
ಮುಂಬೈ(ಜೂ.28): ಭಾರತದಲ್ಲಿ ಬ್ರೋಕರೇಜ್ ಸಂಸ್ಥೆಯಾಗಿ ಕಾರ್ಯಾಚರಣೆ ಪ್ರಾರಂಭಿಸಲು ಜಿಯೋ ಬ್ಲ್ಯಾಕ್‌ರಾಕ್ ಬ್ರೋಕಿಂಗ್ ಪ್ರೈವೇಟ್ ಲಿಮಿಟೆಡ್ (ಜಿಯೋಬ್ಲಾಕ್‌ರಾಕ್ ಬ್ರೋಕಿಂಗ್) ಸೆಬಿಯಿಂದ ಅನುಮೋದನೆ ಪಡೆದಿದೆ. ಅಂದಹಾಗೆ ಇದು ಜಿಯೋ ಬ್ಲ್ಯಾಕ್‌ರಾಕ್ ಇನ್ವೆಸ್ಟ್‌ಮೆಂಟ್ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್ (ಜಿಯೋಬ್ಲಾಕ್‌ರಾಕ್ ಇನ್ವೆಸ್ಟ್‌ಮೆಂಟ್ ಅಡ್ವೈಸರ್ಸ್)ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಆಗಿದೆ. ಕೈಗೆಟುಕುವ, ಪಾರದರ್ಶಕ, ಹಾಗೂ ತಂತ್ರಜ್ಞಾನ ಚಾಲಿತ ಅನುಷ್ಠಾನ ಸಾಮರ್ಥ್ಯ ಇರುವಂಥದ್ದನ್ನು ಭಾರತೀಯ ಹೂಡಿಕೆದಾರರಿಗೆ ತರಬೇಕು ಎಂಬ ಗುರಿಯನ್ನು ಇರಿಸಿಕೊಂಡಿದೆ.
ಜಿಯೋ ಬ್ಲ್ಯಾಕ್‌ರಾಕ್ ಇನ್ವೆಸ್ಟ್‌ಮೆಂಟ್ ಅಡ್ವೈಸರ್ಸ್ ಎಂಬುದು ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಹಾಗೂ ಬ್ಲ್ಯಾಕ್‌ರಾಕ್ ಇಂಕ್ ಮಧ್ಯದ 50:50 ಜಂಟಿ ಉದ್ಯಮ. ಜಿಯೋ ಬ್ಲ್ಯಾಕ್‌ರಾಕ್ ಅಸೆಟ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಜಿಯೋಬ್ಲಾಕ್‌ರಾಕ್ ಇನ್ವೆಸ್ಟ್‌ಮೆಂಟ್ ಅಡ್ವೈಸರ್ಸ್ ಕಾರ್ಯಾಚರಣೆ ಪ್ರಾರಂಭಿಸಲು ಇತ್ತೀಚೆಗೆ ಪಡೆದ ನಿಯಂತ್ರಕ ಅನುಮೋದನೆ ಜೊತೆಗೆ, ಬ್ರೋಕಿಂಗ್ ಪರವಾನಗಿಯನ್ನು ಪಡೆಯುವುದರಿಂದ ಜಿಯೋಬ್ಲಾಕ್‌ರಾಕ್ ಜಂಟಿ ಉದ್ಯಮವು ಭಾರತದಲ್ಲಿ ಸಮಗ್ರ ಹೂಡಿಕೆ ಪರಿಹಾರಗಳನ್ನು ನೀಡಲು ಸಾಧ್ಯವಾಗುತ್ತದೆ.
ಜಿಯೋಬ್ಲ್ಯಾಕ್‌ರಾಕ್ ಇನ್ವೆಸ್ಟ್‌ಮೆಂಟ್ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಕ್ ಪಿಲ್ ಗ್ರೆಮ್ ಮಾತನಾಡಿ,”ಸೆಬಿಯಿಂದ ಅಂತಿಮ ಅನುಮೋದನೆ ಪಡೆದಿರುವುದಕ್ಕೆ ನಮಗೆ ಸಂತೋಷವಾಗಿದೆ, ಇದು ಉಳಿತಾಯ ಮಾಡುವ ರಾಷ್ಟ್ರ ಎಂದೆನಿಸಿದ ದೇಶದಿಂದ ಹೂಡಿಕೆದಾರರ ರಾಷ್ಟ್ರವಾಗಿ ಭಾರತದ ನಿರಂತರ ವಿಕಸನಕ್ಕೆ ಕೊಡುಗೆ ನೀಡುವತ್ತ ನಮ್ಮನ್ನು ಹತ್ತಿರವಾಗಿಸುತ್ತದೆ. ನಾವು ರೀಟೇಲ್ ಹೂಡಿಕೆದಾರರಿಗೆ ವೈಯಕ್ತಿಕಗೊಳಿಸಿದ ಸಲಹೆಯನ್ನು ನೀಡಲು ಸಾಧ್ಯವಾಗುತ್ತದೆ. ಈಗ ಬ್ರೋಕರೇಜ್‌ನೊಂದಿಗೆ, ನಾವು ಸ್ವಯಂ-ನಿರ್ದೇಶಿತ ಹೂಡಿಕೆದಾರರಿಗೆ ಕಾರ್ಯಗತಗೊಳಿಸುವ ಪ್ಲಾಟ್ ಫಾರ್ಮ್ ಸಹ ತರುತ್ತೇವೆ,” ಎಂದಿದ್ದಾರೆ.
ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಿತೇಶ್ ಸೇಥಿಯಾ ಮಾತನಾಡಿ, "ಇದು ನಮಗೆ ರೋಮಾಂಚಕಾರಿ ಸಮಯ. ಅದು ಕೂಡ ಜಿಯೋಬ್ಲ್ಯಾಕ್‌ರಾಕ್‌ನ ಆಸ್ತಿ ನಿರ್ವಹಣಾ ವಿಭಾಗದ ಅಂಗವಾಗಿ ಮಾರುಕಟ್ಟೆಗೆ ನವೀನ ಮ್ಯೂಚುಯಲ್ ಫಂಡ್‌ಗಳನ್ನು ಪರಿಚಯಿಸುತ್ತಿರುವಾಗ ಮತ್ತು ಜಿಯೋಬ್ಲ್ಯಾಕ್‌ರಾಕ್ ಇನ್ವೆಸ್ಟ್‌ಮೆಂಟ್ ಅಡ್ವೈಸರ್ಸ್ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿರುವಾಗ, ಬ್ರೋಕಿಂಗ್ ಘಟಕಕ್ಕೆ ದೊರೆತಿರುವ ಅನುಮೋದನೆಯು ಸುಲಭವಾಗಿ ಸಂಪರ್ಕಿಸಬಹುದಾದ ಮತ್ತು ಡಿಜಿಟಲ್-ಮೊದಲ ಸಲ್ಯೂಷನ್ಸ್ ಮೂಲಕ ಭಾರತದಲ್ಲಿ ಹೂಡಿಕೆಗಳನ್ನು ಎಲ್ಲರಿಗೂ ದೊರೆಯುವಂತೆ ಮಾಡುವ ನಮ್ಮ ಕಾರ್ಯತಂತ್ರಕ್ಕೆ ಮತ್ತೊಂದು ಆಯಾಮವನ್ನು ಸೇರ್ಪಡೆ ಮಾಡುತ್ತದೆ," ಎಂದಿದ್ದಾರೆ.
"ಭಾರತದ ಲಕ್ಷಾಂತರ ಹೂಡಿಕೆದಾರರಿಗೆ ಬಂಡವಾಳ ಮಾರುಕಟ್ಟೆಗಳಿಗೆ ತಂತ್ರಜ್ಞಾನ-ಸಕ್ರಿಯಗೊಳಿಸಿದ ಸಂಪರ್ಕ ಮತ್ತು ಕೈಗೆಟುಕುವ, ನವೀನ ಹೂಡಿಕೆ ಪರಿಹಾರಗಳನ್ನು ಒದಗಿಸಲು ಜಿಯೋಬ್ಲಾಕ್‌ರಾಕ್ ಅನ್ನು ಸ್ಥಾಪಿಸಲಾಗಿದೆ. ಸೆಬಿಯಿಂದ ಈ ಮೂರನೇ ಅನುಮೋದನೆಯು ನಮ್ಮ ಜಂಟಿ ಉದ್ಯಮದ ಆಫರ್ ಗಳ ಶ್ರೇಣಿಯನ್ನು ಪೂರ್ಣಗೊಳಿಸುತ್ತದೆ. ಈ ಮೂರು ಘಟಕಗಳ ಮೂಲಕ ಇದು ಭಾರತೀಯ ಹೂಡಿಕೆದಾರರು ತಮ್ಮ ಹಣಕಾಸಿನ ಗುರಿಗಳತ್ತ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ,” ಎಂದು ಬ್ಲ್ಯಾಕ್‌ರಾಕ್‌ನ ಅಂತರರಾಷ್ಟ್ರೀಯ ಮುಖ್ಯಸ್ಥರಾದ ರಾಚೆಲ್ ಲಾರ್ಡ್ ಹೇಳಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.