ಚಿನ್ನದೊಡವೆಗಳನ್ನು ಮನೆಯಲ್ಲಿಯೋ, ಲಾಕರಲ್ಲಿಯೋ ಇಡುವ ಬದಲು, ಹೀಗೆ ಮಾಡಿ ಕೈತುಂಬಾ ಹಣ ಗಳಿಸಿ!
ಚಿನ್ನದ ಆಭರಣಗಳನ್ನು ಸುಮ್ಮನೆ ಮನೆಯಲ್ಲಿ ಅಥವಾ ಬ್ಯಾಂಕ್ ಲಾಕರ್ ನಲ್ಲಿಡುವ ಬದಲು ಅದನ್ನು ಹಣದಂತೆ ಠೇವಣಿಯಿಟ್ಟು ಬಡ್ಡಿ ಗಳಿಸಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ.
Business Desk:ಚಿನ್ನಕ್ಕೂ ಭಾರತೀಯ ಹೆಣ್ಣುಮಕ್ಕಳಿಗೂ ಬಿಡಿಸಲಾಗದ ನಂಟು. ಬಂಗಾರದ ಒಡವೆ ಮೈಮೇಲೆಯಿದ್ದರೇನೆ ಹೆಣ್ಣೆಗೆ ಕಳೆ, ಶೋಭೆ ಎಂದು ತಲಾತಲಾಂತರಗಳಿಂದ ನಂಬಿಕೊಂಡು, ಆಚರಿಸಿಕೊಂಡು ಬಂದವರು ನಾವು. ಮದುವೆ, ಮುಂಜಿಯಿಂದ ಹಿಡಿದು ಪ್ರತಿ ಶುಭ ಸಮಾರಂಭಕ್ಕೂ ಹೆಣ್ಣಿಗೆ ಒಡವೆ ಅಲಂಕಾರ ಅಗತ್ಯ. ಭಾರತೀಯರ ಪಾಲಿಗೆ ಚಿನ್ನ ಸಂಪತ್ತಿನ ಕ್ರೋಢೀರಣ ಅಥವಾ ಹೂಡಿಕೆಯ ಸಾಧನ ಮಾತ್ರವಲ್ಲ, ಬದಲಿಗೆ ಅದೊಂದು ಭಾವನೆಯ ಬೆಸುಗೆ. ಅಮ್ಮನಿಗೆ ಅದು ತವರು ಮನೆಯ ನಂಟನ್ನು ನೆನಪಿಸುವ ಗಂಟಾದ್ರೆ, ಮಗಳಿಗೆ ಹೊಸ ಬದುಕಿನ ಘಳಿಗೆಯ ಕಳೆ ಹೆಚ್ಚಿಸುವ ಜೊತೆಗಾರ್ತಿ. ಒಟ್ಟಾರೆ ಮಹಿಳೆಯ ಬಳಿಯಿರುವ ಪ್ರತಿ ಒಡವೆಗೂ ಒಂದು ಕಥೆಯಿರುತ್ತದೆ, ಭಾವನಾತ್ಮಕ ನಂಟೂ ಇರುತ್ತದೆ. ಕೆಲವು ಮಹಿಳೆಯರ ಬಳಿಯಂತೂ ಆಭರಣಗಳ ಖಜಾನೆಯೇ ಇರುತ್ತದೆ. ಹೀಗಾಗಿ ಚಿನ್ನದ ದಾಸ್ತಾನಿನ ವಿಷಯಕ್ಕೆ ಬಂದ್ರೆ ನಮ್ಮದು ಸಮೃದ್ಧ ರಾಷ್ಟ್ರ. ಆದರೆ, ಬಹುತೇಕ ಮಹಿಳೆಯರ ಬಳಿಯಿರುವ ಹೆಚ್ಚಿನ ಚಿನ್ನದ ಆಭರಣಗಳು ಮನೆಯಲ್ಲೋ ಇಲ್ಲವೆ ಬ್ಯಾಂಕ್ ಲಾಕರ್ ಗಳಲ್ಲೂ ಜೋಪಾನವಾಗಿ ಇರುತ್ತವೆ. ಈ ರೀತಿ ಬಳಕೆಯಾಗದೆ ಬಿದ್ದಿರುವ ಚಿನ್ನದಿಂದ ಗಳಿಕೆ ಮಾಡಲು ಸಾಧ್ಯವಿದೆ. ಅದು ಹೇಗೆ?
