ರಿಯಲ್ ಎಸ್ಟೇಟ್ ವಲಯಕ್ಕೆ ಶುಭಸುದ್ದಿ;ಸ್ವಂತ ಮನೆ ಖರೀದಿಗೆ ಹೆಚ್ಚಿದ ಭಾರತೀಯರ ಒಲವು!

By Suvarna NewsFirst Published Feb 22, 2023, 6:16 PM IST
Highlights

ಸ್ವಂತ ಮನೆ ಹೊಂದಬೇಕೆಂಬುದು ಎಲ್ಲರ ಬದುಕಿನ ಬಹುದೊಡ್ಡ ಕನಸಾಗಿರುತ್ತದೆ. ಯಾವುದೋ ಕಾರಣಗಳಿಂದ ಈ ಕನಸು ನನಸು ಮಾಡಿಕೊಳ್ಳೋದು ಕೆಲವರಿಗೆ ಕಷ್ಟವಾಗುತ್ತದೆ. ಆದರೆ, ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ಶೇ.45ರಷ್ಟು ಭಾರತೀಯರು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಹೊಸ ಮನೆಗೆ ಶಿಫ್ಟ್ ಆಗುವ ಯೋಚನೆಯಲ್ಲಿದ್ದಾರೆ ಎಂಬುದು ತಿಳಿದು ಬಂದಿದೆ. 

ನವದೆಹಲಿ (ಫೆ.22): ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಸುಮಾರು ಶೇ.45ರಷ್ಟು ಭಾರತೀಯರು ಹೊಸ ಮನೆಗೆ ಶಿಫ್ಟ್ ಆಗುವ ಪ್ಲ್ಯಾನ್ ಹೊಂದಿದ್ದಾರೆ. ಹಾಗೆಯೇ ಬಹುತೇಕರು ಬಾಡಿಗೆ ಮನೆ ಬದಲು ಸ್ವಂತ ಮನೆ ಖರೀದಿಸುವ ಯೋಚನೆ ಹೊಂದಿದ್ದಾರೆ ಎಮದು ಹೊಸ ಸಮೀಕ್ಷೆಯೊಂದು ಹೇಳಿದೆ. 'ಭಾರತದ ಧ್ವನಿಗಳು: ಭವಿಷ್ಯದಲ್ಲಿ ಜನರು ಹೇಗೆ ಬದುಕುತ್ತಾರೆ, ಕಾರ್ಯನಿರ್ವಹಿಸುತ್ತಾರೆ ಹಾಗೂ ಶಾಪಿಂಗ್ ಮಾಡುತ್ತಾರೆ?' ಎಂಬ ವರದಿಯೊಂದನ್ನು ಸಿಬಿಆರ್ ಇ ಇಂಡಿಯಾ ಬಿಡುಗಡೆಗೊಳಿಸಿದೆ. ಸಮೀಕ್ಷೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಶೇ.31ರಷ್ಟಿದ್ದರೆ ಈ ವರ್ಷ ಶೇ.44ರಷ್ಟು ಜನರು ಹೊಸ ಮನೆಗೆ ಹೋಗುವ ಬಯಕೆ ಹೊಂದಿದ್ದಾರೆ. ಇದು ಜಾಗತಿಕ ಹಾಗೂ ಏಷ್ಯಾ-ಫೆಸಿಫಿಕ್ ಪ್ರಾಂತ್ಯದಲ್ಲೇ ಅತೀಹೆಚ್ಚಿನದ್ದಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಜಾಗತಿಕ ಸಮೀಕ್ಷೆಗೆ 20 ಸಾವಿರಕ್ಕೂ ಅಧಿಕ ಜನರಿಂದ ಮಾಹಿತಿ ಸಂಗ್ರಹಿಸಲಾಗಿತ್ತು. ಇದರಲ್ಲಿ ಭಾರತದ 1,500 ಜನರಿಂದ ಸಂಗ್ರಹಿಸಿದ ಮಾಹಿತಿಯೂ ಸೇರಿದೆ. 18ನೇ ವಯಸ್ಸಿನಿಂದ 57ನೇ ವಯಸ್ಸಿನ ತನಕದ ವಿವಿಧ ವಯೋಮಾನದವರಿಂದ ಸ್ಯಾಂಪಲ್ (ಮಾಹಿತಿ) ಸಂಗ್ರಹಿಸಲಾಗಿದೆ. ಇನ್ನು ಈ ಸಮೀಕ್ಷೆಯಲ್ಲಿ 18-25ನೇ ವಯೋಮಾನದವರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಹೊಸ ಮನೆಗೆ ಶಿಫ್ಟ್  ಆಗುವ ಕನಸು ಕಾಣುತ್ತಿದ್ದಾರೆ.  58 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯೋಮಾನದವರು ಹೊಸ ಮನೆ ಖರೀದಿ ಬಗ್ಗೆ ಅಷ್ಟೊಂದು ಆಸಕ್ತಿ ತೋರಿಲ್ಲ.

