲಾರಂಭಿಸುತ್ತದೆ. ಅದರಿಂದಲೂ ಬೆಲೆ ಇಳಿಕೆಯಾಗಲಿದೆ’ ಎಂದು ಹೇಳಿದೆ.
ವಿದೇಶಗಳಲ್ಲಿರುವ ಭಾರತೀಯ ಹೈಕಮಿಷನರ್‌ಗಳಿಗೆ ಆಯಾ ದೇಶದ ಪ್ರಮುಖ ಈರುಳ್ಳಿ ರಫ್ತುದಾರರನ್ನು ಸಂಪರ್ಕಿಸಿ ಭಾರತಕ್ಕೆ ಪೂರೈಕೆ ಮಾಡುವಂತೆ ಒತ್ತಾಯಿಸಲು ಸೂಚಿಸಲಾಗಿದೆ. ಈಗ ಭಾರತಕ್ಕೆ ಕಳಿಸುವ ಈರುಳ್ಳಿಗೆ ಅವರು ಫ್ಯೂಮಿಗೇಶನ್ ಮಾಡುವ ಅಗತ್ಯವಿಲ್ಲ. ಆಮದುದಾರರೇ ಫ್ಯೂಮಿಗೇಶನ್ ಮಾಡಿಕೊಳ್ಳಲಿದ್ದಾರೆ. ಜೊತೆಗೆ ರಫ್ತುದಾರರು ತಪಾಸಣಾ ಶುಲ್ಕ ಭರಿಸುವ ಅಗತ್ಯವಿಲ್ಲ ಎಂದೂ ತಿಳಿಸಿದೆ.
ಆಗಸ್ಟ್‌ನಿಂದಲೇ ಈರುಳ್ಳಿ ಬೆಲೆ ಏರಿಕೆಯಾಗಲು ಆರಂಭಿಸಿದ್ದನ್ನು ಮನಗಂಡು ಕೇಂದ್ರ ಸರ್ಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸಿತ್ತು. ಆದರೂ ಭಾರಿ ಮಳೆಯಿಂದಾಗಿ ಪ್ರಮುಖ ಈರುಳ್ಳಿ ಉತ್ಪಾದನಾ ರಾಜ್ಯಗಳಾಗಿರುವ ಕರ್ನಾಟಕ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಜೊತೆಗೆ ಕೊಯ್ಲು ಮಾಡಿದ ಈರುಳ್ಳಿಯೂ ಕೊಳೆತುಹೋಗಿದೆ. ಹೀಗಾಗಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.