ಮನೆ ಅಥವಾ ಬ್ಯಾಂಕುಗಳಲ್ಲಿ ನಿಷ್ಕ್ರಿಯವಾಗಿರುವ ಚಿನ್ನವನ್ನು ಬ್ಯಾಂಕ್ ನಲ್ಲಿಟ್ಟು, ಅದರ ಮೌಲ್ಯಕ್ಕೆ ಬಡ್ಡಿ ಪಡೆಯಬಹುದು. ನಿಷ್ಕ್ರಿಯವಾಗಿ ಮನೆಯಲ್ಲಿರೋ ಚಿನ್ನವನ್ನು ಉತ್ಪಾದಕ ಚಟುವಟಿಕೆಗೆ ಬಳಸಿಕೊಳ್ಳೋ ಮೂಲಕ ಭಾರತದ ಬಂಗಾರದ ಆಮದು ಪ್ರಮಾಣ ತಗ್ಗಿಸಲು ಯೋಚಿಸಿದ ಭಾರತ ಸರ್ಕಾರ 2015 ರಲ್ಲಿ ಚಿನ್ನ ನಗದೀಕರಣ ಯೋಜನೆಯನ್ನು (ಜಿಎಂಎಸ್) ಪರಿಚಯಿಸಿದೆ. ಮನೆ, ಸಂಸ್ಥೆಗಳಲ್ಲಿರುವ ಬಳಕೆಯಾಗದ ನಿಷ್ಕ್ರಿಯ ಬಂಗಾರವನ್ನು ಒಟ್ಟುಗೂಡಿಸಿ ಅದನ್ನು ಉತ್ಪಾದಕ ಉದ್ದೇಶಕ್ಕೆ ಬಳಸೋದು ಈ ಯೋಜನೆ ಉದ್ದೇಶ.
ಬೀದಿಬದಿ ವ್ಯಾಪಾರಿಗಳಿಗೆ ವರದಾನ ಪಿಎಂ ಸ್ವನಿಧಿ ಯೋಜನೆ; ಈ ಸಾಲಕ್ಕೆ ಅರ್ಜಿ ಸಲ್ಲಿಸೋದು ಹೇಗೆ?
ಏನಿದು ಚಿನ್ನ ನಗದೀಕರಣ?
ಒಬ್ಬ ವ್ಯಕ್ತಿ ತನ್ನ ಬಳಿ ಯಾವುದೇ ರೂಪದಲ್ಲಿರೋ ಚಿನ್ನ(ಗಟ್ಟಿ, ನಾಣ್ಯ, ಆಭರಣ)ವನ್ನು ಬ್ಯಾಂಕ್‌ನ ಜಿಎಂಎಸ್ ಖಾತೆಯಲ್ಲಿಟ್ಟು, ಅದರ ಮೌಲ್ಯಕ್ಕೆ ಬಡ್ಡಿ ಪಡೆಯಬಹುದು. ಆದ್ರೆ ಆಭರಣದ ಬೆಲೆ ನಿಗದಿಪಡಿಸೋವಾಗ ಅದರಲ್ಲಿರೋ ಹರಳುಗಳು ಹಾಗೂ ಇತರ ಲೋಹಗಳನ್ನು ಪರಿಗಣಿಸೋದಿಲ್ಲ. ಜಿಎಂಎಸ್ ಖಾತೆಯಿಂದ ನೀವು ಗಳಿಸೋ ಬಡ್ಡಿ ಅಥವಾ ಹಣಕ್ಕೆ ಆದಾಯ ತೆರಿಗೆ ವಿನಾಯ್ತಿ ಇದೆ.
