
ನವದೆಹಲಿ(ಅ.22): ಕೊರೋನಾ ವೈರಸ್‌ನಿಂದ ನಲುಗಿದ್ದ ದೇಶದ ಆರ್ಥಿಕತೆ ಚೇತರಿಕೆಯ ಹೊಸ್ತಿಲಲ್ಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಬುಧವಾರ ಹೇಳಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಆರ್ಥಿಕ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಕೈಗೊಂಡ ಫಲವಾಗಿ ನಾವು ಆರ್ಥಿಕ ಪುನರುತ್ಥಾನದ ಹೊಸ್ತಿಲಲ್ಲಿದ್ದೇವೆ. ಪ್ರಗತಿ ಸಾಧಿಸಬೇಕಾದರೆ ಹಣಕಾಸು ಸಂಸ್ಥೆಗಳಿಗೆ ಸಾಕಷ್ಟುಬಂಡವಾಳ ಲಭ್ಯವಾಗುವುದು ಅತ್ಯಂತ ಮಹತ್ವದ್ದಾಗಿದೆ. ಹಲವು ಹಣಕಾಸು ಸಂಸ್ಥೆಗಳು ಈಗಾಗಲೇ ಬಂಡವಾಳವನ್ನು ಕ್ರೋಢೀಕರಿಸಿಕೊಂಡಿವೆ. ಇತರ ಸಂಸ್ಥೆಗಳು ಮುಂಬರುವ ದಿನಗಳಲ್ಲಿ ಬಂಡವಾಳ ಸಂಗ್ರಹದ ನಿರೀಕ್ಷೆಯಲ್ಲಿವೆ ಎಂದು ಹೇಳಿದ್ದಾರೆ.
ಇದೇ ವೇಳೆ ಕೊರೋನಾ ಸಂಬಂಧಿತ ಸವಾಲುಗಳನ್ನು ಎದುರಿಸಲು ಭಾರತ ಹಣಕಾಸು ವಿಸ್ತರಣೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ. ಕೊರೋನಾ ನಿಯಂತ್ರಣಕ್ಕೆ ಬಂದ ಬಳಿಕ ಸರ್ಕಾರ ಹಣಕಾಸು ನೀತಿಗಳನ್ನು ಜಾರಿಗೊಳಿಸಲಿದೆ ಎಂದು ಹೇಳಿದ್ದಾರೆ.
ಕೇಂದ್ರದಿಂದ ಇನ್ನೊಂದು ಆರ್ಥಿಕ ಪ್ಯಾಕೇಜ್?
ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಇಳಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕತೆಯ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವಿಧ ವಲಯಗಳು ಮತ್ತು ಸಚಿವಾಲಯಗಳಿಂದ ಸರ್ಕಾರ ಸಲಹೆಗಳನ್ನು ಪಡೆದುಕೊಂಡಿದೆ ಎಂದು ಹಣಕಾಸು ಸಚಿವಾಲಯದ ಕಾರ್ಯದರ್ಶಿ ತರುಣ್ ಬಜಾಜ್ ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.