2016 ನೇ ಸಾಲಿನ ಸಮೀಕ್ಷೆಗೆ ಹೋಲಿಸಿದ್ರೆ ಈ ಬಾರಿ ಟ್ರೆಂಡ್ ಬದಲಾಗಿದೆ ಎಂದು ಸಿಬಿಆರ್ ಇ ತಿಳಿಸಿದೆ. ಜಗತ್ತಿನಲ್ಲಿ ಶೇ.70ರಷ್ಟು ಜನರು ಬಾಡಿಗೆ ಮನೆ ಬದಲು ಸ್ವಂತ ಮನೆ ಖರೀದಿಗೆ ಮನಸ್ಸು ಮಾಡಿದ್ದಾರೆ ಎಂದು ಸಿಬಿಆರ್ ಇ (CBRE) ಹೇಳಿದೆ. 2016ರಲ್ಲಿ ಶೇ.68ರಷ್ಟು ಜನರು ಬಾಡಿಗೆ ಮನೆಯನ್ನೇ ಆಯ್ಕೆ ಮಾಡಿಕೊಂಡಿದ್ದರು. 42ರಿಂದ 57ನೇ ವಯಸ್ಸಿನ ಜನರನ್ನು ಹೊರತುಪಡಿಸಿ ಉಳಿದ ಎಲ್ಲ ವರ್ಗದವರು ನಗರ ಕೇಂದ್ರಗಳಿಗೆ ಸಮೀಪವಿರುವ ಸ್ಥಳಗಳಲ್ಲಿ ಮನೆ ಖರೀದಿಸಲು ಆಸಕ್ತಿ ತೋರಿದ್ದಾರೆ. ಇನ್ನು 42ರಿಂದ 57ನೇ ವಯಸ್ಸಿನ ಜನರು ದೂರದ ಸ್ಥಳಗಳನ್ನು ಹೆಚ್ಚು ಆಯ್ಕೆ ಮಾಡಿದ್ದಾರೆ. ಅಲ್ಲದೆ, ವೃತ್ತಿಯಲ್ಲಿ ಹೆಚ್ಚಿನ ಪರಿಣತಿ ಸಾಧಿಸಿರುವ ಕಾರಣ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಅನ್ಯರಾಷ್ಟ್ರಗಳಿಗೆ ತೆರಳುವ ಪ್ಲ್ಯಾನ್ ಕೂಡ ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. 

Latest Videos

ಸಿಂಗಾಪುರಕ್ಕೂ ಮಾಡಿ ಫೋನ್‌ ಪೇ, ಪೇಟಿಎಂ: ಹೊಸ ಸೇವೆಗೆ ಪ್ರಧಾನಿ ಮೋದಿ ಚಾಲನೆ

ದುಬಾರಿ ಅಪಾರ್ಟ್ ಮೆಂಟ್ ಮಾರಾಟ 
ಮುಂಬೈ ವರ್ಲಿಯ ಐಷಾರಾಮಿ ಟವರ್ ತ್ರಿ ಸಿಕ್ಸಟಿ ವೆಸ್ಟ್ ನಲ್ಲಿ  ಪೆಂಟ್ ಹೌಸ್ ಅನ್ನು ಉದ್ಯಮಿಯೊಬ್ಬರು 240 ಕೋಟಿ ರೂ.ಗೆ ಖರೀದಿಸಿದ್ದಾರೆ. ಇದು ಭಾರತದ ಅತ್ಯಂತ ದುಬಾರಿ ಅಪಾರ್ಟ್ ಮೆಂಟ್ ಮಾರಾಟ ಎಂದು ಕೂಡ ಹೇಳಲಾಗಿದೆ. ವೆಲ್ ಸ್ಪುನ್ ಗ್ರೂಪ್ ಮುಖ್ಯಸ್ಥ ಬಿ.ಕೆ. ಗೋಯೆಂಕ ವರ್ಲಿಯ ಅನ್ನಿ ಬೆಸೆಂಟ್ ರಸ್ತೆಯಲ್ಲಿ ಟ್ರಿಪ್ಲೆಕ್ಸ್ ಖರೀದಿಸಿದ್ದಾರೆ. ಮಾರುಕಟ್ಟೆ ಮೂಲಗಳ ಪ್ರಕಾರ ಈ ಪೆಂಟ್ ಹೌಸ್  ಗಂಗನಚುಂಬಿ ಕಟ್ಟಡದ ಬಿ ಟವರ್ ನ  63, 64  ಹಾಗೂ 65ನೇ ಮಹಡಿಗಳಲ್ಲಿದೆ. ಈ ಪೆಂಟ್ ಹೌಸ್ ಸುಮಾರು 30,000 ಚದರ ಅಡಿಗಳಲ್ಲಿ ಹರಡಿದೆ. ಸರ್ಕಾರದ ಸ್ಲಂ ಪುನರ್ವಸತಿ ಯೋಜನೆ ಅಡಿಯಲ್ಲಿ ಸ್ಲಂ ಕುಟುಂಬಗಳಿಗೆ ನೀಡುವ 300 ಚದರ ಅಡಿ ಉಚಿತ ಬಾಡಿಗೆ ಮನೆಯ ಗಾತ್ರಕ್ಕಿಂತ ಈ ಪೆಂಟ್ ಹೌಸ್ 100 ಪಟ್ಟು ದೊಡ್ಡದಿದೆ. ಆಸ್ತಿ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ ಬುಧವಾರ ನೋಂದಣಿ ನಡೆದಿದ್ದು, ಖರೀದಿದಾರರು ಪೆಂಟ್ ಹೌಸ್ ನಲ್ಲಿ ನೆಲೆಸಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

SBI Alert:ನಿಮ್ಮ ಮೊಬೈಲ್ ಗೆ ಈ ಮೆಸೇಜ್ ಬಂದಿದ್ರೆ ಎಚ್ಚರ, ಯಾವುದೇ ಕಾರಣಕ್ಕೂ ಲಿಂಕ್ ಕ್ಲಿಕ್ ಮಾಡ್ಬೇಡಿ!

 

click me!