ಸಾರ್ವಕಾಲಿಕ ಏರಿಕೆ ಕಂಡ ಚಿನ್ನದ ದರ;ಇನ್ನಷ್ಟು ಏರುತ್ತಾ ಬಂಗಾರದ ಬೆಲೆ? ಈಗ ಖರೀದಿಸೋದಾ, ಕಾದು ನೋಡೋದಾ?

By Suvarna NewsFirst Published Mar 23, 2024, 4:11 PM IST
Highlights

ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ ದಾಖಲಿಸಿದೆ. ಇದು ಚಿನ್ನಪ್ರಿಯರಿಗೆ ಆಘಾತ ಮೂಡಿಸಿದೆ. ಇದು ಮದುವೆ, ಶುಭಸಮಾರಂಭಗಳ ಸೀಸನ್ ಬೇರೆ. ಹೀಗಿರುವಾಗ ಈ ಬೆಲೆ ಹೆಚ್ಚಳದ ಸಂದರ್ಭದಲ್ಲಿ ಚಿನ್ನ ಖರೀದಿಸೋದಾ ಅಥವಾ ಬೇಡ್ವಾ? ಈ ಗೊಂದಲಕ್ಕೆ ಇಲ್ಲಿದೆ ಉತ್ತರ. 

ನವದೆಹಲಿ (ಮಾ.23): ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿದೆ.  24 ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ 68,000ರೂ. ಗಡಿ ದಾಟಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ಇತ್ತೀಚೆಗೆ ಪ್ರಕಟಿಸಿದ ತನ್ನ ವಿತ್ತೀಯ ನೀತಿಯಲ್ಲಿ  ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ 2024ರೊಳಗೆ ಮೂರು ಬಾರಿ ಕಡಿತಗೊಳಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ ಬೆನ್ನಲ್ಲೇ ಚಿನ್ನದ ದರ ಏರಿಕೆಯ ಹಾದಿ ಹಿಡಿದಿದೆ. ಡಾಲರ್  ಮೌಲ್ಯ ಕುಸಿತಕೊಂಡಿರುವ ಕಾರಣ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಡಾಲರ್ ಹಾಗೂ ಚಿನ್ನದ ಬೆಲೆಗೆ ಸಂಬಂಧವಿದೆ. ಡಾಲರ್ ಮೌಲ್ಯದಲ್ಲಿ ಏರಿಕೆಯಾದ್ರೆ ಚಿನ್ನದ ಬೆಲೆ ತಗ್ಗುತ್ತದೆ. ಹಾಗೆಯೇ ಡಾಲರ್ ಮೌಲ್ಯ ಇಳಿಕೆಯಾದ್ರೆ ಚಿನ್ನದ ಬೆಲೆ ಏರಿಕೆಯಾಗುತ್ತದೆ.  ಚಿನ್ನದ ಬೆಲೆಯಲ್ಲಿನ ಭಾರೀ ಏರಿಕೆ ಬಂಗಾರ ಖರೀದಿಸೋರಿಗೆ ಹಾಗೂ ಹೂಡಿಕೆ ಮಾಡೋರಿಗೆ ಆಘಾತ ಮೂಡಿಸಿದೆ. ಈಗ ಮದುವೆ ಸೀಸನ್ ಬೇರೆ. ಭಾರತದಲ್ಲಿ ಮದುವೆ ಸೇರಿದಂತೆ ಶುಭ ಸಮಾರಂಭಕ್ಕೆ ಬಂಗಾರ ಬೇಕೇಬೇಕು. ಇನ್ನು ಇತ್ತೀಚಿನ ದಿನಗಳಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡೋರ ಸಂಖ್ಯೆ ಕೂಡ ಹೆಚ್ಚಿದೆ. ಹೀಗಿರುವಾಗ ಚಿನ್ನದ ಬೆಲೆ ಇನ್ನಷ್ಟು ಏರುತ್ತಾ? ಬೆಲೆ ಹೆಚ್ಚುತ್ತಿರುವ ಈ ಸಮಯದಲ್ಲಿ ಚಿನ್ನ ಖರೀದಿಸಬಹುದಾ ಅಥವಾ ಕಾದು ನೋಡೋ ಉತ್ತಮನಾ?

ಈಗ ಖರೀದಿಸೋದಾ ಅಥವಾ ಕಾದು ನೋಡೋದಾ?
ಚಿನ್ನದ ಬೆಲೆ ಏರಿಕೆಯಾಗಿರುವ ಸಮಯದಲ್ಲಿ ಅದನ್ನು ಖರೀದಿಸಲು ಮಾರುಕಟ್ಟೆ ಟ್ರೆಂಡ್ ಗಳನ್ನು ಅರಿತುಕೊಳ್ಳೋದು ಅಗತ್ಯ. ಹಾಗೆಯೇ ಮುಂದೆ ಎದುರಾಗುವ ಅಪಾಯಗಳನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಕೂಡ ಇರಬೇಕು. ಇನ್ನು ಚಿನ್ನವನ್ನು ನೀವು ಯಾವ ಉದ್ದೇಶಕ್ಕೆ ಖರೀದಿಸುತ್ತೀರಿ ಎನ್ನೋದು ಕೂಡ ಮಹತ್ವ ಪಡೆದುಕೊಳ್ಳುತ್ತದೆ. ಅಂದರೆ ಈಗಾಗಲೇ ತಿಳಿಸಿದಂತೆ ಈಗ ಮದುವೆ ಸೇರಿದಂತೆ ಶುಭ ಸಮಾರಂಭಗಳ ಸೀಸನ್ ಆಗಿರುವ ಕಾರಣ ಇದಕ್ಕಾಗಿ ನೀವು ಚಿನ್ನ ಖರೀದಿಸುತ್ತಿದ್ರೆ ಬೇರೆ ದಾರಿಯಿಲ್ಲ, ಈಗ ಖರೀದಿಸಲೇಬೇಕಾಗುತ್ತದೆ. ಆದರೆ. ಹೂಡಿಕೆ ಉದ್ದೇಶದಿಂದ ಖರೀದಿಸುತ್ತಿದ್ರೆ ಬೆಲೆ ಇಳಿಕೆಯಾಗುತ್ತಾ ಎಂದು ಸ್ವಲ್ಪ ಸಮಯ ಕಾದು ನೋಡುವ ತಂತ್ರ ಬಳಸಬಹುದು. 

