ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ನಿರ್ದಿಷ್ಟ ಆದಾಯ ಗಳಿಸಬಹುದು. ಈ ಯೋಜನೆಯಡಿ ಪ್ರತಿ ತಿಂಗಳು 9000ರೂ. ಆದಾಯ ಗಳಿಸಲು ಎಷ್ಟು ಹೂಡಿಕೆ ಮಾಡ್ಬೇಕು? ಇಲ್ಲಿದೆ ಮಾಹಿತಿ.
Business Desk:ನಿವೃತ್ತಿ ಜೀವನದ ಬಗ್ಗೆ ಉದ್ಯೋಗ ಸಿಕ್ಕ ತಕ್ಷಣವೇ ಯೋಚಿಸುವಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಭವಿಷ್ಯಕ್ಕೆ ಈಗಲೇ ಉಳಿತಾಯ ಮಾಡದಿದ್ರೆ ಆ ನಂತರ ಪಶ್ಚತ್ತಾಪ ಪಡಬೇಕಾಗಬಹುದು. ನಿವೃತ್ತಿ ಜೀವನಕ್ಕಾಗಿ ಹೂಡಿಕೆ ಮಾಡಲು ಬಯಸೋರಿಗೆ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್) ಅತ್ಯುತ್ತಮ ಆಯ್ಕೆ. ಅಂಚೆ ಕಚೇರಿಯಲ್ಲಿನ ಯೋಜನೆಗಳು ಸರ್ಕಾರದ ಬೆಂಬಲ ಹೊಂದಿರುವ ಕಾರಣ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುವ ಜೊತೆಗೆ ಉತ್ತಮ ರಿಟರ್ನ್ಸ್ ಕೂಡ ಸಿಗುತ್ತದೆ. ಅಲ್ಲದೆ, ನಿವೃತ್ತಿ ಬಳಿಕ ಪ್ರತಿ ತಿಂಗಳು ನಿಗದಿತ ಆದಾಯ ಕೂಡ ಸಿಗುತ್ತದೆ. ಇನ್ನು ನೀವು ನಿಮ್ಮ ಸಂಗಾತಿಯ ಜೊತೆಗೆ ಪಿಒಎಂಐಎಸ್ ಜಂಟಿ ಖಾತೆ ಕೂಡ ತೆರೆಯಬಹುದು. ಇನ್ನು ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ನಿವೃತ್ತಿ ಬಳಿಕ ಪ್ರತಿ ತಿಂಗಳು ನಿಗದಿತ ಆದಾಯ ಗಳಿಸಬಹುದು. ಪ್ರಸ್ತುತ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ವಾರ್ಷಿಕ ಶೇ.7.4ರಷ್ಟು ಬಡ್ಡಿದರವಿದೆ.
ಪ್ರತಿ ತಿಂಗಳು 9,000ರೂ. ಪಡೆಯೋದು ಹೇಗೆ?
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ (ಪಿಒಎಂಐಎಸ್) ನೀವು 9ಲಕ್ಷ ರೂ. ಹೂಡಿಕೆ ಮಾಡಿದರೆ ಪ್ರತಿ ತಿಂಗಳು 9,250ರೂ. ಗಳಿಸಬಹುದು. ಇನ್ನು ಒಂದು ವೇಳೆ ನೀವು ನಿಮ್ಮ ಸಂಗಾತಿ ಜೊತೆಗೆ ಜಂಟಿ ಖಾತೆ ಹೊಂದಿದ್ದರೆ ಒಟ್ಟು 15ಲಕ್ಷ ರೂ. ಹೂಡಿಕೆ ಮಾಡಿದರೆ ಪ್ರತಿ ತಿಂಗಳು 9,250ರೂ. ಗಳಿಸಬಹುದು. ನೀವು ಸಂಗಾತಿ ಜೊತೆಗೆ ಸೇರಿ 15ಲಕ್ಷ ರೂ. ಹೂಡಿಕೆ ಮಾಡಿದರೆ ನಿಮಗೆ 1,11,000ರೂ. ಬಡ್ಡಿ ಸಿಗಲಿದೆ. ಇನ್ನು ನೀವು ಹೂಡಿಕೆ ಮಾಡಿದ ಬರೀ ಒಂದು ತಿಂಗಳ ಬಳಿಕ ಹಣ ಪಡೆಯಲು ಪ್ರಾರಂಭಿಸಬಹುದು ಕೂಡ. ಇನ್ನು ಮೆಚ್ಯೂರಿಟಿ ಅವಧಿ ಮುಗಿದ ಬಳಿಕ ಪ್ರಧಾನ ಮೊತ್ತವನ್ನು ವಿತ್ ಡ್ರಾ ಮಾಡಬಹುದು ಕೂಡ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಬಗ್ಗೆ ನಿಮಗೆಷ್ಟು ಗೊತ್ತು? ಅಂಚೆ ಕಚೇರಿಯಲ್ಲಿ ಓಪನ್ ಮಾಡೋದು ಹೇಗೆ ನೋಡಿ..!
ಗರಿಷ್ಠ ಠೇವಣಿ ಎಷ್ಟು?