ಈ ಯೋಜನೆ ಪ್ರಯೋಜನವೇನು?
ನಿಮ್ಮ ಲಾಕರ್, ಮನೆ ಅಥವಾ ಟ್ರಸ್ಟ್ ನಲ್ಲಿ ಬಳಕೆಯಾಗದೆ ಬಿದ್ದಿರುವ ಚಿನ್ನದ ಮೇಲೆ ಬಡ್ಡಿ ಗಳಿಸಲು ಈ ಯೋಜನೆ ನೆರವು ನೀಡುತ್ತದೆ. ಅಲ್ಲದೆ, ಲಾಕರ್ ಶುಲ್ಕವನ್ನು ಕೂಡ ಉಳಿಸುತ್ತದೆ.
ಕನಿಷ್ಠ ಠೇವಣಿ ಎಷ್ಟು?
ಯಾವುದೇ ಒಂದು ಸಮಯದಲ್ಲಿ ಕನಿಷ್ಠ 10 ಗ್ರಾಂ ಚಿನ್ನದ ಬಾರ್ ಗಳು, ನಾಣ್ಯಗಳು ( ಹರಳುಗಳು ಹಾಗೂ ಇತರ ಲೋಹಗಳನ್ನು ಹೊರತುಪಡಿಸಿ ) ಠೇವಣಿ ಇಡಬೇಕು.
ಗರಿಷ್ಠ ಠೇವಣಿ ಎಷ್ಟು?
ಈ ಯೋಜನೆಯಡಿ ಠೇವಣಿಯಿಡಲು ಯಾವುದೇ ಗರಿಷ್ಠ ಮಿತಿಯಿಲ್ಲ.
ಈ ಯೋಜನೆಯಡಿ ಇರುವ ಠೇವಣಿಗಳು
ಕಿರು ಅವಧಿಯ ಬ್ಯಾಂಕ್ ಠೇವಣಿ (1-3 ವರ್ಷಗಳ ಅವಧಿ), ಮಧ್ಯಮ ಅವಧಿ ಸರ್ಕಾರಿ ಠೇವಣಿ (5-7 ವರ್ಷಗಳ ಅವಧಿ) ಹಾಗೂ ದೀರ್ಘಾವಧಿ ಸರ್ಕಾರಿ ಠೇವಣಿ (12-15 ವರ್ಷಗಳ ಅವಧಿ).
ವಿಶ್ವಕರ್ಮ ಕೌಶಲ್ಯ ಅಭಿವೃದ್ಧಿ ಯೋಜನೆ: ಸಾಲಕ್ಕೆ ಶೇ.5 ಬಡ್ಡಿ
ಬಡ್ಡಿದರ ಎಷ್ಟಿದೆ?
ಚಿನ್ನ ನಗದೀಕರಣ ಯೋಜನೆಯಡಿ ಕಿರು ಅವಧಿ ಠೇವಣಿಗೆ ಬ್ಯಾಂಕ್ ಗಳು ಬಡ್ಡಿ ನಿಗದಿಪಡಿಸುತ್ತವೆ. ಇನ್ನು ಮಧ್ಯಮ ಅವಧಿ ಠೇವಣಿಗೆ ಶೇ.2.25ರಷ್ಟು ಬಡ್ಡಿ ನೀಡಲಾಗುತ್ತದೆ. ದೀರ್ಘಾವಧಿ ಠೇವಣಿಗೆ ಶೇ.2.50ರಷ್ಟು ಬಡ್ಡಿದರವಿದೆ.
ಸಾಲ ಪಡೆಯಲು ಅವಕಾಶ
ಈ ಠೇವಣಿಯ Collateral ಪ್ರಮಾಣಪತ್ರವನ್ನು ಬ್ಯಾಂಕುಗಳಿಂದ ಪಡೆದು ಅದರ ಮೇಲೆ ಹೂಡಿಕೆದಾರರು ಸಾಲವನ್ನು ಕೂಡ ಪಡೆಯಲು ಅವಕಾಶ ಕಲ್ಪಿಸಲಾಗಿದೆ.