ಚಿನ್ನದೊಡವೆಗಳನ್ನು ಮನೆಯಲ್ಲಿಯೋ, ಲಾಕರಲ್ಲಿಯೋ ಇಡುವ ಬದಲು, ಹೀಗೆ ಮಾಡಿ ಕೈತುಂಬಾ ಹಣ ಗಳಿಸಿ!

ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗುತ್ತಾ?
ಈಗಾಗಲೇ ತಿಳಿಸಿದಂತೆ ಚಿನ್ನದ ಬೆಲೆಗೂ ಡಾಲರ್ ಮೌಲ್ಯಕ್ಕೂ ಸಂಬಮಧವಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ಈ ವರ್ಷ ಬಡ್ಡಿದರದಲ್ಲಿ ಮೂರು ಬಾರಿ ಕಡಿತ ಮಾಡುವ ನಿರೀಕ್ಷೆಯಿರುವ ಕಾರಣ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆಯಿದೆ ಅನ್ನೋದು ತಜ್ಞರ ಅಭಿಪ್ರಾಯ. ಜಾಗತಿಕ ಮಾರುಕಟ್ಟೆ ಪರಿಸ್ಥಿತಿ ಗಮನಿಸಿದರೆ 2024ನೇ ಸಾಲಿನಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಈಗಾಗಲೇ ಅನೇಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಕಳೆದ ವರ್ಷ ಉತ್ತಮ ರಿಟರ್ನ್ಸ್ ನೀಡಿದ ಚಿನ್ನ
2023ರಲ್ಲಿ ಚಿನ್ನದ ಬೆಲೆ 63,203ರೂ. ತಲುಪಿದ್ದು, ಹೂಡಿಕೆದಾರರಿಗೆ ಗಮನಾರ್ಹ ಪ್ರಮಾಣದ ಅಂದರೆ ಶೇ.14.88ರಷ್ಟು ರಿಟರ್ನ್ಸ್ ನೀಡಿದೆ. ಕೋವಿಡ್ ಸಮಯದಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದ್ದರೂ ಆ ಬಳಿಕ ಇಳಿಕೆ ದಾಖಲಿಸಿತ್ತು. ಆದರೆ, 2023ರಲ್ಲಿ ಏರಿಕೆಯ ಹಾದಿ ಹಿಡಿದಿತ್ತು. 

ಸಾವರಿನ್ ಗೋಲ್ಡ್ ಬಾಂಡ್ ನಾಲ್ಕನೇ ಸರಣಿ ಇಂದಿನಿಂದ ಪ್ರಾರಂಭ; ಆನ್ ಲೈನ್ ಖರೀದಿ ಹೇಗೆ? ಇಲ್ಲಿದೆ ಮಾಹಿತಿ

ಮಾರುಕಟ್ಟೆ ಅರಿತುಕೊಳ್ಳಿ
ಚಿನ್ನದ ಮೇಲೆ ಹೂಡಿಕೆ ಮಾಡೋರು ಮಾರುಕಟ್ಟೆಯಲ್ಲಿನ ಟ್ರೆಂಡ್ ಗಮನಿಸೋದು ಅಗತ್ಯ. ಯಾವೆಲ್ಲ ಅಂಶಗಳು ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಅರಿಯೋದು ಅಗತ್ಯ. ಜಾಗತಿಕ ಆರ್ಥಿಕಾ ಪರಿಸ್ಥಿತಿಗಳು, ಮಾರುಕಟ್ಟೆ ಪರಿಸ್ಥಿತಿ, ಡಾಲರ್ ಮೌಲ್ಯ ಸೇರಿದಂತೆ ಅನೇಕ ಅಂಶಗಳನ್ನು ಗಮನಿಸೋದು ಅಗತ್ಯ. ಇನ್ನು ಮದುವೆ, ಹಬ್ಬಗಳು ಅಥವಾ ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಚಿನ್ನದ ಬೇಡಿಕೆ ಹೆಚ್ಚಿಸುವ ಕಾರಣ ಬೆಲೆಯಲ್ಲಿ ಏರಿಕೆಯಾಗುತ್ತದೆ ಕೂಡ. ಹೀಗಾಗಿ ಈ ಎಲ್ಲ ಅಂಶಗಳನ್ನು ಗಮನಿಸೋದು ಅಗತ್ಯ. 

click me!