ಈ ಯೋಜನೆಯ ಠೇವಣಿ ಮಿತಿಯನ್ನು ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಳ ಮಾಡಲಾಗಿದೆ. ಈ ಯೋಜನೆಯಲ್ಲಿ ಒಂದೇ ಖಾತೆ ಹೊಂದಿರೋರಿಗೆ ಗರಿಷ್ಠ ಠೇವಣಿ ಮಿತಿಯನ್ನು 4.5ಲಕ್ಷ ರೂ.ನಿಂದ 9ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಜಂಟಿ ಖಾತೆಗೆ 9ಲಕ್ಷ ರೂನಿಂದ 15 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.
ಮೆಚ್ಯುರಿಟಿ ಅವಧಿ ಎಷ್ಟು?
ಎಂಇಎಸ್ ಖಾತೆಯನ್ನು ತೆರೆದ ಐದು ವರ್ಷಗಳ ಬಳಿಕ ಕ್ಲೋಸ್ ಮಾಡಬಹುದದಾಗಿದೆ. ಸಂಬಂಧಪಟ್ಟ ಅಂಚೆ ಕಚೇರಿಗೆ ಅಗತ್ಯ ಅರ್ಜಿ ಹಾಗೂ ಪಾಸ್ ಪುಸ್ತಕ ಸಲ್ಲಿಕೆ ಮಾಡುವ ಮೂಲಕ ಖಾತೆಯನ್ನು ಕ್ಲೋಸ್ ಮಾಡಬಹುದು. ಒಂದು ವೇಳೆ ಖಾತೆ ಮೆಚ್ಯುರ್ ಆಗುವ ಮುನ್ನ ಖಾತೆದಾರ ಸಾವನ್ನಪ್ಪಿದರೆ ಆತ ಅಥವಾ ಆಕೆಯ ನಾಮಿನಿ ಅಥವಾ ಕಾನೂನುಬದ್ದ ಉತ್ತರಾಧಿಕಾರಿಗೆ ಹಣವನ್ನು ರೀಫಂಡ್ ಮಾಡಲಾಗುವುದು. ರೀಫಂಡ್ ಮಾಡುವುದಕ್ಕೆ ಒಂದು ತಿಂಗಳು ಬಾಕಿಯಿರುವ ತನಕ ಬಡ್ಡಿ ನೀಡಲಾಗುತ್ತದೆ. ಇನ್ನು ಅವಧಿಗೂ ಮುನ್ನ ಖಾತೆಯನ್ನು ಕ್ಲೋಸ್ ಮಾಡುವ ಅವಕಾಶ ಕೂಡ ನೀಡಲಾಗಿದೆ.
ಖಾತೆ ತೆರೆದ ಒಂದು ವರ್ಷದ ಬಳಿಕ ನಿಮ್ಮ ಹೂಡಿಕೆಯನ್ನು ವಿತ್ ಡ್ರಾ ಮಾಡಲು ಅವಕಾಶ ನೀಡಲಾಗಿದೆ. ಒಂದು ವೇಳೆ ನೀವು ಮೊದಲ ಮೂರು ವರ್ಷಗಳೊಳಗೆ ಹಣ ವಿತ್ ಡ್ರಾ ಮಾಡಲು ಬಯಸಿದರೆ ಠೇವಣಿ ಮೊತ್ತದ ಮೇಲೆ ಶೇ.2ರಷ್ಟು ದಂಡ ವಿಧಿಸಲಾಗುತ್ತದೆ. ಇನ್ನು ಮೂರು ವರ್ಷಗಳ ಬಳಿಕ ನೀವು ನಿಮ್ಮ ಹಣವನ್ನು ಕೇವಲ ಶೇ.1ರಷ್ಟು ಕಡಿತದ ಜೊತೆಗೆ ವಿತ್ ಡ್ರಾ ಮಾಡಬಹುದು.
ಅಂಚೆ ಕಚೇರಿ ಉಳಿತಾಯ ಖಾತೆಗೆ ಸಂಬಂಧಿಸಿದ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಜಂಟಿ ಖಾತೆದಾರರ ಸಂಖ್ಯೆ ಹೆಚ್ಚಳ
ಪಿಒಎಂಐಎಸ್ ಪ್ರಯೋಜನಗಳು
*ಪ್ರತಿ ತಿಂಗಳು ನಿಗದಿತ ಆದಾಯ ಗಳಿಸಬಹುದು
*ಸ್ಥಿರ ಠೇವಣಿ (ಎಫ್ ಡಿ) ಹಾಗೂ ಇತರ ಸ್ಥಿರ ಆದಾಯ ಆಯ್ಕೆಗಳಿಗೆ ಹೋಲಿಸಿದರೆ ಅಧಿಕ ಬಡ್ಡಿದರ
*ಕೇವಲ 1,000ರೂ. ಹೂಡಿಕೆಯಿಂದಲೂ ಈ ಯೋಜನೆ ಪ್ರಾರಂಭಿಸಬಹುದು.
*ಐದು ವರ್ಷಗಳ ಮೆಚ್ಚಯೂರಿಟಿ ಅವಧಿ ಬಳಿಕ ನೀವು ಆ ಹಣವನ್ನು ಮತ್ತೆ ಕೂಡ ಮರುಹೂಡಿಕೆ ಮಾಡಬಹುದು.